ಬೀದರ – ದೆಹಲಿ ಮಹಿಳಾ ಪಿಎಸ್ಐ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ, ಜ್ವಯಿಂಟ್ ಎಕ್ಷನ್ ಸಮಿತಿಯಿಂದ ಹುಮನಾಬಾದನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದಲ್ಲಿ ಜಾಯಿಂಟ್ ಎಕ್ಷನ್ ಸಮಿತಿಯವರು ದೆಹಲಿ ಮಹಿಳಾ ಪಿಎಸ್ಐ ಅವರನ್ನು ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಮನವಿಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ ಮಾಜಿ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ, ರಾಜ್ಯ-ಕೇಂದ್ರದಲ್ಲಿನ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಚರ್ಮ ದಪ್ಪಾಗಿದೆ. ಎಂಥ ಸೊಳ್ಳೆ ಕಡಿದರೂ ತಿಳಿಯದಷ್ಟು ನಿದ್ರೆಯಲ್ಲಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಇಂಥ ಪ್ರಕರಣ ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಆಗದ ಸರ್ಕಾರ ನಿಷ್ಪ್ರಯೋಜಕ. ಇಂಥ ಜಾತಿವಾದಿ ಪಕ್ಷಗಳಿಗೆ ಚುನಾವಣೆಯ ಸಂದರ್ಭದಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಭವಿಷ್ಯದಲ್ಲಿ ಇಂಥ ಪ್ರಕರಣ ಮರುಕಳಿಸುವುದಿಲ್ಲ. ಅರಬ್ ರಾಷ್ಟ್ರಗಳಲ್ಲಿ ಕಾನೂನು ಕಠಿಣವಾಗಿರುವ ಕಾರಣ ಅಲ್ಲಿ ಅಪರಾಧ ಪ್ರಕರಣ ಶೂನ್ಯವಾಗಿದೆ. ಆದರೇ ಭಾರತ ದೇಶದಲ್ಲಿ ಶೇ.98 ಅಪರಾಧ ಪ್ರಕರಣ ನಡೆಯುತ್ತಿವೆ ಎಂದು ಟೀಕಿಸಿದರು.
ಬಳಿಕ ತಹಶೀಲ್ದಾರ ಅವರಿಗೆ ಮನವಿಪತ್ರ ಸಲ್ಲಿಸಿದರು. ಮನವಿಪತ್ರ ಸಲ್ಲಿಕೆಗೂ ಮುನ್ನ ಹಳೆ ಪುರಸಭೆಯಿಂದ ಡಾ.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಆಗಮಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಬಿ.ಪಾಟೀಲ ಸಮಿತಿಯ ಅಧ್ಯಕ್ಷ ಅಪ್ಸರಮಿಯ್ಯ, ಕಾರ್ಯದರ್ಶಿ ಎಂ.ಎ.ಸಮದ್, ಫಯಾಜ ಗುತ್ತೆದಾರ, ಎಸ್.ಎ.ಬಾಸೀತ್, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಅಂಕುಶ ಗೋಖಲೆ,ಜಿಲ್ಲಾ ಅಧ್ಯಕ್ಷ ಎಂ.ಡಿ.ಜಮೀಲಖಾನ್, ಜೆಡಿಎಸ್ ಮುಖಂಡ ಸತೀಶ ರಾಂಪೂರೆ, ಭೀಮ ಆರ್ಮಿಯ ಅನೀಲ ದೊಡ್ಡಿ, ಯಾಸಿರಲಿ ಸೇರಿದಂತೆ ವಿವಿದ ಸಮುದಾಯಗಳ ಮುಖಂಡರು, ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.