ದ್ವೇಷ ಬಿತ್ತುವ ಸಾಹಿತ್ಯಕ್ಕಿಂತಲೂ ದೇಶ ಪ್ರೀತಿಸುವ ಸಾಹಿತ್ಯ ನಿರ್ಮಾಣ ಸಾಹಿತಿಗಳ ಜವಾಬ್ದಾರಿ; ಬಸವರಾಜ ಗಾರ್ಗಿ

0
38

ಬೆಳಗಾವಿಯಲ್ಲಿ ಸಾಹಿತ್ಯ ಸೌರಭ ವಡಗೋಲ ಫೌಂಡೇಶನ್ ಉದ್ಘಾಟನೆ,ರಾಜ್ಯಮಟ್ಟದ ಕವಿಗೋಷ್ಠಿ, ಪುಸ್ತಕ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ ಸಮಾರಂಭ

ಬೆಳಗಾವಿ :-ದ್ವೇಷವನ್ನು ಬಿತ್ತುವ ಸಾಹಿತ್ಯಕ್ಕಿಂತಲೂ ದೇಶವನ್ನು ಪ್ರೀತಿಸುವ ಸಾಹಿತ್ಯ ನಿರ್ಮಾಣ ಕವಿ, ಸಾಹಿತಿಗಳ ಜವಾಬ್ದಾರಿಯಾಗಿದೆ ಎಂದು ಬೆಳಗಾವಿಯ ಹಿರಿಯ ಸಾಹಿತಿ ಬಸವರಾಜ ಗಾರ್ಗಿ ಅಭಿಪ್ರಾಯಪಟ್ಟರು.

ಅವರು ಗುರುವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಸಾಹಿತ್ಯ ಸೌರಭ ವಡಗೋಲ ಫೌಂಡೇಶನ್ ಉದ್ಘಾಟನೆಯ ನಿಮಿತ್ತವಾಗಿ ಹಮ್ಮಿಕೊಂಡ ರಾಜ್ಯಮಟ್ಟದ ಕವಿಗೋಷ್ಠಿ, ಪುಸ್ತಕ ಲೋಕಾರ್ಪಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು, ಮಾನವೀಯತೆ, ಮನುಷ್ಯ ಧರ್ಮಗಳು ಮೇಳೈಸುವಲ್ಲಿ ಸಾಹಿತ್ಯ ಹುಟ್ಟುತ್ತದೆ. ನಾವು ಲೋಕಲ್ ಆಗಿದ್ದುಕೊಂಡು ಗ್ಲೊಬಲ್ ಆಗಿ ಯೋಚಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯಮಟ್ಟದ ಸಾಹಿತ್ಯ ಸೌರಭ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತ ಪದ್ಮಶ್ರೀ ರೂಗೆ ಮಾತನಾಡಿ, ಸಮಾಜದ ಒಳಿತಿಗಾಗಿ ಸಂಘಟನೆಗಳು ಇರಬೇಕು, ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸಾಹಿತ್ಯ ಸೌರಭ ಫೌಂಡೇಶನ್ ಕೊಡಮಾಡುತ್ತಿರುವ ಪ್ರಶಸ್ತಿಯ ಈ ಕಾರ್ಯವು ಸ್ತುತ್ಯಾರ್ಹವಾಗಿದ್ದು, ಈ ಫೌಂಡೇಶನ್ ರಾಜ್ಯಮಟ್ಟದಲ್ಲಿ ಹೆಸರು ಮಾಡುವಂತಾಗಲೆಂದು ಶುಭ ಹಾರೈಸಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ, ರಾಮದುರ್ಗದ ಶಿಕ್ಷಕ ಸಾಹಿತಿ ಆನಂದ ಹೆಕ್ಕೆನ್ನವರ ಮಾತನಾಡಿ, ಕವಿ, ಕವಿತೆಗಳು ಸಮಾಜದ ಕಣ್ಣು ತೆರೆಸುವ ಮತ್ತು ಸಮಾಜಕ್ಕೆ ಸರಿದಾರಿ ತೋರಿಸಿ ಮಾರ್ಗದರ್ಶನ ನೀಡುವ ಕಾರ್ಯ ಮಾಡಬೇಕು. ಇಂದಿನ ಕವಿಗೋಷ್ಠಿ ಆ ನಿಟ್ಟಿನಲ್ಲಿ ಯಶಸ್ವಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಕಾವಿ ನಾಡಿನ ಸಾಹಿತಿ ಸುರೇಶ್ ಮುದ್ದಾರ, ಕಲಾವಿದರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ್ ವಾಘಮೊಡೆ, ಬೆಳಗಾವಿಯ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ ಅವರು ಮಾತನಾಡಿ ನೂತನ ಸಾಹಿತ್ಯ ಸೌರಭ ವಡಗೋಲ ಪೌಂಡೇ ಶನ ದ ಉದ್ಘಾಟನೆಗೆ ಶುಭಕೋರಿದರು, ತಾವು ಸಹಾಯ ಸಹಕಾರ ನೀಡುವ ಭರವಸೆ ನೀಡಿದರು, ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು

ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಸೌರಭ ಫೌಂಡೇಶನ್’ನ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಭಾಗಾಯಿ ಅವರ ‘ಪ್ರೇಮೋತ್ಸವ’ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೨೯ ಜನ ಸಾಧಕರಿಗೆ ಸಾಹಿತ್ಯ ಸೌರಭ ಕಾವ್ಯ ಪುರಸ್ಕಾರ, ಸಾಹಿತ್ಯ ಸೌರಭ ಕನ್ನಡ ರತ್ನ ಪ್ರಶಸ್ತಿ, ಸಾಹಿತ್ಯ ಸೌರಭ ಆದರ್ಶ ಶಿಕ್ಷಣ ರತ್ನ ಪ್ರಶಸ್ತಿ, ಸಾಹಿತ್ಯ ಸೌರಭ ಜನಪದ ರತ್ನ ಪ್ರಶಸ್ತಿ, ಸಾಹಿತ್ಯ ಸೌರಭ ಆಧ್ಯಾತ್ಮ ರತ್ನ ಪ್ರಶಸ್ತಿ, ಸಾಹಿತ್ಯ ಸೌರಭ ಕಾಯಕ ರತ್ನ, ಸಾಹಿತ್ಯ ರತ್ನ, ಕೃಷಿ ಸೇವಾ ರತ್ನ, ಮಹಿಳಾ ಸಾಧಕ ಮತ್ತು ಯಕ್ಷಗಾನ ಕಲಾ ರತ್ನ ಸೇರಿದಂತೆ ವೈವಿಧ್ಯಮಯ ಪ್ರಶಸ್ತಿಗಳನ್ನು ಸಾಧಕರಿಗೆ ಕೊಡಮಾಡಿ ಗೌರವಿಸಲಾಯಿತು.

೨೦ಕ್ಕೂ ಹೆಚ್ಚು ಜನ ಕವಿಗಳು ಕವಿತೆ ವಾಚನ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ರಾಮು ಭಾಗಾಯಿ, ಸೇವಂತಿ ಭಾಗಾಯಿ, ಚಿದಾನಂದ ಸರವಾಡೆ, ಬಸವರಾಜ ಹೊನ್ನಗೌಡರ, ಸಂತೋಷ ಹಳಿಜೋಳೆ ಮತ್ತು ಸಂದೀಪ ಮಗದುಮ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಡಾ. ತಳವಾರ ಸ್ವಾಗತಿಸಿದರು. ಪ್ರೊ. ಸರೋಜಿನಿ ಸಮಾಜೆ ಪ್ರಾಸ್ತಾವಿಕ ಮಾತನಾಡಿದರು. ಪ್ರವೀಣಕುಮಾರ ಬಣಜವಾಡ ಪುಸ್ತಕ ಪರಿಚಯಿಸಿದರು. ಜ್ಯೋತಿ ಮುರಾಳೆ ಪರಿಚಯಿಸಿದರು. ರೋಹಿಣಿ ಮಿರ್ಜೆ ನಿರೂಪಿಸಿದರು. ಶಿವರಾಜ ಅರಳಿ ವಂದಿಸಿದರು.

LEAVE A REPLY

Please enter your comment!
Please enter your name here