“ಸಾಧನೆ ಎಂಬುದು ಯಾರ ಸೊತ್ತು ಅಲ್ಲ” ಎಂಬುದನ್ನು ಅನೇಕ ಘಟನೆಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವದನ್ನು ನಾವು ಆಗಾಗ ಸುದ್ದಿ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಬದುಕೆಂಬುದು ನಿರಂತರ ಹೋರಾಟವೆಂದು ತಿಳಿದು ಹಗಲಿರುಳು ಶ್ರಮವಹಿಸಿ ಬದುಕುತ್ತಿರುವರರನ್ನು ನೋಡಿ ನಾವು ಪಾಠ ಕಲಿಯಬೇಕಾದದ್ದು ಬಹಳಷ್ಟಿದೆ. ಅಂತಹ ಗ್ರಾಮೀಣ ಬದುಕಿನ ಹಿನ್ನೆಲೆಯಿಂದ ಬಂದ ಸಾಧಕಿಯ ಬಗ್ಗೆ ತಿಳಿದು ನಮ್ಮ ಬದುಕಿಗೆ ಸ್ಪೂರ್ತಿಯ ಚಿಲುಮೆ ಉಕ್ಕಿಸಲು ಪ್ರಯತ್ನಿಸೋಣ.
ಗಂಡು ಮೆಟ್ಟಿದ ನಾಡು ಬೆಳಗಾವಿ ಜಿಲ್ಲೆಯಲ್ಲಿ ಸಂಗೊಳ್ಳಿ ರಾಯಣ್ಣನಂತವರು ಮಾತ್ರವಲ್ಲ ಕಿತ್ತೂರ ಚೆನ್ನಮ್ಮನಂತಹ ಅನೇಕ ಸ್ತ್ರೀ ಸಿಂಹಿಣಿಗಳು ಇಲ್ಲಿ ಬದುಕಿ ಬಾಳುತ್ತಿವೆ ಎನ್ನುವದಕ್ಕೆ ಆಗಾಗ ಇಲ್ಲಿನವರು ಮಾಡಿರುವ ಮತ್ತು ಮಾಡುತ್ತಿರುವ ಅಪರೂಪದ ಸಾಧನೆಗಳೇ ಸಾಕ್ಷಿ. ಕೇವಲ ಪುರುಷರಿಗೆ ಮಾತ್ರ ಸೀಮಿತವಾದ ಬಿ.ಎಸ್.ಎಫ್ (ಗಡಿ ಭದ್ರತಾ ಪಡೆ) ಸೇನೆಗೆ ಸೇರಿದ ಮಹಿಳಾ ವೀರಮಣಿಯೊಬ್ಬಳ ಅಪರೂಪದ ಸಾಧನೆ. ಇಂತಹ ಅಪರೂಪದ ಸಾಧನೆಗೈದ ವೀರಮಹಿಳೆಯೆಂದರೆ ಚಿಕ್ಕೋಡಿಯ ಕುಗ್ರಾಮದ ಡೊಣವಾಡ ಗ್ರಾಮದ ಯುವತಿ ಪ್ರಜಕ್ತಾ ಮಾಳಿ.
ಇಪ್ಪತ್ತೊಂದನೇ ಶತಮಾನದಲ್ಲಿ ಕಾಲಿಡುತ್ತಿರುವ ನಾವುಗಳೆಲ್ಲಾ ಇಂದಿಗೂ ಸ್ತ್ರೀ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿಲ್ಲ. ಕೇವಲ ಅಡುಗೆ, ಮನೆ, ಮಕ್ಕಳು ಸಂಸಾರ ಇದರಲ್ಲಿಯೇ ಇಡೀ ಜೀವನ ಕಳೆಯುತ್ತಿರುವ ಅವರ ಬದುಕಿಗೆ ಸ್ಪೂರ್ತಿ ತುಂಬಿದ ಸೂರ್ಯರತ್ನವೆಂದರೆ ಪ್ರಜಕ್ತಾ ಮಾಳಿ.
ಪ್ರಜಕ್ತಾರವರ ಬದುಕಿನ ಪುಟಗಳನ್ನು ತೆರೆದು ನೋಡಿದಾಗ ಅಲ್ಲಿ ಕಾಣುವದು ಬರಿ ನೋವುಗಳು ಮಾತ್ರ. ಆ ನೋವುಗಳನ್ನೇ ಬದುಕಿನ ಗಾಲಿಗಳನ್ನಾಗಿಸಿ ಛಲಬಿಡದೆ ಹಿಡಿದ ಹಟ ಸಾಧಿಸಿದ ಛಲಗಾರ್ತಿ. ಬದುಕಿನ ನೊಗ ಹೊತ್ತ ಅಪ್ಪ ಒಬ್ಬ ಸಾಮಾನ್ಯ ಖಾಸಗಿ ಟ್ರಕ್ ಚಾಲಕ. ಎರಡು ಹೆಣ್ಣು ಮತ್ತು ಒಂದು ಗಂಡು ಮಕ್ಕಳ ತುಂಬು ಸಂಸಾರದಲ್ಲಿ ಹಿರಿಯವಳೇ ಪ್ರಜಕ್ತಾ. ಒಂದಿಂಚೂ ಭೂಮಿಯಿಲ್ಲದ ಇವರ ಹೊಟ್ಟೆ ತುಂಬುತ್ತಿದ್ದುದು ಅವರ ಅಪ್ಪನ ಕನಿಷ್ಠ ದುಡಿಮೆಯ ಮೇಲೆ ಮಾತ್ರ. ಕೂಲಿ ನಾಲಿ ಮಾಡಿ ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ ತಂದೆ ತಾಯಿಗಳ ಪಾತ್ರವೇನೂ ಕಡಿಮೆಯೇನಿಲ್ಲ.
ಬಾಲ್ಯದಿಂದಲೂ ಓದಿನಲ್ಲಿ ಹಾಗೂ ಆಟಪಾಠಗಳಲ್ಲಿ ತುಂಬಾ ಚುರುಕಾದ ಈ ಬಾಲಕಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯನ್ನು ಡಿ.ಎಸ್.ನಾಡಗೆ ಕಾಲೇಜ್ ಕಾರಡಗಾದಲ್ಲಿ ಪೂರೈಸಿ ಉನ್ನತ ವ್ಯಾಸಂಗಕ್ಕಾಗಿ ಆಯ್ದುಕೊಂಡ ಕಾಲೇಜೆಂದರೆ ನಮ್ಮ ಮೂಡಲಗಿಯ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜು. ಇಲ್ಲಿ ಬಿ.ಕಾಂ. ಪದವಿಗೆ ಪ್ರವೇಶಾತಿ ಪಡೆದು ಇಲ್ಲಿನ ಪ್ರಾಧ್ಯಾಪಕರ ಪ್ರೋತ್ಸಾಹದಿಂದ ಶ್ರದ್ಧೆಯಿಂದ ಓದಿ ಬಿ.ಕಾಂ.ಪದವಿಯಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಪದವಿ ಪೂರೈಸಿದಳು. ಅದರ ಜೊತೆಜೊತೆಗೆ ಬಿ.ಎಸ್.ಎಫ್ ಹುದ್ದೆ ಸೇರಲು ನಿರಂತರ ಅಭ್ಯಾಸವನ್ನು ಮಾಡುತ್ತಿದ್ದಳು.
ಮಹಾವಿದ್ಯಾಲಯದಲ್ಲಿ ಇಂತಹ ಅನೇಕ ಪ್ರತಿಭೆಗಳನ್ನು ಗುರುತಿಸಿ ಮುನ್ನೆಲೆಗೆ ತಂದು ಅವರ ಬಾಳಿಗೆ ಸ್ಪೂರ್ತಿತುಂಬುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ. ಮುಂದೆಯೂ ನಡೆಸುತ್ತದೆ. ವಿದ್ಯಾರ್ಥಿನಿಯ ಸಾಧನೆಯನ್ನು ಪ್ರಾಚಾರ್ಯರು, ಎಲ್ಲಾ ಬೋಧಕ ಸಿಬ್ಬಂದಿಯವರು ಹಾಗೂ ಸಿ.ಡಿ.ಸಿ ಸದಸ್ಯರು ಅಭಿನಂದಿಸಿದ್ದಾರೆ.
ಅನ್ನ ನೀಡುವ ರೈತ, ವಿದ್ಯೆ ನೀಡುವ ಶಿಕ್ಷಕ, ದೇಶ ಕಾಯುವ ಸೈನಿಕ ಇವು ಮೂರು ಪವಿತ್ರ ಕಾರ್ಯಗಳೆಂದು ಭಾವಿಸುವ ನಮ್ಮ ನಾಡಿನಲ್ಲಿ ದೇಶ ಕಾಯುವ ಸೈನಿಕರೆಂದರೆ ಬಹಳ ಹೆಮ್ಮೆ. ದೇಶವನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಬೇಕೆಂಬ ಸಂಕಲ್ಪ ಮಾಡಿ ಹಗಲಿರುಳು ಶ್ರಮಿಸಿ 2020-21 ನೇ ಸಾಲಿನ ಬಿ.ಎಸ್.ಎಫ್ (ಗಡಿ ಭದ್ರತಾ ಪಡೆ) ಸೇನಾ ನೇಮಕಾತಿಯಲ್ಲಿ ಆಯ್ಕೆಯಾಗಿ ಇದೇ ತಿಂಗಳು 28 ರಿಂದ ಮಧ್ಯಪ್ರದೇಶಕ್ಕೆ ತರಬೇತಿಗಾಗಿ ತೆರಳುತ್ತಿದ್ದು ಅವರ ಸೇವೆ ಉತ್ಕೃಷ್ಟ ವಾಗಿ ರಾಷ್ಟ್ರಕ್ಕೆ ಸಮರ್ಪಿತವಾಗಲಿ ಎಂದು ಹಾರೈಸುತ್ತೇವೆ.
ಜೊತೆಗೆ ಇಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಭವಿಷ್ಯದಲ್ಲಿ ಇನ್ನು ಹೆಚ್ಚೆಚ್ಚು ಬಾಲಕಿಯರು ಸಾಧನೆಗೈಯಲಿ ಎಂಬುದೇ ನಮ್ಮ ಮಹಾವಿದ್ಯಾಲಯದ ಮಹದಾಸೆ.
ಪ್ರೊ.ಶಿವಕುಮಾರ ಕೋಡಿಹಾಳ