ಜಮಖಂಡಿ: ವೀರ ಬಾಲ ದಿವಸ ಅಂಗವಾಗಿ ಸ್ಥಳೀಯ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪೃಥ್ವಿರಾಜ ಹಿರೇಮಠ ಅವರನ್ನು ಲಯನ್ಸ್ ಸಂಸ್ಥೆಯ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.
ಮೊಘಲ್ ಆಡಳಿತಗಾರರಿಂದ ಹತ್ಯೇಗೀಡಾದ ಸಿಖ್ ಸಮುದಾಯದ ೧೦ನೇ ಧರ್ಮಗುರು ಗುರುಗೋವಿಂದ ಸಿಂಗ್ ಅವರ ಇಬ್ಬರು ಮಕ್ಕಳ ಸ್ಮರಣಾರ್ಥ ಪ್ರತಿ ವರ್ಷ ಡಿ.೨೬ ರಂದು ವೀರ ಬಾಲ ದಿವಸ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಕರೆಯ ಮೇರೆಗೆ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಯನ್ನು ಸನ್ಮಾನಿಸಿದರು.
ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಪ್ರಾಥಮಿಕ ಶಾಲೆಗಳ ೨೦೨೫-೨೬ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯ ಬಾಲಕರ ವಿಭಾಗದ ೫೦ ಮೀ, ೧೦೦ಮೀ ಮತ್ತು ೨೦೦ಮೀ ಬಟರ್ಫ್ಲೈ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯ ೫೦ ಮೀ ಹಾಗೂ ೧೦೦ಮೀ ಬಟರಫ್ಲೈ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದುದಕ್ಕಾಗಿ ವಿದ್ಯಾರ್ಥಿ ಪೃಥ್ವಿರಾಜ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಸಂಸ್ಥೆಯ ಹಿರಿಯ ಸದಸ್ಯ ಡಾ.ಎಚ್.ಜಿ. ದಡ್ಡಿ, ಲಯನ್ಸ್ ಸಂಸ್ಥೆಯ ಜಮಖಂಡಿ ಶಾಖೆಯ ಅಧ್ಯಕ್ಷ ಡಾ.ಎಂ.ಪಿ. ತಾನಪ್ಪಗೊಳ, ಖಜಾಂಚಿ ರಮೇಶ ಕೋರಿ, ಸದಸ್ಯ ಪ್ರೊ.ಆರ್.ಕೆ. ಹೊಸಟ್ಟಿ, ಅಶೋಕ ಬಿಜ್ಜರಗಿ, ಬಸವಜ್ಯೋತಿ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ಕಾರ್ಯದರ್ಶಿ ಶಕುಂತಲಾ ಕಡ್ಡಿ, ಮುಖ್ಯ ಶಿಕ್ಷಕ ಪಿ.ಐ. ಹೊಸಮಠ ಸನ್ಮಾನ ನೆರವೇರಿಸಿದರು.

