Homeಲೇಖನಸ್ನೇಹ ಪ್ರೀತಿಯ ತವರು ಪ್ರೊ. ಪ್ರೇಮಾ ಅಣ್ಣಿಗೇರಿ

ಸ್ನೇಹ ಪ್ರೀತಿಯ ತವರು ಪ್ರೊ. ಪ್ರೇಮಾ ಅಣ್ಣಿಗೇರಿ

ನಾವು ನಮ್ಮವರು

 

“ನಾವು ನಮ್ಮವರು ಎಂಬುದೇ ತುಂಬಾ ಆತ್ಮೀಯವಾದ ಅಪ್ಯಾಯಮಾನವಾದ ಪದ. ಈ ವಿಷಯದ ತಲೆ ಬರಹದಡಿಯಲ್ಲಿ ತಾವು ನನ್ನನ್ನು ತಮ್ಮವರಲ್ಲಿ ನಾನೊಬ್ಬಳು ಎಂದು ಗುರುತಿಸಿದ್ದೇ ಹೆಚ್ಚು ಸಂತಸ ಕೊಡುವ ವಿಷಯ. ಇದಕ್ಕಿಂತ ಹೆಚ್ಚಿನ ಹೆಗ್ಗಳಿಕೆ ನನ್ನಲ್ಲಿಲ್ಲ. ನನ್ನ ಬದುಕು ಹೆಚ್ಚು ಏರಿಳಿತವಿಲ್ಲದ ಸಾಮಾನ್ಯರಂತೆಯೇ ಸಾಗಿ ಬಂದಿದ್ದರೂ ಬದುಕಿದಷ್ಟು ಕಾಲ ಪ್ರಾಮಾಣಿಕ ಬದುಕು ನನ್ನದಾಗಿದೆಯೆಂದು ಅತ್ಯಂತ ಆತ್ಮವಿಶ್ವಾಸದಿಂದ ಹೇಳಬಲ್ಲೆನು” ಎನ್ನುವ ಪ್ರೇಮಕ್ಕ ಅವರ ಮಾತು ಅವರ ಸರಳ – ಸಜ್ಜನಿಕೆಯನ್ನು ಎತ್ತಿ
ತೋರಿಸುತ್ತದೆ.

ಹೊಗಳಿಕೆಗೆ ಹಿಗ್ಗದ ತೆಗಳಿಕೆಗೆ ಕುಗ್ಗದ ನಮ್ಮ ವೇದಿಕೆಯ ಅತ್ಯಂತ ಸರಳ ಮತ್ತು ಸಮಾಧಾನ ಚಿತ್ತದಿಂದ ಎಲ್ಲವನ್ನೂ ನಿಭಾಯಿಸುವ ಹಿರಿಯ ಜೀವಿ ಪ್ರೇಮಕ್ಕ ಅಣ್ಣಿಗೇರಿ ಅವರು. ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ -ಪುಣೆಯ ಅಕ್ಕನ ಅರಿವು ವೇದಿಕೆಯ ಅಡಿಯಲ್ಲಿ ನಡೆಯುವ
ಗೂಗಲ್ ಮೀಟ್ ಉಪನ್ಯಾಸ ಕಾರ್ಯಕ್ರಮಗಳಲ್ಲಿ ತಮ್ಮ ಅತ್ತೆ ಮತ್ತು ಮಾವನವರ ಹೆಸರಿನಲ್ಲಿ ದತ್ತಿ ದಾಸೋಹವನ್ನು ಏರ್ಪಡಿಸಿದ ಹಿರಿಮೆ ಇವರದು

ಪ್ರೇಮಕ್ಕ ಅವರು ಈಗಿನ ಬಾಗಲಕೋಟ ಜಿಲ್ಲೆಯ ಹುನಗುಂದದಲ್ಲಿ ಜನಿಸಿದರು.
ತಂದೆಯವರು ಮಲ್ಲಿಕಾರ್ಜುನಪ್ಪ ಮಲ್ಲಪ್ಪ ರೇವಡಿ. ತಾಯಿಯವರು ನೀಲಮ್ಮಾ ರೇವಡಿ. ತಂದೆಯವರು ಬಿ. ಎ. ಎಲ್. ಎಲ್. ಬಿ ಓದಿದವರು. ಪುಣೆ ಮತ್ತು ಮುಂಬಯಿಯಲ್ಲಿ ಅಭ್ಯಾಸ ಮಾಡಿದವರು. ಹುನಗುಂದ ವಿಭಾಗದಲ್ಲಿ Hon. ಮ್ಯಾಜಿಸ್ಟ್ರೇಟ್ ಸೇವೆ ಸಲ್ಲಿಸಿದವರು. ಸಿ. ಸಿ. ಹುಲಕೋಟಿ, ತೆಂಡೂಲ್ಕರ ಹಾಗೂ ಬಿ. ವಿ. ಭೂಮರಡ್ಡಿಯವರೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದರು. ಅವರ ತಂದೆಯವರು ಹೋಮ್ ಗಾರ್ಡ್ಸ್ ಮತ್ತು ಸ್ಕೌಟ್ಸ್ ದ ಕಮಾಂಡರ್ ಆಗಿದ್ದಾಗ ಮುರಾರ್ಜಿ ದೇಸಾಯಿಯವರು ಗೃಹ ಮಂತ್ರಿಯಾಗಿದ್ದರು. ಆಗ ಅವರು ನಾಗರಿಕ ವೇಷದಲ್ಲಿಯೇ ಮುರಾರ್ಜಿ ಯವರಿಗೆ ಗೌರವ ಸಲ್ಲಿಸಿದರಂತೆ. ಆಗ ಮುರಾರ್ಜಿ ಯವರು ಹೀಗೇಕೆಂದು ಕಾರಣ ಕೇಳಿದರಂತೆ. ಆಗ ಅವರು ತಮ್ಮ ಎಲ್ಲಾ ಸಿಬ್ಬಂದಿಗೂ ಅಧಿಕೃತ ವೇಷ ಭೂಷಣವಿಲ್ಲವೆಂದು ವಿನಂತಿಸಿದರಂತೆ. ಮುರಾರ್ಜಿ ಯವರು ತಾವು ಊರಿಗೆ ಹೋದ ನಂತರ ಎಲ್ಲಾ ಸ್ಕೌಟ್ಸ್ ಸಿಬ್ಬಂದಿಗೆ ವೇಷಭೂಷಣ ಕಳಿಸಿದರಂತೆ. ಪ್ರೇಮಕ್ಕ ಅವರ ತಂದೆಯವರು ಇಲಕಲ್ಲ ಮಹಾಂತ ಸ್ವಾಮಿಗಳ ಪರಮ ಭಕ್ತರಾಗಿದ್ದರು. ಹೀಗಾಗಿ ಅವರ ಮೊದಲಿನ ತಾಯಿಮನೆಯ ಹೆಸರು ಮಹಾಂತಮ್ಮಾ ಎಂದೇ ಇತ್ತು. ಅವರ ತಮ್ಮನಿಗೂ ಮಹಾಂತೇಶ ಎಂಬ ಹೆಸರನ್ನೇ ಇಟ್ಟಿದ್ದಾರೆ. ಶ್ರೀ ಮಹಾಂತೇಶ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾಗಿಯೂ, ಶ್ರೀ ವಿಜಯ ಮಹಾಂತೇಶ್ವರ ಪ್ರೌಢಶಾಲೆಯ ಕಾರ್ಯದರ್ಶಿಗಳಾಗಿಯೂ ಪೂಜ್ಯ ಶ್ರೀ ಮಠ ಮಾಸ್ತರ ಗುರುಗಳ ಜತೆಗೆ ಶಿಕ್ಷಣದ ಏಳಿಗೆಗಾಗಿ ಶ್ರಮಿಸಿದರು.

ಪ್ರೇಮಕ್ಕ ಅವರ ವಿದ್ಯಾಭ್ಯಾಸ

ಪ್ರಾಥಮಿಕ ಶಿಕ್ಷಣ-ಕನ್ನಡ ೩ನೇನಂಬರ ಶಾಲೆ. ಬಾಗಲಕೋಟ
ಪ್ರೌಢ ಶಿಕ್ಷಣ-ಸಕ್ರಿ ಪ್ರೌಢಶಾಲೆ, ಬಾಗಲಕೋಟ
ಪದವಿ ಶಿಕ್ಷಣ-ಶ್ರೀ ಬಸವೇಶ್ವರ ಕಲಾ ಹಾಗು ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟ.
ಹಿಂದಿ ಪರೀಕ್ಷೆ-ರಾಷ್ಟ್ರಭಾಷಾ
ಎಂ. ಎ -ರಾಜ್ಯಶಾಸ್ತ್ರ, ಕಲಬುರಗಿ . (ಮದುವೆಯ ನಂತರ ಮಾಡಿದ್ದು). ಬಿ. ಎಡ್

ಸಲ್ಲಿಸಿದ ಸೇವೆಗಳು

ಗೋದುತಾಯಿ ಮಹಾವಿದ್ಯಾಲಯ (ಅರೆಕಾಲಿಕ ಉಪನ್ಯಾಸಕರಾಗಿ ಸೇವೆ)
೨) ಸರಕಾರಿ ಪ್ರೌಢಶಾಲೆ ( ಸಹ ಶಿಕ್ಷಕಿಯಾಗಿ ಖಾಯಂ ಸೇವೆ)
೩) ಸರಕಾರಿ ಪದವಿ ಪೂರ್ವ ಕಾಲೇಜು. (ಉಪನ್ಯಾಸಕಿಯಾಗಿ ಉನ್ನತಿ).

ಸೇವೆಯಲ್ಲಿಯ ಸವಾಲುಗಳು

ಪ್ರೇಮಕ್ಕ ಅವರು ಸಹ ಶಿಕ್ಷಕಿಯಾಗಿ ಮೊದಲು ಸೇವೆ ಸಲ್ಲಿಸಿದ್ದು ಗ್ರಾಮೀಣ ಪ್ರದೇಶವಾದ ಕಲಬುರ್ಗಿ ಯಿಂದ ೨೪ ಕಿ ಮಿ. ದೂರವಿರುವ ಗೊಬ್ಬುರನಲ್ಲಿ. ಮಕ್ಕಳು ಗ್ರಾಮೀಣ ಪ್ರದೇಶದವರಾದ ಕಾರಣ ಮುಗ್ಧರೂ ಹಾಗೂ ಕೆಲವು ಮೌಡ್ಯಗಳ ಪರಿಪಾಲಕರಾಗಿದ್ದರು. ಆ ಪ್ರೌಢಶಾಲೆಗೆ ಸೇರಿದ ಮೊದಲ ಶಿಕ್ಷಕಿ ಇವರಾಗಿದ್ದರು. ಅನೇಕ ರಾಷ್ಟ್ರ ನಾಯಕರ, ಸಂತರ, ಶರಣರ ಕತೆಗಳನ್ನು ಅವರಿಗೆ ತಿಳಸುತ್ತ ವೈಜ್ಞಾನಿಕ ಮನೋಭಾವ ಬೆಳೆಸುವ ಪ್ರಯತ್ನ ಮಾಡುತ್ತಿದ್ದರು. ಇಂತಹ ಸಂತರ ಚಿತ್ರಪಟಗಳನ್ನೂ ಚಿತ್ರಕಲಾ ಶಿಕ್ಷಕರಿಂದ ತೆಗೆಯಿಸಿ ಗೋಡೆಗೆ ಹಾಕಿಸಿದ್ದರು. ಮಕ್ಕಳಿಗೆ ತಿಳಿದ ಕೌಶಲ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಯ ಆವರಣದಲ್ಲಿ ನರ್ಸರಿ (ಅರಣ್ಯ ಇಲಾಖೆಯವರಿಂದ ಸಸಿಗಳನ್ನು ತರಿಸಿ) ಬೆಳೆಸುವ ಘನ ಉದ್ದೇಶವನ್ನು ಅವರ ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಡಿ. ಕುಲಕರ್ಣಿಯವರು ಅವರ ಮುಂದಿಟ್ಟರು. ಶನಿವಾರಕ್ಕೊಮ್ಮೆ ಮಕ್ಕಳೆಲ್ಲಾ ಈ ಕಾರ್ಯಕ್ಕೆ ತೊಡಗಿದರು. ಮೇಲಾಧಿಕಾರಿಗಳೂ ಸಹ ಈ ಕಾರ್ಯವನ್ನು ಪ್ರಶಂಸಿದರು. ಆ ಭಾಗದಲ್ಲೆಲ್ಲಾ ಬೆಳೆಸಿದ ಸಸಿಗಳನ್ನು ನೋಡಿ ಪ್ರಶಂಸಿಸದವರಿಲ್ಲ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬಾಲಿಕೆಯರ ಸರಕಾರಿ ವಸತಿ ಪ್ರೌಢಶಾಲೆ ಕಲಬುರ್ಗಿ. ಈ ತೆರನಾದ ಶಾಲೆಗಳು ಇಡೀ ಶಿಕ್ಷಣ ವಿಭಾಗಕ್ಕೆ ಒಂದು ಮಾತ್ರ ಇದ್ದು ರಾಜ್ಯದಲ್ಲಿ ಕೇವಲ ನಾಲ್ಕು ಈ ತೆರನಾದ ಶಾಲೆಗಳಿದ್ದವು. ABCD ಬಾರದ ಮಕ್ಕಳಿಗೆ ಪಠ್ಯಕ್ರಮ ಮುಗಿಸುವ ಜವಾಬ್ದಾರಿ ಅವರ ಮೇಲಿತ್ತು. ಕೆಲವು ಸಲ ‘ವಸತಿ ಗೃಹ’ (Hostel)ದ ಮೇಲ್ವಿಚಾರಣೆ ಇರುತ್ತಿತ್ತು. ಹೀಗಿದ್ದರೂ ಮಕ್ಕಳ ಸರ್ವಾಂಗೀಣ ಏಳಿಗೆಗಾಗಿ ರಾಷ್ಟ್ರೀಯ ಹಬ್ಬಗಳಂದು ಎಲ್ಲ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು. ಕಲಬುರ್ಗಿ ಆಕಾಶವಾಣಿ ಕೇಂದ್ರವಂತೂ ಅವರ ಶಾಲೆಯ ಮಕ್ಕಳಿಗೆ ಎಲ್ಲಾ ರೀತಿಯ ಅವಕಾಶ ಕಲ್ಪಿಸಿ ಕೊಟ್ಟಿತು. ಕವನ ವಾಚನ, ಸಾಮುಹಿಕ ಚರ್ಚೆ, ಹಬ್ಬ ಹರಿದಿನಗಳ ಆಚರಣೆ, ಮುಂತಾದ ವ್ಯಕ್ತಿತ್ವ ರೂಪಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಇದಲ್ಲದೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಅವರ ಅಭ್ಯಾಸದ ಕಡೆಗೂ ಗಮನ ಕೊಟ್ಟಿದ್ದರು. ಈ ಅವಧಿಯಲ್ಲಿಯೇ ಅವರಿಗೆ ‘ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ‘ ಯೆಂಬ ಪಶಸ್ತಿ ದೊರಕಿದ್ದು. ಇಂದಿಗೂ ಆ ಮುಗ್ಧ ಮಕ್ಕಳು ಅವರನ್ನು ನೆನೆಸುತ್ತಾರೆಂಬುದೇ ಅವರಿಗೆ ಎಲ್ಲ ಪ್ರಶಸ್ತಿಗಿಂತ ಹೆಚ್ಚಿನ ಆತ್ಮ ಸಂತಸ ಕೊಟ್ಟ ಸಂಗತಿಯೆಂದು ಭಾವಿಸುತ್ತಾರೆ.

ಸರಕಾರಿ ಪದವಿಪೂರ್ವ ಕಾಲೇಜು ಜೇವರ್ಗಿಯಲ್ಲಿಯೂ ಸಹ ಪ್ರೇಮಕ್ಕ ಅವರೇ ಮೊದಲ ಉಪನ್ಯಾಸಕಿಯಾಗಿ ಸೇವೆ ಆರಂಭಿಸಿದ್ದು. ಕಾಲೇಜಿನ ಯಾವುದೇ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರಿಗೆ, ಅವರಿದ್ದರೆ ಹೆಚ್ಚಿನ ಬಲ ಬಂದಂತೆ ಎಂದು ಭಾವಿಸುತ್ತಿದ್ದರು. ಕಾಲೇಜು ಪ್ರವಾಸಗಳಿದ್ದರಂತೂ ಅವರು ಹೋದರೆ ಮಾತ್ರ ವಿದ್ಯಾರ್ಥಿ ನಿಯರನ್ನು ಕಳಿಸಲು ಅವರ ತಂದೆತಾಯಿಗಳು ಒಪ್ಪುತ್ತಿದ್ದರು.

ಪ್ರೇಮಕ್ಕ ಅವರ ಕಲಿಸುವಿಕೆ ಕುರಿತು ಒಂದು ಮಾತು ಹೇಳಲೇಬೇಕು.’ Receivers capacity ಅಂದರೆ ವಿದ್ಯಾರ್ಥಿಗಳ ಗ್ರಹಿಸುವ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಸಬೇಕು. ಇಲ್ಲವಾದರೆ ಬೋರ್ಗಲ್ಲ ಮೇಲೆ ನೀರು ಸುರಿದಂತೆ ಎಂದು ಸುಮಾರು ಎಲ್ಲ ಉಪನ್ಯಾಸಕರ ಅಭಿಮತವಾಗಿತ್ತು. ಒಂದು ತರಗತಿಯಲ್ಲಿ ಸುಮಾರು ೧೦೦ ವಿದ್ಯಾರ್ಥಿಗಳೆಂದರೆ, ಅದರಲ್ಲಿ ಯಾವ ವಿದ್ಯಾರ್ಥಿಗೂ ಪಾಠ ತಿಳಿದುಕೊಳ್ಳಲು ತೊಂದರೆ ಆಗಬಾರದು ಎನ್ನುವುದು ಅವರ ಕಳಕಳಿ. ಅದಕ್ಕೆ ಅವರೆಲ್ಲ ಪ್ರೇಮಕ್ಕ ಅವರಿಗೆ ‘ನೀವು ಖಾಸಗಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರೆ ಚೆನ್ನಾಗಿತ್ತು ಎನ್ನುತ್ತಿದ್ದರು. ಕಾಲೇಜಿನಲ್ಲಿ ಸಂಭವನೀಯಪ್ರಶ್ನೆಗಳೊಂದಿಗೆ ಉತ್ತರಗಳನ್ನೂ ಒಳಗೊಂಡ ಚಿಕ್ಕ ಪುಸ್ತಕ (booklet) ತಯಾರಿಸಿ ಕೊಟ್ಟಿದ್ದರು. ಅಣಕು ಚುನಾವಣೆ ( ವಿದ್ಯಾನ್ಮಾನ ಮತಯಂತ್ರ ಬಳಕೆ ಕುರಿತು) ಮಾಡಿಸಲಾಗಿತ್ತು. ವಿಜಯಪುರ ಮುಂತಾದ ಊರುಗಳಿಗೆ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.
ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ (ಹಣ, ಪುಸ್ತಕ, ಊಟ ಹಾಕುವದು, ತಾತ್ಕಾಲಿಕವಾಗಿ ಮನೆಯಲ್ಲಿ ಇರಲು ವ್ಯವಸ್ಥೆ, ವೈದ್ಯಕೀಯ ಸೇವೆ, ಪುಕ್ಕಟೆ ಟ್ಯೂಷನ ಇತ್ಯಾದಿ) ಮಾಡುತ್ತ ಬಂದಿದ್ದಾರೆ. ಈಗ ಸುಮಾರು ವರ್ಷಗಳಿಂದ ಇಂಜಿನಿಯರಿಂಗ್ ಓದುವ ಕೆಲವು ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುತ್ತಿದ್ದಾರೆ.
ಕಲಬುರ್ಗಿಯಲ್ಲಿದ್ದಾಗ ಗೋದುತಾಯಿ ನಗರದಲ್ಲಿ ಪ್ರತಿ ಸೋಮವಾರ ಸಾಯಂಕಾಲ ೫ ಗಂಟೆಗೆ ವಚನೋತ್ಸವ ಕಾರ್ಯಕ್ರಮವನ್ನು ‘ಮನೆಯಲ್ಲಿ ಮಹಾಮನೆ’ಎಂಬ ಹೆಸರಿನಿಂದ ಕೆಲವು ವರ್ಷ ನಡೆಸಿದರು. ನಂತರ ಕಾಲನಿಯಲ್ಲಿ ಮಹೇಶ್ವರ ಗುಡಿಯನ್ನು ಕಟ್ಟಲು ,ಅಲ್ಲಿಯೇ ವಚನೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರಲಾಯಿತು. ಅಕ್ಕಲಕೋಟ ಸ್ವಾಮಿಗಳು, ಹಾದಿಮನಿ ಸರ್, ಸಜ್ಜನ ಸರ್,
ಪತಂಗಿ ಸರ್, ದುರಗಿ ಮೇಡಂ ಹೀಗೆ ಅನೇಕ ಮಹನೀಯರು ತಮ್ಮ ಅನುಭಾವ ನೀಡಿದರು. ಈ ಗುಡಿಯ ಪ್ರಾಂಗಣಕ್ಕೆ ಛತ್ತು ಹಾಕಿಸಲು ೧ ಲಕ್ಷ ರೂಪಾಯಿ ದೇಣಿಗೆ ಅಣ್ಣಿಗೇರಿ ಕುಟುಂಬದ ಪರವಾಗಿ ಕೊಡಲಾಯಿತು. ಲಕ್ಷ್ಮೇಶ್ವರ (ಅತ್ತೆಮನೆ) ದಲ್ಲಿ ಅವರ ಮನೆಯ ಗೋಡೆಯನ್ನು ತನ್ನೊಂದಿಗೆ ಹಂಚಿಕೊಂಡಿರುವ ‘ನಿರ್ಮಲೇಶ್ವರ ಗುಡಿಯ ‘ಜೀರ್ಣೋದ್ಧಾರ ನಡೆದಾಗ ೧ಲಕ್ಷ ರೂಪಾಯಿ ಜೀರ್ಣೋದ್ಧಾರಕ್ಕಾಗಿ ಕೊಟ್ಟಿ ದ್ದಾರೆ . ಅವರ ಮಾವನವರು ಚಿಕ್ಕವರಿದ್ದಾಗಿನಿಂದ ಈ ಗುಡಿಯ ಪೂಜೆ, ಸೇವೆ ಮಾಡುತ್ತ ಬಂದಿದ್ದರು. ಈಗಲೂ ಅವರ ಕುಟುಂಬದವರು ಮಾಡುತ್ತಿದ್ದಾರೆ. ಇನ್ನು ಕಷ್ಟದಲ್ಲಿದ್ದ ಬಂಧು ಬಳಗದವರಿಗೆ ಹೆಚ್ಚಿನ ಆರ್ಥಿಕ ಸಹಾಯ ಮಾಡುತ್ತ ಬಂದಿದ್ದಾರೆ.

ಈ ಸಮಾಜದಲ್ಲಿ ಅವರು ಒಂದು ಹಂತಕ್ಕೆ ಬೆಳೆದು ಬರಲು ಅನೇಕರು ಅನೇಕ ರೀತಿಯಿಂದ ಅವರಿಗೆ ಸಹಾಯ ಸಹಕಾರ ತೋರಿದ್ದಾರೆ. ಸಮಾಜದ ಋಣ ತೀರಿಸಲಾಗದು. ಆದರೂ ತಮ್ಮ ಕೈಲಾದ ಮಟ್ಟಿಗೆ ಮಾಡುತ್ತ ಸಾಗುವದೇ ನಿಜವಾದ ಬದುಕು ಎಂದು ತಿಳಿದು ಬಾಳುವ ದಂಪತಿಗಳು ತಾವಾಗಿದ್ದೇವೆ ಎನ್ನುವುದನ್ನು ಅವರು ಅತ್ಯಂತ ನಯ-ವಿನಯದಿಂದ ತಿಳಿಸು ತ್ತಾರೆ.
ಗೋದುತಾಯಿ ನಗರದಲ್ಲಿ ‘ಗೋದುತಾಯಿ ಮಹಿಳಾ ಮಂಡಳ’ ಮಾತೋಶ್ರೀ ನಳಿನಿದೇವಿ ಬಸವರಾಜಪ್ಪಾ ಅಪ್ಪಾ ಅವರ ಘನ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಲ್ಪಟ್ಟಿತು. ಮಂಡಳದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರೇಮಕ್ಕಅವರು ಅಳಿಲು ಸೇವೆ ಸಲ್ಲಿಸಿದ್ದಾರೆ. ‘ಬಾಡಿಗೆ ಮನೆ’ ಎಂಬ ನಾಟಕವನ್ನು ಅವರು ಬರೆದು ಮಂಡಳದ ಸದಸ್ಯರಿಂದಲೇ ನಾಟಕವಾಡಿಸಿದ್ದು ಎಲ್ಲರಿಗೂ ಅವಿಸ್ಮರಣೀಯ ಘಟನೆಯಾಗಿ ಉಳಿಯಿತು. ಮಹಿಳೆಯರ ಅಭಿರುಚಿಗನುಗುಣವಾಗಿ ಅಡಿಗೆ, ಕಸೂತಿ, ಆಟಗಳು, ಕಲಬುರ್ಗಿಯ ಅನೇಕ ವಿಷಯಗಳ ಪರಿಣತರ ಕರೆಯಿಸಿ ಉಪನ್ಯಾಸ ಏರ್ಪಡಿಸುವದು ಹೀಗೆ ಹತ್ತು ಹಲವು ಕಾರ್ಯಗಳನ್ನು ನಡೆಯಿಸಿಕೊಂಡು ಬರಲಾಯಿತು. ಸಣ್ಣದೊಂದು ಗ್ರಂಥಾಲಯ ಮಾಡಿ ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಧಾರ್ಮಿಕ ವಿಷಯಗಳನ್ನು ಒಳಗೊಂಡ ಪುಸ್ತಕಗಳನ್ನು ಸಂಗ್ರಹಿಸಿಟ್ಟರು. ಬಹಳ ವರ್ಷಗಳವರೆಗೆ ಈ ಮಂಡಳವು ಬಡ ಮಕ್ಕಳಿಗೆ ಪುಸ್ತಕಗಳನ್ನು ಕೊಡುವ, ಗೋದುತಾಯಿ ನಗರದ ಸ್ವಚ್ಚತಾ ಕಾರ್ಯ, ಪ್ರವಾಸ ಕೈಗೊಳ್ಳುವ ಹೀಗೆ ಹಲವು ಕಾರ್ಯಗಳನ್ನು ಮಾಡುತ್ತ ಬಂದರು. ಎಲ್ಲರೊಳಗೊ0ದಾಗಿ ಎಲ್ಲರಿಗೂ ಬೇಕಾಗಿ ಸಮಾಜದೊಳಗೊಂದಾಗಿ ಬದುಕುತ್ತಿದ್ದಾರೆ.

ಕಲಬುರ್ಗಿ ಆಕಾಶವಾಣಿಯು ಪ್ರೇಮಕ್ಕ ಅವರ ನೂರಾರು ಚಿಂತನಗಳನ್ನು ಬಿತ್ತರಿಸಿದೆ. ಅಲ್ಲದೆ ಆಕಾಶವಾಣಿಯ ಅನೇಕ ಸಾಮೂಹಿಕ ಚರ್ಚಾಕೂಟಗಳಲ್ಲಿ ಭಾಗವಹಿಸುವ ಅವಕಾಶಗಳು ಅವರಿಗೆ ಸಿಕ್ಕಿದ್ದವು.

೧೯೮೬ರಲ್ಲಿ ಸರಕಾರದಿಂದ ಪ್ರೇಮಕ್ಕ ಅವರನ್ನು ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಯೆಂದು ಗುರುತಿಸಲಾಯಿತು.
ಪ್ರೇಮಕ್ಕ ಅವರು ಬಾಗಲಕೋಟೆಯಲ್ಲಿದ್ದಾಗ (೧೯೭೧ ರ ಸುಮಾರಿಗೆ) ಅವರಿಗೆ ಅವರ ಪೂಜ್ಯ ಗುರುಗಳಾದ ಪ್ರೊ. ಮೃತ್ಯುಂಜಯ ಹೆಬಸೂರ ಸರ್ ಅವರ ಮಾರ್ಗದರ್ಶದಲ್ಲಿ , ಶಾಂತಾದೇವಿ ಶಾಬಾದಿ ಮುಂತಾದ ಶರಣೆಯರ ಒಡನಾಟದಲ್ಲಿ ಲಿಂಗಾಯತ ಧರ್ಮದ ಧಾರ್ಮಿಕ ಆಚರಣೆಗಳು ಸಾಂಗವಾಗಿ ತಿಳಿಸಲಾಯಿತು.
ಧಾರವಾಡದ ಮುರಘಾ ಮಠವು ನಡೆಸುತ್ತಿದ್ದ ಶಿವಾನುಭವ ಪರೀಕ್ಷೆಗಳನ್ನು ಬಾಗಲಕೋಟೆಯ ಶಿವಾನುಭವ ಸಂಘದಿಂದಲೂ ನಡೆಸುತ್ತಿದ್ದರು. ಪ್ರವೇಶ, ಪರಿಚಯ ಹಾಗು ಭೂಷಣ ಮೂರು ಪರೀಕ್ಷೆಗಳಲ್ಲಿ ಪಾಸಾಗಿ ‘ಬೆಳ್ಳಿ ಪದಕ’ ಪಡೆದಿದ್ದಾರೆ. ಶಿವಾನುಭವ ತರಗತಿಗಳಿಂದ ಮುಖ್ಯವಾಗಿ ಲಿಂಗಾಯತ ಧರ್ಮದ ಮೂಲ ತತ್ತ್ವ ಗಳನ್ನು ಅವರಿಗೆಲ್ಲ ಆಚರಣೆ ಪೂರಕವಾಗಿ ತಿಳಿಸಿಕೊಟ್ಟಿದ್ದರು. ಯಾದವಾಡ ಪಟ್ಟದೇವರ ಸನ್ನಿಧಿಯಲ್ಲಿ ಲಿಂಗದೀಕ್ಷೆ ಯನ್ನು ಕೊಡಿಸಿದ್ದರು. ಪಾದೋದಕ ಪ್ರಸಾದ ತೆಗೆದುಕೊಳ್ಳುವ ನಿಜ ಬಗೆಯನ್ನು ತಿಳಿಸಿಕೊಟ್ಟಿದ್ದರು.
ಇವರಿಗೆ ಧಾರ್ಮಿಕ ಲೇಖನ ಬರೆಯುವ ಹವ್ಯಾಸವಿದೆ. ಅಕ್ಕನ ಅರಿವು ಸಂಘಟನೆಯು ಅವರ ಅರಿವು ವಿಸ್ತರಿಸುತ್ತ ಜೀವನದ ಕೊನೆಗಾಲದಲ್ಲಿ ಸತ್ಸಂಗದ ಆನಂದ ನೀಡುತ್ತಿದೆ ಎನ್ನುವುದನ್ನು ಪ್ರೇಮಕ್ಕ ಅವರು ಅಭಿಮಾನದಿಂದ ಹೇಳುತ್ತಾರೆ.

ಪ್ರೊ ಡಾ. ನಿಂಗಪ್ಪ ಶಿ ಅಣ್ಣಿಗೇರಿಯವರು ಪ್ರೇಮಕ್ಕ ಅವರ ಮನೆಯವರು. ಕಲಬುರ್ಗಿಯ ಶ್ರೀ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗಣಿತ ವಿಷಯದಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿ , ಪ್ರಾಂಶುಪಾಲರಾಗಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.

ಪ್ರೇಮಕ್ಕ ಅವರ ಇಬ್ಬರೂ ಮಕ್ಕಳು ಇಂಜಿನಿಯರಿಂಗ್ ಓದಿದ್ದಾರೆ. ಮಗ ಹಾಗು ಸೊಸೆ ಇಬ್ಬರೂ ಬೆಂಗಳೂರಿನಲ್ಲಿದ್ದಾರೆ.
ಮಗಳು ತನ್ನ ಕುಟುಂಬದೊಂದಿಗೆ ಚಿಕ್ಯಾಗೊ, ಅಮೆರಿಕಾದಲ್ಲಿ ವಾಸವಾಗಿದ್ದಾರೆ.

ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನ ಗಣಿಯೋ ಎಂಬ ಕವಿ ವಾಣಿಯಂತೆ ಪಡೆದದ್ದಕ್ಕಿಂತ ಕೊಟ್ಟಿದ್ದು ಹೆಚ್ಚಾಗುವಂತೆ ಈ ಬಾಳಿನಲ್ಲಿ ಬದುಕಿದರೆ ಸಾಕು ಎಂದು ನಂಬಿದವಳು ನಾನು ಎನ್ನುವುದು ಪ್ರೇಮಕ್ಕ ಅವರ ಜೀವನದ ಘನ ಉದ್ದೇಶ.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group