ಇಂದು ಪುನೀತ್ ಜನ್ಮದಿನ. ಇವತ್ತಿಗೂ ಪಡ್ಡೆ ಹುಡುಗರು “ಹೇ ಪಾರೊ” ಎಂದು ಹುಡುಗಿಯರನ್ನು ಚುಡಾಯಿಸಿದಾಗ, ಪುನೀತ್ ರಾಜ್ ಕುಮಾರ್ ಹಾಡು ಕೇಳಿ ಖುಷಿ ಪಟ್ಟು,ನಂತರ ಅವರ ಸ್ಮರಣೆ ಮಾಡುತ್ತಾರೆ.
ವಂಶಿ ಚಲನಚಿತ್ರದಲ್ಲಿ ಅಪ್ಪುವಿನ ಅಭಿನಯ ನೋಡಿದ ಪ್ರತಿಯೊಬ್ಬರೂ ತಮ್ಮ ತಾಯಿಗೆ ಗೌರವಿಸುವುದನ್ನು ಕಲಿತಿದ್ದಾರೆ, ಡೈವರ್ಸ್ ಗೆ ಅಪ್ಲೈ ಮಾಡಿದ ಅನೇಕ ಜೋಡಿಗಳು ಇವರ “ಮಿಲನ” ಚಲನಚಿತ್ರ ನೋಡಿ ಒಂದಾಗಿದ್ದು ಉದಾಹರಣೆಗಳಿವೆ. “ದೊಡ್ಮನೆ ಹುಡುಗ” ಚಿತ್ರ ನೋಡಿದಾಗ ಕುಟುಂಬದ ಹಿರಿಯರನ್ನ ಗೌರವಿಸುವ ಗುಣ ನಮ್ಮ ಯುವಕರು ಕಲಿತಿದ್ದು ಉಂಟು. ಇವರ” ಅಪ್ಪು” ಸಿನಿಮಾ ಪ್ರೀತಿಗೆ ಯಾವುದೇ ಅಂತಸ್ತಿನ ಅಗತ್ಯ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.
ಡಾ. ಪುನೀತ್ ರಾಜಕುಮಾರ್ ಮಾರ್ಚ್ 17,1975 ರಲ್ಲಿ ಡಾ. ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ ಅವರ ಪುತ್ರನಾಗಿ ಜನಿಸಿದರು .
ಡಾ.ಪುನೀತ್ ರಾಜಕುಮಾರ ಮಕ್ಕಳಿಂದ ಹಿರಿಯರವರೆಗೂ ಎಲ್ಲರ ಅಚ್ಚುಮೆಚ್ಚಿನ ನಟನಾಗಿದ್ದರು. ಸಾಮಾನ್ಯವಾಗಿ ಎಲ್ಲರೂ ನಟರಾಗಿರುತ್ತಾರೆ, ಆದರೆ ಪುನೀತ್ ರಾಜಕುಮಾರ್ ಒಬ್ಬ ಪವರ್ ಸ್ಟಾರ್ ಆಗಿದ್ದರು.
ಪವರ್ ಸ್ಟಾರ್ ಅದರ ಅರ್ಥ ಆತನ ಕುಟುಂಬದಿಂದ ಬಂದದ್ದಲ್ಲ, ಅಮೋಘ ಅಭಿನಯ, ಸಾಹಸದಿಂದ ಬಂದಿದ್ದು, ಪವರ್ ಫುಲ್ ಡಾನ್ಸ್, ಹಾಗೂ ಪುನೀತನಲ್ಲಿರುವ ವಿಶಾಲವಾದ ಮನೋಭಾವ ದಿಂದ ಬಂದಿದ್ದು.
ಪುನೀತ್ ಬಗ್ಗೆ ಎಷ್ಟು ಹೊಗಳಿದರು ಕಡಿಮೆಯೇ ಯಾಕೆಂದರೆ ಇವರದು ಅಪರೂಪದ ವ್ಯಕ್ತಿತ್ವ ಸ್ಟಾರ್ ನಟನ ಮಗನಾಗಿ ಹುಟ್ಟಿದರೂ ಕೂಡ ತಂದೆಯ ಹೆಸರನ್ನು ಬಳಕೆ ಮಾಡದೇ ತಾನು ಏನಾದರೂ ಸಾಧಿಸುವ ಛಲ ಹೊಂದಿದ ವ್ಯಕ್ತಿ.
ಬಾಲ ನಟನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಅಪ್ಪನೊಂದಿಗೆ, ಅಮೋಘ ನಟನೆಯಿಂದ ಗುರುತಿಸಿಕೊಂಡ ಪುನೀತ್ ರಾಜಕುಮಾರ್ ಗೆ ಬಾಲ್ಯದಲ್ಲಿ 1985 ರಲ್ಲಿ ನಟಿಸಿದ “ಬೆಟ್ಟದ ಹೂವು” ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ದೊರಕಿದೆ, ತಂದೆಯಿಂದ ಕೊಡುಗೆಯಾಗಿ ಬಂದಂತಹ ಅಭಿನಯ ರಕ್ತಗತವಾಗಿದ್ದರೂ ಕೂಡ, ಸಿನಿಮಾದಲ್ಲಿ ನಟಿಸುವ ಆಸೆ ಇವರಿಗೆ ಇರಲಿಲ್ಲ, ಡಾಕ್ಟರ್ ರಾಜಕುಮಾರ್ ಅವರು ಕೂಡ ಅಷ್ಟೇ ,ಮಗನ ಆಸೆ ಹೇಗಿದೆ ಅವನು ಹಾಗೆ ಬದುಕಲಿ ಎಂದು ಹೇಳಿದವರು.
ಬಾಲಕಲಾವಿದನಾಗಿ ಪುನೀತ್ ಅಭಿನಯಿಸಿದ ಉತ್ಕೃಷ್ಟ ಚಿತ್ರ `ಬೆಟ್ಟದ ಹೂ’. 1984 ರಲ್ಲಿ ತೆರೆಕಂಡ ಎನ್ ಲಕ್ಷ್ಮಿ ನಾರಾಯಣ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಬಾಲಕ ರಾಮು ಆಗಿ ನಟಿಸಿದರು. ಶಾಲೆಗೆ ಹೋಗುವ ಬಡ ಬಾಲಕನೊಬ್ಬನ ತಳಮಳಗಳನ್ನು ಚಿತ್ರ ಚೆನ್ನಾಗಿ ಬಿಂಬಿಸಿತು. ಈ ಚಿತ್ರ ಇಂಗ್ಲೀಷ್ ಕಾದಂಬರಿ `ವಾಟ್ ದೆನ್ ರಾಮನ್’ ಆಧಾರಿತವಾಗಿತ್ತು. ಈ ಚಿತ್ರದ ಅಭಿನಯಕ್ಕಾಗಿ ಪುನೀತ್‌ಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು.
ಸಿನಿಪಯಣ – ಬಾಲ ಕಲಾವಿದ ಪುನೀತ್ ಆರು ತಿಂಗಳು ಮಗುವಿದ್ದಾಗ 1976ರಲ್ಲಿ ತೆರೆಕಂಡ `ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಬಂದ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದರು. ಭಾಗ್ಯವಂತ ಚಿತ್ರದ `ಬಾನ ದಾರಿಯಲ್ಲಿ ಸೂರ್ಯ’, ಚಲಿಸುವ ಮೋಡಗಳು ಚಿತ್ರದ `ಕಾಣದಂತೆ ಮಾಯವಾದನೋ’, ಯಾರಿವನು ಚಿತ್ರದ `ಕಣ್ಣಿಗೆ ಕಾಣುವ ದೇವರು’ ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಪ್ರಶಂಸೆ ಪಡೆದರು. `ಚಲಿಸುವ ಮೋಡಗಳು’ ಮತ್ತು `ಎರಡು ನಕ್ಷತ್ರಗಳು’ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.
ನಾನು ಏನಾದರೂ ಸಾಧನೆ ಮಾಡಬೇಕು ತನ್ನದೇ ಒಂದು ಕೆಲಸ ಕಾರ್ಯಗಳಿಂದ ಗುರುತಿಸಿಕೊಳ್ಳಬೇಕು ಎಂಬ ಛಲ ಹೊಂದಿರುವ ಪುನೀತ್ ರಾಜಕುಮಾರ್ ಅವರು ಅನೇಕ ಬಿಜಿನೆಸ್ ಗಳಲ್ಲಿ ಕೈ ಹಾಕಿ ಕೈ ಸುಟ್ಟುಕೊಂಡರು.
ವೀರಪ್ಪನ್ ಡಾಕ್ಟರ್ ರಾಜಕುಮಾರ್ ಅವರನ್ನು ಅಪಹರಿಸಿದ ಆ ಸಂದರ್ಭದಲ್ಲಿ ಡಾ. ರಾಜ ಕುಮಾರ್ ಅವರನ್ನು ಸಂದರ್ಶನ ಮಾಡಲು ಹೋದ ನಕ್ಕಿರನ್ ಗೋಪಾಲ ವರದಿಗಾರರಿಗೆ ಹೇಳಿದರಂತೆ, ನಾನು ಬದುಕುತ್ತೇನೆ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ಮಗ ಅಪ್ಪುವನ್ನು ಒಬ್ಬ ಹೀರೋ, ಯಶಸ್ವಿ ನಾಯಕ ನಟನಾಗಿ ನೋಡುವ ಆಸೆ ಇದೆ ಎಂದು ಹೇಳಿದರಂತೆ.
ಅಪ್ಪನ ಆಸೆಯಂತೆ ಮತ್ತೆ ಚಿತ್ರರಂಗಕ್ಕೆ ಡಾ.ಪುನೀತ್ ರಾಜಕುಮಾರ್ “ಅಪ್ಪು” ಚಿತ್ರದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿದರು .ಅಪ್ಪು ತನ್ನ ಅಮೋಘ ಅಭಿನಯದಿಂದ ಕನ್ನಡದ ಮನೆ ಮನಗಳಲ್ಲೂ ತನ್ನ ಛಾಪು ಮೂಡಿಸಿದರು. ಒಂದಾದ ನಂತರ ಒಂದು ವಿವಿಧ ಕಥೆಗಳನ್ನು ಹೊಂದಿರುವ ಹಿಟ್ ಚಿತ್ರಗಳನ್ನು ನೀಡಿದ ಅಪ್ಪು ಅಭಿಮಾನಿಗಳ ಪಾಲಿನ ದೇವರಾದರು.
ಅಪ್ಪು ಯುವಕರ ಕಣ್ಮಣಿ, ಪವರ್ ಸ್ಟಾರ್ ಎಂಬ ಪಟ್ಟ ಹೊಂದಿದರು. ಅಪ್ಪುವಿನ ಸ್ಟೈಲ್, ಡಾನ್ಸ್ ಸ್ಮೈಲ್ ಆಕ್ಟಿಂಗ ಯುವಕರಲ್ಲಿ ಕ್ರೇಜ ಹುಟ್ಟಿಸಿತು.ಯಾವ ಪಾತ್ರವಾದರೂ ಸರಿ ಅದಕ್ಕೆ ಜೀವ ತುಂಬುತ್ತಿದ್ದರು. ಸ್ಟಾರ್ ನಟನ ಮಗನಾಗಿದ್ದರೂ ಕೂಡ ಯಾವುದೇ ರೀತಿಯ ಅಹಂಕಾರವಿಲ್ಲದೆ ಸರಳ ಜೀವನ ಮಾಡುತ್ತಿದ್ದ ಅಪ್ಪು ಎಲ್ಲಾ ವಯಸ್ಸಿನವರ ಅಚ್ಚುಮೆಚ್ಚಿನ ನಾಯಕನಟನಾಗಿದ್ದ.
ಪುನೀತ್ ಅವರ ವಿಶೇಷತೆ ಬಗ್ಗೆ ಹೇಳುವುದಾದರೆ ಅನೇಕ ರೋಚಕ ಸಂಗತಿಗಳನ್ನು ಕೇಳಿದ್ದೇವೆ, ಅನೇಕ ನಾಯಕ ನಟರು ಜಾಹೀರಾತಿನ ನಟನೆಯ ವೆಚ್ಚ ಕೇಳಿದರೆ ಬೆರಗಾಗುತ್ತೇವೆ, ಆದರೆ ಡಾ. ಪುನೀತ್ ರಾಜಕುಮಾರ್ ಒಬ್ಬ ಶ್ರೇಷ್ಠ ಹಾಗೂ ಬೇಡಿಕೆ ನಟನಾಗಿದ್ದರೂ ಕೂಡ ಯಾವುದೇ ಸಂಭಾವನೆ ಪಡೆಯದೆ ಸರಕಾರದ ಜಾಹಿರಾತುಗಳಲ್ಲಿ ಮುಕ್ತವಾಗಿ ಅಭಿನಯಿಸುತ್ತಿದ್ದರು.ಇವರು ನಡೆಸುತ್ತಿದ್ದ ಖಾಸಗಿ ಕಾರ್ಯಕ್ರಮದಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ತಿಳಿದು ಬಂದಾಗ, ಯಾವುದೇ ರೀತಿಯ ವಿವಾದ ಮಾಡದೆ ಅದನ್ನು ಸ್ಥಗಿತಗೊಳಿಸಿದರು.
ಸಾಮಾನ್ಯವಾಗಿ ಸ್ಟಾರ್ ನಟರ ಆಸ್ತಿ ಲೆಕ್ಕಾಚಾರ ಕೇಳಿದಾಗ ನಾವು ಆಶ್ಚರ್ಯಗೊಳ್ಳುವುದು ಸಾಮಾನ್ಯ.ದೇಶ ವಿದೇಶಗಳಲ್ಲಿ ಹತ್ತಾರು ಬಂಗಲೆಗಳು, ದುಬಾರಿ ಬೆಲೆ ಬಾಳುವ ಕಾರುಗಳು, ದೊಡ್ಡ ದೊಡ್ಡ ಕಂಪನಿಗಳಲ್ಲಿ ಶೇರ್ ಹೊಂದಿರುವುದು, ದೊಡ್ಡ ದೊಡ್ಡ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿರುವು ಸರ್ವೇಸಾಮಾನ್ಯ. ಆದರೆ ಪುನೀತ್ ರಾಜಕುಮಾರ್ ಅವರು ಕೇವಲ ಅರ್ಥಪೂರ್ಣವಾದ ಜಾಹಿರಾತುಗಳನ್ನು ಮಾತ್ರ ಮಾಡುತ್ತಿದ್ದರು. ಹಣಕ್ಕೆ ಯಾವತ್ತಿಗೂ ಬೆಲೆ ಕೊಡದ ಅಸ್ತಿತ್ವ ಇವರದಾಗಿತ್ತು. ಎಷ್ಟೋ ಸ್ಟಾರ್ ನಟರು ಇವತ್ತಿಗೂ ಕೂಡ ಬೇಡವಾದ ಅನೇಕ ಜಾಹಿರಾತುಗಳಲ್ಲಿ ನಟನೆ ಮಾಡಿ ಜಾಹಿರಾತುಗಳಲ್ಲಿ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ, ಆದರೆ ಪುನೀತ್ ಅವರ ಮಾತೇ ಬೇರೆ, ಅಗತ್ಯ ಇರುವ ಹಾಗೂ ಬೇಡಿಕೆಯ ಜಾಹೀರಾತುಗಳಲ್ಲಿ ಮಾತ್ರ ನಟಿಸುತ್ತಿದ್ದರು.
ಗಾಯಕನಾಗಿ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಪುನೀತ್, ಗಾಯನದಿಂದ ಬರುವ ಸಂಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾರೆ. ಕಿರುತೆರೆಯಲ್ಲಿ ನಿರೂಪಕರಾಗಿ ಕನ್ನಡದ ಕೋಟ್ಯಧಿಪತಿಯ ಎರಡು ಸೀಸನ್‌ಗಳನ್ನು ಮತ್ತು ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊಟ್ಟಮೊದಲ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷ.
2002ರಲ್ಲಿ ತೆರೆಕಂಡ ಪುರಿ ಜಗನ್ನಾಥ ನಿರ್ದೇಶನದ `ಅಪ್ಪು’ ಚಿತ್ರದಿಂದ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಈ ಚಿತ್ರ ಅದ್ಧೂರಿ ಯಶಸ್ಸು ಕಂಡಿತು. ನಂತರ ತೆರೆಗೆ ಬಂದ ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್ , ನಮ್ಮ ಬಸವ, ಅಜಯ್ ಮುಂತಾದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಒಳ್ಳೆ ದಾಖಲೆ ಮಾಡಿ ಅದ್ದೂರಿ ಪ್ರದರ್ಶನ ಕಂಡವು. ಇವರು ನಾಯಕನಾಗಿ ನಟಿಸಿದ ಮೊದಲ ಹತ್ತು ಚಿತ್ರಗಳು ಶತದಿನ ಪೂರೈಸಿದ್ದು ದಾಖಲೆ. ನಾಯಕನಾಗಿ ಎರಡು ರಾಜ್ಯ ಪ್ರಶಸ್ತಿ, ನಾಲ್ಕು ಫಿಲ್ಮಫೇರ್,ಎರಡು ಸೈಮಾ ಹೀಗೆ ಹತ್ತು ಹಲವು ಪ್ರಶಸ್ತಿ ಪಡೆದಿದ್ದಾರೆ.ಮೈಸೂರಿನ ಶಕ್ತಿ ಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್ `ಬೆಂಗಳೂರು ಪ್ರೀಮೀಯರ್ ಪುಟ್‌ಬಾಲ್ ತಂಡದ ಒಡೆತನವನ್ನು ಹೊಂದಿದ್ದಾರೆ.ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು LED ಬಲ್ಬ್‌ಗಳ ರಾಯಭಾರಿಯಾಗಿ ಕೂಡ ಪ್ರಸ್ತುತರು. ಒಂದು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು.ಎಂಬುದು ವಿಶೇಷ.
ನಮ್ಮ ಪುನೀತ್ ಅವರ ಆಸ್ತಿ ಏನು ಗೊತ್ತೇ?
40 ಅನಾಥಾಲಯಗಳು
19 ಗೋ ಶಾಲೆಗಳು
16 ವೃದ್ಧಾಶ್ರಮಗಳು
26 ಅನಾಥಾಶ್ರಮಗಳು
ಅಲ್ಲದೆ 1800 ಅನಾಥ ಹೆಣ್ಣು ಮಕ್ಕಳಿಗೆ ದತ್ತು ಪಡೆದು ಅವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತಿಕೊಂಡವರು.ಒಂದು ಕೈಯಿಂದ ಮಾಡಿದ ಸಹಾಯ ಇನ್ನೊಂದು ಕೈಗೆ ಗೊತ್ತಿರದೆ ಮಾಡಿದ ಇವರ ಚಾರಿಟಿ ಸೇವೆ ಕುಟುಂಬದವರಿಗೂ ,ಆಪ್ತ ಗೆಳೆಯರಿಗೂ ಕೂಡ ಗೊತ್ತಿರದೇ ಇರುವ ವಿಷಯಗಳು ಇವರ ಸಾವಿನ ನಂತರ ಗೊತ್ತಾಗಿದೆ.
ಪ್ರಧಾನಮಂತ್ರಿಯ ರಾಹತ್ ಯೋಜನೆಗೆ 50 ಲಕ್ಷ ದಾನ ನೀಡಿದ ಮಹಾ ದಾನಿ. ಅನೇಕ ಕಾರ್ಯಕ್ರಮಗಳಲ್ಲಿ ತನ್ನ ಸುಮಧುರ ಕಂಠದಿಂದ ಹಾಡಿ ಪಡೆಯುತ್ತಿದ್ದ ಸಂಭಾವನೆಗಳನ್ನು ಅನಾಥಾಶ್ರಮಗಳಿಗೆ ಬಳಸುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಒಬ್ಬ ನಟರನ್ನು ನಾವು ಮಾತನಾಡಿಸಬೇಕಾದರೆ ತಿಂಗಳುಗಟ್ಟಲೆ ಪ್ರಯತ್ನ ಪಡಬೇಕು, ಅದಾದ ನಂತರ ಸಂಭಾವನೆ ಕೂಡ ಭರಿಸಬೇಕು, ಆದರೆ ಅಪ್ಪು ಹಾಗಲ್ಲ ಅಭಿಮಾನಿಗಳನ್ನು ದೇವರು ಎಂದ
ಮಹಾನುಭಾವ. ಇವರ ಹೃದಯವಂತಿಕೆ, ಸರಳತೆ, ಪ್ರಾಮಾಣಿಕ ಸೇವೆ,ಅಮೋಘ ನಟನೆ
ಇವರನ್ನು ಕರ್ನಾಟಕದ ಮನೆ ಮನೆಯಲ್ಲಿ ಪೂಜೆಸುವಂತಾಗಿದೆ.
ತನ್ನೊಂದಿಗೆ ಇರುವ ಅನೇಕ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಚಲನಚಿತ್ರಗಳಲ್ಲಿ ಅವಕಾಶ ಮಾಡಿಕೊಟ್ಟರು, ತನ್ನೊಂದಿಗೆ ಇರುವ ಇತರ ನಟರೊಂದಿಗೆ ಸರಳವಾಗಿ ಮಾತನಾಡುತ್ತಿದ್ದರು, ಅವರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದರು. ನಿರ್ಮಾಪಕ ನಿರ್ದೇಶಕರಿಗೆ ನಷ್ಟ ಆಗುವ ಸಾಧ್ಯತೆ ಇರುವಾಗ ತನ್ನ ತನ್ನ ಸಂಭಾವನೆಯ
ಹಣದಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದರು.ಯಾವುದೇ ಅಹಂ ಇಲ್ಲದೆ ಕಿರಿಯರನ್ನು ಮಾರ್ಗದರ್ಶಿಸುವುದು ಹಿರಿಯರನ್ನು ಗೌರವಿಸುವುದು ಅಪ್ಪುವಿನ ಸ್ವಭಾವವಾಗಿತ್ತು. ಕೇವಲ ನಟನಾಗಿರದೆ, ಗಾಯಕನಾಗಿ ,ನಿರ್ದೇಶಕನಾಗಿ, ನಿರ್ಮಾಪಕನಾಗಿ ಕೆಲಸ ಮಾಡಿದ್ದಲ್ಲದೆ,ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿ ಕೆಲಸ ಮಾಡಿದರು.
ಇವರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ದೇಶ ವಿದೇಶಗಳಲ್ಲಿರುವ ಸಿನಿಮಾ ಇಂಡಸ್ಟ್ರಿಗಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದರು,
ವಿವಾಹ:1999ರಲ್ಲಿ ಚಿಕ್ಕಮಗಳೂರಿನವರಾದ ಅಶ್ವಿನಿಯವರನ್ನು ಕೈಹಿಡಿದರು.ಈ ದಂಪತಿಗಳಿಗೆ ಧೃತಿ ಮತ್ತು ವಂದಿತಾ ಎಂಬ ಮಕ್ಕಳು. ಚಿತ್ರ ನಿರ್ಮಾಪಕರಾಗಿ `ಕವಲುದಾರಿ’, `ಮಯಾಬಜಾರ್’ ಎಂಬ ಚಿತ್ರಗಳನ್ನು ತಮ್ಮ ಹೋಮ್ ಬ್ಯಾನರ್‌ನಲ್ಲಿಯೇ ನಿರ್ಮಿರುವ ಪುನೀತ್ ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿ ಕೂಡ ನಿರ್ಮಿಸಿದ್ದಾರೆ. ತಾಯಿಯ ನೆನಪಿನಲ್ಲಿ `ಪಿಆರ್‌ಕೆ ‘ ಆಡಿಯೋ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ.
ಇವರ ಸರಳತೆಗೆ ತೆಲುಗು ,ತಮಿಳು, ಮಲಯಾಳಂ ನಟರು ಮಾರುಹೋಗಿದ್ದರು……ಇವರ ನಗು , ಇವರ ಸ್ಟೈಲ್, ಇವರ ಸ್ಟೈಲ್, ಪವರ್ ಫುಲ್ ನಟನೆ ಯಾವತ್ತಿಗೂ ಅಜರಾಮರ……
ನಿಧನ: 2021 ಆಕ್ಟೋಬರ್ 29ರ ಬೆಳಗ್ಗೆ ಜಿಮ್ ಮಾಡುವಾಗ ಲಘು ಹೃದಯಾಘಾತದಿಂದ ಕುಸಿದು ಬಿದ್ದ ಪುನೀತ್, ಹತ್ತಿರದ ರಮಣಶ್ರೀ ಆಸ್ಪತ್ರೆಗೆ ದಾಖಲಾದರು. ತುರ್ತು ಚಿಕಿತ್ಸೆಯ ನಂತರ ಪುನೀತ್ ಅವರನ್ನು ವಿಕ್ರಮ್ ಆಸ್ಪತ್ರೆಯ ತೀವ್ರನಿಘಾ ಘಟಕಕ್ಕೆ ದಾಖಲಾಯಿತು. ಆದರೆ, ನಮ್ಮೆಲ್ಲರ ಪ್ರೀತಿಯ ಅಪ್ಪು ಚಿಕಿತ್ಸೆ ಫಲಕಾರಿಯಾಗದೇ 11.45ರ ಸುಮಾರಿಗೆ ನಿಧನರಾದರು.ನಾನಂತೂ ಆ ದಿನ ಏನು ಮಾಡಬೇಕೆಂದು ತಿಳಿಯದೇ ಕುಳಿತು ಬಿಟ್ಟಾಗ ನನ್ನ ಮಕ್ಕಳು ನನ್ನ ಪತಿ ನನ್ನನ್ನು ಸಂತೈಸಿದ ರೀತಿ ತಿಂಗಳು ಗಟ್ಟಲೇ ಆಗಿ ಹೋಯಿತು.ಕೇವಲ ಇದು ಮಾತಲ್ಲ. ನಾನು ಅಪ್ಪುವಿನ ಬಗ್ಗೆ ಹೊಂದಿರುವ ಅಭಿಮಾನಕ್ಕೆ ಸಾಕ್ಷಿ.ಇಂದಿಗೂ ನನ್ನಂತಹ ಅಭಿಮಾನಿಗಳು ಅಪ್ಪುವಿಗೆ ಇರುವುದರಿಂದ ಅಪ್ಪು ಸಾವಿನ ನಂತರ ಕೂಡ ಅಜರಾಮರ ಆಗಿರುವುದಕ್ಕೆ ಸಾಕ್ಷಿ.ಸಮಾಜಮುಖಿ ಕಾರ್ಯಗಳ ಬಗ್ಗೆ ಪುನೀತ್ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ‘ಜೇಮ್ಸ್’ ಚಿತ್ರೀಕರಣ ವೇಳೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಕೊಡುಗೆಯಾಗಿ 1 ಲಕ್ಷ ರೂ. ನೀಡಿದ್ದರು. ಹಳ್ಳಿಯಿಂದ ನಗರಕ್ಕೆ ಬಂದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರಿಗೆ ಒಂದೇ ವೇದಿಕೆ ಕಲ್ಪಿಸುವ ಉದ್ದೇಶದಿಂದ ಶ್ರೀವತ್ಸ ವಾಜಪೇಯಿ ಆರಂಭಿಸಿದ್ದ ‘ಫೀಡ್ ಫಾರ್ ಫಾರ್ಮರ್’ ಯೋಜನೆ ಬೆಂಬಲಿಸಿ ರಾಯಭಾರಿಗಳಾಗಿದ್ದರು. 2019ರಲ್ಲಿಉತ್ತರ ಕರ್ನಾಟಕದ ಪ್ರವಾಹ ಸಂದರ್ಭದಲ್ಲಿ 5 ಲಕ್ಷ ರೂ. ದೇಣಿಗೆ ನೀಡಿದ್ದರು.ಪುನೀತ್ ಸಂಗೀತ ಲೇಬಲ್ ಪಿ.ಆರ್.ಕೆ ಆಡಿಯೊದ ಸ್ಥಾಪಕರು ಮತ್ತು ಮಾಲೀಕರಾಗಿದ್ದರು. ಪಿ ಆರ್ ಕೆ ಆಡಿಯೋ ಯೂ ಟ್ಯೂಬ್ ನಲ್ಲಿ ಅಕ್ಟೋಬರ್ ೨೦೨೧ ರಂದು ತ ೧.೧೩ ಮಿಲಿಯನ್ ಚಂದಾದಾರರನ್ನು ಹೊಂದಿದೆ.
ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ನಟನೆ, ಸಿನಿಮಾ ನಿರ್ಮಾಣದ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ ಈ ಕುರಿತು ಅವರು ಹೇಳಿಕೊಳ್ಳುತ್ತಿರಲಿಲ್ಲ, ಪ್ರಚಾರ ಬಯಸುತ್ತಿರಲಿಲ್ಲ. ಇಂದು ಅವರು ದೈಹಿಕವಾಗಿ ಅಗಲಿ ಎರಡು ವರ್ಷಗಳು ಉರುಳಿವೆ.
ನಟನೆಯಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ನಟ ಪುನೀತ್ ಮುಂದಿದ್ದರು. ಕೋವಿಡ್ ಸಂದರ್ಭದಲ್ಲಿ ಸಿಎಂ ನಿಧಿಗೆ 50 ಲಕ್ಷ ರೂ. ನೀಡಿದ್ದ ಅಪ್ಪು, ಗೌರವಧನ ಪಡೆಯದೇ 2012ರಲ್ಲಿ ಕೆಎಂಎಫ್‌ನ ಉತ್ಪನ್ನವಾದ ನಂದಿನಿ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದು ವಿಶೇಷ. ಈ ಹಿಂದೆ ಡಾ. ರಾಜಕುಮಾರ್ ಸಹ ಗೌರವಧನ ಪಡೆಯದೇ 13 ವರ್ಷ ಕೆಎಂಎಫ್ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದನ್ನು ಸ್ಮರಿಸಬಹುದು. ಪುನೀತ್ ಅವರು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಉತ್ಪನ್ನಗಳ ಬ್ರಾಂಡ್ ರಾಯಭಾರಿ ಆಗಿದ್ದರು. ಎಲ್ಇಡಿ ಬಲ್ಬ್ ಯೋಜನೆ, ೭ ಅಪ್ (ಪೆಪ್ಸಿಕೋ), ಎಫ್-ಸ್ಕ್ವೇರ್, ಡಿಕ್ಸಿ ಸ್ಕಾಟ್, ಮಲಬಾರ್ ಗೋಲ್ಡ್, ಗೋಲ್ಡ್ ವಿನ್ನರ್, ಜಿಯೋಕ್ಸ್ ಮೊಬೈಲ್, ಪೋಥಿಸ್, ಫ್ಲಿಪ್‌ಕಾರ್ಟ್ ಮತ್ತು ಮಣಪ್ಪುರಂ, ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ರಾಂಡ್ ರಾಯಭಾರಿ ಆಗಿದ್ದರು. ಮೈಸೂರಿನ ಶಕ್ತಿಧಾಮ ಆಶ್ರಮದಲ್ಲಿ ಪುನೀತ್ ತನ್ನ ತಾಯಿಯೊಂದಿಗೆ ಪರೋಪಕಾರದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಬೆಂಗಳೂರು ರಾಯಲ್ಸ್, ಪ್ರೀಮಿಯರ್ ಫುಟ್ಸಲ್ ತಂಡವನ್ನು ಹೊಂದಿದ್ದರು.
ಪುನೀತ್ ರಾಜಕುಮಾರ್ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಮತ್ತು ಸಮಾಜಮುಖಿ ಕಳಕಳಿಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯ 2022ರ ಮಾರ್ಚ್ ತಿಂಗಳಿನಲ್ಲಿ ಮರಣೋತ್ತರ `ಡಾಕ್ಟರೇಟ್’ ನೀಡಿ ಗೌರವಿಸಿತು.ಕನ್ನಡ ಚಿತ್ರರಂಗದ ಟಾಪ್ ನಟನೊಬ್ಬರು ತನ್ನ ಜೀವನ ಮತ್ತು ಸಿನಿಜೀವನದ ಉತ್ತುಂಗುದ ಕಾಲದಲ್ಲಿಯೇ ನಿಧನವಾಗಿದ್ದು ಕನ್ನಡ ಚಿತ್ರರಂಗದ ಪಾಲಿಗೆ ದುರ್ದೈವವೇ ಸರಿ
ಇವರ ಕೋಟಿಗಟ್ಟಲೆ ಅಭಿಮಾನಿಗಳಲ್ಲಿ ನಾನೊಬ್ಬ ಅಪ್ಪಟ ಅಭಿಮಾನಿಯಾಗಿದ್ದು …… “ಮತ್ತೆ ಹುಟ್ಟಿ ಬಾ ಅಪ್ಪು”ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು….
ನಂದಿನಿ ಸನಬಾಳ್, ಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾ ಕಲಬುರಗಿ