ಅಳಿವಿನಂಚಿಗೆ ಬಂತು ಅಳತೆಗೋಲು
ಸೊಲಗಿ ಅದ್ದನಗಿ ಗಿದ್ದನಗಿ ಕೊಳವಿ
ಮೊದಲಿನವ್ರು ಧಾನ್ಯ ಇದರಾಗ ಅಳದೀವಿ
ಉಬ್ಬಲೇರಿ ಅಳದು ಕೊಡತಿದ್ರ ಆವಾಗ
ಅಳಿಯುವಾಗ ತೆಲಿಮ್ಯಾಲ ಇರ್ಬೇಕ ಸೆರಗ
ಕೊಳವಿ ಜ್ವಾಳಾ ಕೊಟ್ಟು ಪಾವ ಮೊಸರು ತಂದು
ನಲಿವ ಕಾಲವದು ಬರೀ ಕನಸಾಯ್ತು ಇಂದು
ಒಲೆಯ ಮೇಲಿನ ಅಡಿಗೆ ನೆನೆವೆನಡಿಗಡಿಗೆ
ತೊಲೆಯ ಜಂತಿಯ ಮನೆಯು ಸಿಗುತಿಲ್ಲ ನಮಗೆ
ಮುಳುಗುತಿವೆ ಎಲ್ಲವೂ ದಿನದಿಂದ ದಿನಕ್ಕೆ
ಮೊಳ ಮೊಲ್ಲೆ ದರ ಹಾರುತಿದೆ ಆಗಸಕ್ಕೆ
ಹೊಳೆವ ಚೆಂದಿರ ನಕ್ಕ ಇಳೆಯ ಈ ಪರಿ ಕಂಡು
ಅಳಿವಿನಂಚಿಗೆ ಇಹವು ಜೇನ್ನೊಣಗಳ ದಂಡು
ಎಲ್ಲವೂ ಕೃತಕವೇ ಧನ ಧಾನ್ಯ ಕ್ಷೀರ
ಮೆಲ್ಲಗೆ ನಶಿಸುತಿದೆ ಚರಾಚರ ಪೂರ
ಎಲ್ಲಿಗೋಗಿ ತಲುಪುವುದೋ ಗೊತ್ತಿಲ್ಲ ಹಿಂಗೆ
ಮೆಲ್ಲ ಧರೆಗಿಳಿಯಪ್ಪ ಓ ದೇವ ತಂದೆ.
ಶ್ರೀಮತಿ ಕಮಲಾಕ್ಷಿ ಕೌಜಲಗಿ, ಬೆಂಗಳೂರು