ಮೂಡಲಗಿ: ಸರಕಾರಿ ಶಾಲೆಗಳಲ್ಲಿ ಅಕ್ಷರದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಗಳಂಥ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಬಡವರಿಗೆ ಕೂಲಿ ಕಾರ್ಮಿಕ ಮಕ್ಕಳಿಗೆ ಹಸಿವು ನೀಗಿಸಿ ಅವರಿಗೆ ಶಿಕ್ಷಣ ಪಡೆಯಲು ಅನುಕೂಲವಾಗಿದೆ ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದಿಂದ ಕೊಡಮಾಡಿದ ಅಕ್ಷರದಾಸೋಹದ ಕೆನೆಭರಿತ ಹಾಲಿನ ಪೌಡರನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ನಮ್ಮ ತುಕ್ಕಾನಟ್ಟಿ ಸರಕಾರಿ ಶಾಲೆಯಲ್ಲಿ ಸರಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಕಾರಣ ವಿದ್ಯಾರ್ಥಿಗಳು ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಶಾಲೆಯ ಮುಖ್ಯ ಶಿಕ್ಷಕ ಎ.ವಿ ಗಿರೆಣ್ಣವರ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಹಲವಾರು ಯೋಜನೆಗಳನ್ನು ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ಪರಿಸ್ಥಿತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಹಾಗೂ ಗುಣಮಟ್ಟದ ಶಿಕ್ಷಣವನ್ನು ಕೊಡುತ್ತಿರುವದರಿಂದ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹಾಜರಾತಿ ಹೆಚ್ಚಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಪುಂಡಲೀಕ ಬಾಗೇವಾಡಿ, ಸುನಂದಾ ಭಜಂತ್ರಿ, ವೆಂಕಪ್ಪಾ ಗೋಡಿ, ಸತ್ತೆಪ್ಪಾ ಮಲ್ಲಾಪೂರ ಸೋಮು, ಹುಲಕುಂದ, ರವಿ ಗದಾಡಿ, ತಿಪ್ಪಣ್ಣಾ ಹುಲಕುಂದ, ಗಂಗಾರಾಮ ಹಮ್ಮನವರ ಭೀಮಶಿ ಅರಬಾಂವಿ ಹಾಗೂ ಶಿಕ್ಷಕರು ಅಡುಗೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 700 ವಿದ್ಯಾರ್ಥಿಗಳಿಗೆ ಕೆನೆಭರಿತ ಹಾಲಿನ ಪೌಡರನ್ನು ವಿತರಿಸಲಾಯಿತು.
ಶಿಕ್ಷಕ ಮಹಾದೇವ ಗೋಮಾಡಿ ನಿರೂಪಿಸಿದರು. ಮಂಜುನಾಥ ಕಮ್ಮಾರ ವಂದಿಸಿದರು.