Homeಸುದ್ದಿಗಳುಜು.೧೦ ರಂದು ಅಂಗನವಾಡಿ ನೌಕರರಿಂದ ಪ್ರತಿಭಟನೆ-ಜೈನೆಖಾನ

ಜು.೧೦ ರಂದು ಅಂಗನವಾಡಿ ನೌಕರರಿಂದ ಪ್ರತಿಭಟನೆ-ಜೈನೆಖಾನ

ಮೂಡಲಗಿ: ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಅಂಗನವಾಡಿ ಕೆಲಸಗಾರರನ್ನು ನಿರ್ಲಕ್ಷ್ಯ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಮತ್ತು ರಾಜ್ಯದಲ್ಲಿ ಹೊಸ ಮೊಬೈಲ್‌ಗಳಿಗಾಗಿ ಹಾಗೂ ೨೦೨೩ ರ ಬಜೆಟ್‌ನಲ್ಲಿ ಹೆಚ್ಚಳವಾದ ೧೦೦೦ ರೂ.ಗಳ ಗೌರವಧನ ಬಿಡುಗಡೆಗಾಗಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯಾದ್ಯಂತ ತಾಲೂಕಾ ಮಟ್ಟದಲ್ಲಿ ಜು. ೧೦ ರಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಯುಟಿ ಸಹಯೋಗದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಕಾರ್ಯದರ್ಶಿ ಜಿ.ಎಮ್.ಜೈನೆಖಾನ ಹೇಳಿದರು.

ಶನಿವಾರದಂದು ಪಟ್ಟಣದ ಪತ್ರಿಕಾ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜು.೧೦ರಂದು ದೇಶಾದ್ಯಂತ ಪ್ರತಿಭಟನೆ ನಡೆಸಿ “ಕರಾಳ ದಿನ” ಆಚರಿಸುತ್ತಿದ್ದೇವೆ. ದೇಶದ ಜನತೆ ಭಾರೀ ಪ್ರಮಾಣದ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ. ದೇಶದ ೨೬ ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜೀವನ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಇದೆ. ೧೯೭೫ ರಲ್ಲಿ ಪ್ರಾರಂಭವಾದಂತಹ ಸಮಗ್ರ ಬಾಲ ವಿಕಾಸ ಯೋಜನೆ  (ಐಸಿಡಿಎಸ್) ಯಲ್ಲಿ ದುಡಿಯುತ್ತಿರುವ ರಾಜ್ಯದ ೧ ಲಕ್ಷ ೨೬ ಸಾವಿರ ಅಂಗನವಾಡಿ ನೌಕರರು ಕಡಿಮೆ ವೇತನದಲ್ಲಿ ಗೌರವಧನದ ಆಧಾರದಲ್ಲಿ ೪೮ ವರ್ಷಗಳಿಂದ ದುಡಿಯುತ್ತಿದ್ದಾರೆ. ಇಲ್ಲಿಯವರೆಗೂ ಸರ್ಕಾರ ಇವರಿಗೆ ಕನಿಷ್ಠ ಕೂಲಿ ಕಾಯ್ದೆಯಲ್ಲಿ ತರುವಂತಹ ಅಥವಾ ಕನಿಷ್ಠ ಸೌಲಭ್ಯವನ್ನಾದರೂ ನೀಡುವ ಗೋಜಿಗೆ ಹೋಗದೆ ಇರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ರಾಜ್ಯ ಸರಕಾರ ಕುಟುಂಬದ ಪೌಷ್ಠಿಕ ಸಮೀಕ್ಷೆ ನಡೆಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಹಿಂದೆ ನೀಡಿರುವ ಹಳೆಯ ಮೊಬೈಲ್ ಗಳಿಂದ ಕಾರ್ಯನಿರ್ವಹಿಸಬೇಕೆಂದು ಒತ್ತಾಯಿಸುತ್ತಿದೆ.  ಇದು ಅಸಾಧ್ಯ.  ಹೀಗಾಗಿ ಕೈಬರಹದ ಮೂಲಕ ಸಮೀಕ್ಷೆಗೆ ಅವಕಾಶ ನೀಡಬೇಕು. ಜುಲೈ ೧೦ ರಂದು ಜಿಲ್ಲೆಯ ಎಲ್ಲ ಮೊಬೈಲ್‌ಗಳನ್ನು ಇಲಾಖೆಗೆ ವಾಪಸ್ ನೀಡಲು ಅಂಗನವಾಡಿ ನೌಕರರ ಸಂಘ ಸಿಐಟಿಯು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.

ಕಳೆದ ಬಜೆಟ್ ನಲ್ಲಿ ರೂ. ಸಾವಿರ ವೇತನ ಹೆಚ್ಚಳ ಮಾಡಿದ್ದನ್ನು ಕೂಡಲೇ ಪಾವತಿಸಬೇಕೆಂದು ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರಮುಖವಾಗಿ ಹೊಸ ಮೊಬೈಲ್ ಗಳನ್ನ ನೀಡಬೇಕು, ಸಹಾಯಕಿಯರಿಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿ ಜು.೧೦ ತಾಲೂಕಾ ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜಾರಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಸರ್ಕಾರದ ಯೋಜನೆಗಳನ್ನು ಜಾರಿ ಮಾಡಲು ಅಂಗನವಾಡಿ ನೌಕರರು ಬೇಕು. ಆದರೆ ಸೌಲಭ್ಯ ಮಾತ್ರ ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅಂಗನವಾಡಿ ನೌಕರರು ಗರ್ಭೀಣಿ ಬಾಣಂತಿಯರ ಹಾಗೂ ಅಪೌಷ್ಠಿಕ ಆಹಾರದಿಂದ ನರಳುವ ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಗೋದಾವರಿ ರಾಜಾಪೂರ, ಗ್ರಾ.ಪಂ ನೌಕರರ ಸಂಘದ ಮೂಡಲಗಿ ತಾಲೂಕಾ ಅಧ್ಯಕ್ಷ ರಮೇಶ ಹೋಳಿ, ಉಪಾಧ್ಯಕ್ಷ ಬಸವರಾಜ ಮಿರ್ಜಿ ಇದ್ದರು.

RELATED ARTICLES

Most Popular

error: Content is protected !!
Join WhatsApp Group