ತಾಯಿ ಯಲ್ಲಮ್ಮನ ನೆಲದಲ್ಲಿ ಕಾವ್ಯಶಕ್ತಿಯ ಆರಾಧನೆ
ಸವದತ್ತಿ: ತಾಯಿ ಯಲ್ಲಮ್ಮನ ಪುಣ್ಯಭೂಮಿಯಲ್ಲಿ ಈ ಹೊತ್ತು ಕಾವ್ಯಶಕ್ತಿಯ ಆರಾಧನೆ ನಡೆದಿದೆ. ಕವಿತೆಗಳು ವ್ಯವಸ್ಥೆಯನು ಎಚ್ಚರಿಸುವುದರ ಜೊತೆಗೆ ಅರಾಜಕತೆಯನ್ನು ತೊಡೆದು ಹಾಕುವ ಕೆಲಸ ಮಾಡುತ್ತವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ನುಡಿದರು.
ಅವರು ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ ಆಯೋಜಿಸಿದ್ದ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಸನ್ನಿವೇಶಗಳಲ್ಲಿ ಲಾಬಿ, ವಸೂಲಿಗಳಿಂದ ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸಹೃದಯ ಕಾವ್ಯ ಪ್ರಶಸ್ತಿ ತನ್ನ ಪಾರದರ್ಶಕತೆಯಿಂದ ವಿಭಿನ್ನವಾಗಿ ಗುರುತಿಸಿಕೊಂಡು ನಾಡಿನಾದ್ಯಂತ ಹೆಸರು ಮಾಡಿದೆ. ಪ್ರತಿಷ್ಠಾನ ಯಾವುದೇ ಶಿಫಾರಸಿಗೆ ಮಣಿಯದೆ ಸೂಕ್ತವಾದ ಕೃತಿಗಳನ್ನು ಆಯ್ಕೆ ಮಾಡುವ ಮೂಲಕ ಕರ್ನಾಟಕದ ಎಲ್ಲ ಸಂಘ ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿದೆ. ಈ ಎರಡು ಕೃತಿಗಳ ಆಯ್ಕೆ ನನಗಂತೂ ಖುಷಿ ಕೊಟ್ಟಿದೆ. ಕವಿತೆ ಯಾವ ಮುಲಾಜಿಗೂ ಒಳಗಾಗದೆ ನಿರ್ಬಿಢೆಯಿಂದ ಕಾವ್ಯ ಕಟ್ಟಿದಾಗ ಬಹುಮಾನ, ಸಮ್ಮಾನಗಳು ಒಲಿದು ಬರಲು ಸಾಧ್ಯ. ರಾಜ್ಯದ ಎಲ್ಲ ದಿಕ್ಕುಗಳಿಂದ ಪ್ರತಿಭಾವಂತ ಕವಿಗಳನ್ನು ಬರುವಂತೆ ಮಾಡಿರುವುದು ಪ್ರತಿಷ್ಠಾನದ ಶ್ಲಾಘನೀಯ ಕಾರ್ಯ. ಕಾವ್ಯ ಎನ್ನುವುದು ನಮ್ಮನ್ನೆಲ್ಲ ಹಿಡಿದಿಡುವ ಸಮ್ಮೋಹನ ಶಕ್ತಿ ಎಂದು ಅವರು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ. ಬಸು ಬೇವಿನಗಿಡದ ಸವದತ್ತಿಯ ನೆಲದಲ್ಲಿ ನಾಗೇಶ ನಾಯಕ ಹುಟ್ಟು ಹಾಕಿದ ಸಹೃದಯ ಸಾಹಿತ್ಯ ಪ್ರತಿಷ್ಠಾನ ನಾಡಿನುದ್ದಗಲಕ್ಕೂ ಪಸರಿಸಿದೆ ಎಂಬುದಕ್ಕೆ ಮೂರು ವರ್ಷಗಳಿಂದ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿ ಪ್ರಶಸ್ತಿ ಪಡೆದುಕೊಳ್ಳುತ್ತಿರುವ ಕವಿಗಳೇ ಉದಾಹರಣೆ. ಕಾವ್ಯಕ್ಕಾಗಿಯೇ ಮೀಸಲಾಗಿರಿಸಿದ ಈ ಪುರಸ್ಕಾರ ಯುವಪ್ರತಿಭೆಗಳನ್ನು ನೀರೆರೆದು ಪೋಷಿಸುವ ಕಾರ್ಯ ಮಾಡುತ್ತಿದೆ. ಪ್ರಶಸ್ತಿ ಎನ್ನುವುದು ಇಂದು ಉದ್ಯಮವಾಗಿರುವ ಸಂದರ್ಭದಲ್ಲಿ ಒಂದು ಚಿಕ್ಕ ಪಟ್ಟಣದಲ್ಲಿ ಪ್ರಾಮಾಣಿಕವಾಗಿ ಕರೆದು ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸದ ಸಂಗತಿ. ಅದಮ್ಯ ಕಾವ್ಯಪ್ರೀತಿಯ ನಾಗೇಶ ಜೆ. ನಾಯಕ ಕವಿ ಪೂಜೆ ಮಾಡುತ್ತಿಲ್ಲ, ಕಾವ್ಯಪೂಜೆ ಮಾಡುತ್ತಿದ್ದಾರೆ. ಪುಟ್ಟ ಪ್ರಶಸ್ತಿಗಳ ಹಿಂದೆ ಯಾವ ದುರುದ್ಧೇಶವೂ ಇರುವುದಿಲ್ಲ. ನಿರ್ಮಲ ಮನಸ್ಸಿನಿಂದ ನೀಡುತ್ತಿರುವ ಈ ಪ್ರಶಸ್ತಿ ಚಿರಕಾಲ ಉಳಿಯಲಿ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರತ್ನಾ ಕದಮ್ ಮಾತನಾಡಿ, ವಸತಿ ನಿಲಯದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮ್ಮ ಸೌಭಾಗ್ಯ. ನಿಲಯದ ಮಕ್ಕಳು ಕನ್ನಡ ಭುವನೇಶ್ವರಿಯ ವರದಾನ ಪಡೆದ ಕವಿಗಳು, ಸಾಹಿತಿಗಳನ್ನು ಕಣ್ಣಾರೆ ಕಂಡು, ಅವರ ಮಾತು ಕೇಳಿ ಸ್ಫೂರ್ತಿ ಪಡೆಯುವ ಸದವಕಾಶವನ್ನು ಒದಗಿಸಿಕೊಟ್ಟ ಪ್ರತಿಷ್ಠಾನಕ್ಕೆ ಇಲಾಖೆ ವತಿಯಿಂದ ಕೃತಜ್ಞತೆ ಸಲ್ಲಿಸುವೆ ಎಂದು ನುಡಿದರು.
ತೀರ್ಪುಗಾರರಾದ ಡಾ. ಸಿ. ಕೆ. ನಾವಲಗಿ ಸ್ಥೂಲವಾಗಿ ಪ್ರಶಸ್ತಿ ಕೃತಿಗಳ ಒಳನೋಟ ಪರಿಚಯಿಸಿದರು. ಪ್ರತಿಷ್ಠಾನಕ್ಕೆ ಆರ್ಥಿಕ ನೆರವು ನೀಡಿದ ವಿಠಲ ತಡಸಲೂರು ಸಾಹಿತ್ಯದ ಅಳಿಲು ಸೇವೆಯಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದರು. ಸವಿರಾಜ್ ಆನಂದೂರು, ಡಾ. ದಸ್ತಗೀರ್‍ಸಾಬ್ ದಿನ್ನಿ ಅವರಿಗೆ ತಲಾ 5000. ರೂ ನಗದು ಬಹುಮಾನ, ಪ್ರಶಸ್ತಿ ಫಲಕದೊಂದಿಗೆ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ನಾಡು-ನುಡಿ ಸೇವೆಗೈದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಎಮ್. ಡಿ. ಬಾವಾಖಾನ್, ಗಂಗಾ ಚಕ್ರಸಾಲಿ, ಶಿವರಾಜ್ ಅರಳಿ, ಸೌಮ್ಯ ಕೋಟಗಿ, ಮಂಜುನಾಥ ಸಿಂಗನ್ನವರ, ಎಫ್. ಎಲ್. ಮದಹಳ್ಳಿ, ವೈ. ಬಿ. ಕಡಕೋಳ, ಆನಂದ ಏಣಗಿ, ಬಿ. ಎಮ್. ಬಾವಾಖಾನ್, ಚನಬಸಯ್ಯ ಪೂಜೇರ, ಬಸವರಾಜ ಪತ್ತಾರ ಕವಿತೆ ವಾಚಿಸಿದರು. ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮುಖ್ಯ ಅತಿಥಿ, ನಿಲಯ ಪಾಲಕ ಹಾಶೀಮ್ ತಹಶೀಲದಾರ್, ಹಾಗೂ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು. ಎಮ್. ಪಿ. ಪಾಟೀಲ ನಿರೂಪಿಸಿದರು. ಪ್ರವೀಣ ಶೆಟ್ಟೆಪ್ಪನವರ ಸ್ವಾಗತಿಸಿದರು. ಎಸ್. ಬಿ. ಗರಗದ ಗ್ರಂಥ ಸಮರ್ಪಣೆ ಮಾಡಿದರು. ರಮೇಶ್ ತಳವಾರ ವಂದಿಸಿದರು.