ಪ್ರಕರಣದ ಕ್ಯಾಪ್ಟನ್ ಸ್ವಪಕ್ಷೀಯ ಮಾಜಿ ಸಚಿವ ಭಗವಂತ ಖೂಬಾ ಎಂದ ಮಾಜಿ ಸಚಿವ ಪ್ರಭು ಚೌಹಾಣ್
ಬೀದರ – ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧದ ವಿವಾದಿತ ಸೆಕ್ಸ್ ದೋಖಾ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಯುವತಿಯ ವಿರುದ್ಧವೇ ಪ್ರಭು ಚೌಹಾಣ್ ಪ್ರತ್ಯಾರೋಪ ಮಾಡುವುದರ ಜೊತೆಗೆ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಹರಿಹಾಯ್ದಿದ್ದಾರೆ. ಈ ಪ್ರಕರಣದ ಕ್ಯಾಪ್ಟನ್ ಖೂಬಾ ಅಂತಾ ಸ್ಪೋಟಕ ಹೇಳಿಕೆ ನೀಡಿದ್ದು, ಸದ್ಯ ಈ ಕೇಸ್ ರಾಜಕೀಯ ತಿರುವು ಪಡೆದುಕೊಂಡಿದೆ.
– ಹೌದು, ಮಾಜಿ ಸಚಿವ ಹಾಗೂ ಔರಾದ್ ಶಾಸಕ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧದ ಪ್ರಕರಣ ಮತ್ತೊಂದು ಮಜಲಿಗೆ ಶಿಪ್ಟ್ ಆಗಿದ್ದು, ಸ್ವಪಕ್ಷದ ನಾಯಕ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾನೇ ಈ ಪ್ರಕರಣದ ಕ್ಯಾಪ್ಟನ್ ಅಂತಾ ಬೊಟ್ಟು ಮಾಡಿ ತೋರಿಸಿದ್ದಾರೆ. ಅಲ್ಲದೇ, ಯುವತಿಯು ಬೇರೊಬ್ಬರ ಜೊತೆಗೆ ಚಾಟಿಂಗ್ ಮಾಡ್ತಿದ್ದಳು ಎನ್ನಲಾದ ಚಾಟಿಂಗ್ ಹಿಸ್ಟರಿ, ವಿಡಿಯೋ ಕಾಲ್ ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಅಂತಾ ಸಂತ್ರಸ್ತ ಯುವತಿಯ ವಿರುದ್ಧವೇ ಶಾಸಕ ಪ್ರಭು ಚೌಹಾಣ್ ಪ್ರತ್ಯಾರೋಪ ಮಾಡಿದ್ದಾರೆ.
ಸಂತ್ರಸ್ತ ಯುವತಿಯು ಪ್ರತೀಕ ಚೌಹಾಣ ತನ್ನನ್ನು ಮದ್ವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ, ಒತ್ತಾಯಪೂರ್ವಕವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪಗಳನ್ನ ತಳ್ಳಿ ಹಾಕಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಶಾಸಕ ಪ್ರಭು ಚೌಹಾಣ್, ಆರಂಭದಲ್ಲೇ ಭಾವುಕರಾದರು. ಮಗ ಮತ್ತು ಅವರ ಪರಿವಾರದ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಬರ್ತಿರೋದನ್ನ ನೋಡಿ ಭಾವುಕರಾದರು. ಇದಕ್ಕೆ ಒಬ್ಬ ಕ್ಯಾಪ್ಟನ್ ಕಾರಣ ಅಂತಾ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ಹರಿಹಾಯ್ದರು.
ನಮ್ಮ ಮಗನ ಮೇಲೆ ಬಂದಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ನೀವು ಯಾವ ತನಿಖೆಯನ್ನು ಬೇಕಾದರೂ ಕೈಗೊಳ್ಳಿ. ನಾವು ಸಿದ್ಧವಾಗಿದ್ದೇವೆ. ಇಲ್ಲಿ ನಮ್ಮ ಮಗ ನೆಪ ಮಾತ್ರ ಆದರೆ ಇವರ ಟಾರ್ಗೆಟ್ ನಾನೇ ಆಗಿದ್ದೇನೆ ಎಂದು ಚೌಹಾಣ ಹೇಳಿದರು
2014ರಿಂದಲೂ ಯಾವುದೇ ಕಾರ್ಯಕ್ರಮ, ಅಭಿವೃದ್ಧಿ ಕೆಲಸ ನಡೆದರೂ ಅದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರಲ್ಲದೆ, ಪ್ರಭು ಚೌಹಾಣ್ ಕುಟುಂಬದ ಹೆಸರು ಹಾಳು ಮಾಡುವ ಉದ್ದೇಶದಿಂದ ಭಗವಂತ ಖೂಬಾ ಪಿತೂರಿ ನಡೆಸುತ್ತಿದ್ದು, ಪ್ರಭು ಚೌಹಾಣ್‌ರನ್ನ ಮುಗಿಸೋದೇ ಖೂಬಾ ಒಳಸಂಚಾಗಿದೆ ಅಂತಾ ಆರೋಪಿಸಿದ್ದು, ನಮ್ಮ ಮನೆ ವಿಚಾರದಲ್ಲಿ ಖೂಬಾ ಮೂಗು ತೂರಿಸುವುದ್ಯಾಕೆ ಎಂದು ಪ್ರಶ್ನಿಸಿದ್ದಾರೆ…
– ಒಂದೆಡೆ, ಪ್ರತೀಕ ಚೌಹಾಣ್ ವಿರುದ್ಧ ಮಹಿಳಾ ಆಯೋಗದಲ್ಲಿ ವಂಚನೆ ದೂರು ದಾಖಲಿಸಿರುವ ಉದ್ಗೀರ್ ಮೂಲದ ಸಂತ್ರಸ್ತ ಯುವತಿ, ಬೀದರ್‌ನ ಎಸ್‌ಪಿ ಪ್ರದೀಪ್ ಗುಂಟಿ ಅವರನ್ನ ಭೇಟಿಯಾಗಿದ್ದು, ವಂಚನೆಯ ಬಗ್ಗೆ ದೂರು ಸಲ್ಲಿಸಿದ್ದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.. ಮತ್ತೊಂದೆಡೆ, ಪ್ರಭು ಚೌಹಾಣ್ ಮಗನ ವಿರುದ್ಧದ ಆರೋಪಗಳನ್ನ ತಳ್ಳಿ ಹಾಕಿದ್ದು, ಯುವತಿಯ ವಿರುದ್ಧವೇ ಆರೋಪಗಳ ಸುರಿಮಳೆಗೈದಿದ್ದಾರೆ.
ಪ್ರಕರಣದ ಒಳಹೂರಣ : 2022ರಲ್ಲಿ ಪ್ರತೀಕ್‌ಗೆ ಕನ್ಯೆ ನೋಡಲು ಶುರು ಮಾಡಿದ್ರಂತೆ. ಆಗ ಸಾಕಷ್ಟು ಕನ್ಯೆ ಬಂದ್ರು. ಕೊನೆಗೆ ಉದ್ಗೀರ್‌ನ ಈ ಸಂತ್ರಸ್ತ ಯುವತಿಯ ಜೊತೆಗೆ 2023 ಡಿಸೆಂಬರ್ 25ರಂದು ನಿಶ್ಚಿತಾರ್ಥ ಮಾಡಿದ್ರು. ಆದ್ರೆ, ಒಂದೇ ವರ್ಷದಲ್ಲಿ ಹಿರಿಯರ ಸಮ್ಮುಖದಲ್ಲಿ ನೆಂಟಸ್ತನ ಕ್ಯಾನ್ಸಲ್ ಆಗಿತ್ತಂತೆ. ಇದಕ್ಕೆ ಕಾರಣ ಯುವತಿ ಬೇರೊಬ್ಬರೊಂದಿಗೆ ಚಾಟಿಂಗ್, ವಿಡಿಯೋ ಕಾಲ್ ಮಾಡ್ತಿದ್ದಳಂತೆ. ಈ ಬಗ್ಗೆ ಪ್ರಭು ಚೌಹಾಣ್ ಯುವತಿಯ ಪೋಷಕರ ಗಮನಕ್ಕೂ ತಂದಿದ್ದನಂತೆ. ಆದ್ರೂ, ಯುವತಿ ಚಾಟಿಂಗ್ ಮಾಡುವುದನ್ನ ನಿಲ್ಲಿಸಿರಲಿಲ್ಲ. ಹೀಗಾಗಿ, ಗಂಡ ಆಗುವವನಿಗೆ ಸಂಶಯ ಬಂದ್ರೆ ಮುಂದೆ ಸಂಸಾರ ಆಗುವುದು ಕಷ್ಟ ಅಂತಾ ಹಿರಿಯರ ಸಮ್ಮುಖದಲ್ಲೇ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದರಂತೆ. ಎಂಗೇಜ್ಮೆಂಟ್ ಕ್ಯಾನ್ಸಲ್ ಆಗಿ ಏಳೆಂಟು ತಿಂಗಳ ಬಳಿಕ ಯುವತಿ ಮಹಿಳಾ ಆಯೋಗದ ಮೊರೆ ಹೋಗಿದ್ದು, ಇದೆಲ್ಲಾ ರಾಜಕೀಯ ಪ್ರೇರಿತ ಆರೋಪಗಳು ಅಂತಾ ಹೇಳಿದ್ದಾರೆ…
…ಒಟ್ಟಿನಲ್ಲಿ ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ವಿರುದ್ದ ಕೇಳಿ ಬಂದಿದ್ದ ವಂಚನೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಸ್ವ ಪಕ್ಷದ ನಾಯಕನೇ ರಾಜಕೀಯ ಏಳಿಗೆ ಸಹಿಸಲಾಗದೇ ಈ ರೀತಿ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೆ ಇನ್ನೊಂದೆಡೆ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪುತ್ರ ಪ್ರತೀಕ್ ಚೌಹಾಣ್ ಅರೆಸ್ಟ್ ಆಗ್ತಾರಾ ಅಥವಾ ಈ ಪ್ರಕರಣದಿಂದ ಪಾರಾಗುತ್ತಾರಾ ಕಾದು ನೋಡಬೇಕು.
ವರದಿ : ನಂದಕುಮಾರ ಕರಂಜೆ, ಬೀದರ