ಬಾಗಲಕೋಟೆ : ಪುರಾಣ-ಪುಣ್ಯಕಥೆಗಳನ್ನು ಕೇಳುವ ಮನಸ್ಸುಗಳಲ್ಲಿ ಧನಾತ್ಮಕ ಚಿಂತನೆಗಳನ್ನು ಒಡಮೂಡಿಸುತ್ತವೆ. ನೆಮ್ಮದಿಯುತ ಬದುಕಿಗೆ ದಾರಿದೀಪಗಳಾಗುತ್ತವೆ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಶನಿವಾರ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವ, ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವಜ್ರ ಮಹೋತ್ಸವದ ಹಾಗೂ ಕಮತಪರ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ೧೨ನೇ ಶತಮಾನ ಸರ್ವಕಾಲಕ್ಕೂ ಪ್ರಸ್ತುತವೆನಿಸುವ ವಚನ ಸಾಹಿತ್ಯದ ಶತಮಾನವಾಗಿದೆ. ಸಮಾನತೆ ಹಾಗೂ ಕಾಯಕ ನಿಷ್ಠೆಯ ಶಿವಶರಣರ ಬದುಕು ಮಾದರಿಯಾಗಿದೆ ಎಂದರು.
ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ೧೨ನೇ ಹುಚ್ಚೇಶ್ವರ ಸ್ವಾಮೀಜಿಯವರು ಸ್ಥಾಪಿಸಿದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಗ್ರಾಮೀಣ ಭಾಗದ ಜನತೆಗೆ ಅಕ್ಷರ ದಾಸೋಹ ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುತ್ತಿರುವುದು ಮಠದ ಕೊಡುಗೆಯಾಗಿದೆ ಎಂದರು.
ಅಮೀನಗಡ ಪ್ರಭುಶಂಕರೇಶ್ವರ ಶಂಕರರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಉಪ್ಪಿನ ಬೆಟಗೇರಿ ಕುಮಾರ ವಿರೂಪಾಕ್ಷ ಸ್ವಾಮೀಜಿ, ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಸ್ವಾಮೀಜಿ, ಕುಂದರಗಿ ಅಂಕಲಗಿಯ ಅಮರಸಿದ್ದೇಶ್ವರ ಸ್ವಾಮೀಜಿ, ಕೆಲೂರ ಶಿವಗಂಗೆಯ ಮಲಯಶಾಂತ ಶಿವಾಚಾರ್ಯ ಸ್ವಾಮೀಜಿ, ಕಲ್ಲಿನಾಥ ದೇವರು, ಹಿರೇಮಠದ ಶಿವಕುಮಾರ ಸ್ವಾಮೀಜಿ, ಗಚ್ಚಿನಮಠದ ಅಮರೇಶ್ವರ ದೇವರು, ಬದಾಮಿ ಪಿಕಾರ್ಡ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಕುಮಾರಗೌಡ ಜನಾಲಿ ಇದ್ದರು.
ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಹಾಗೂ ಪಟ್ಟಾಧಿಕಾರ ರಚಿತ ಮಹೋತ್ಸವ ಸಮಿತಿಯ ಅಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಸ್ವಾಗತಿಸಿದರು.
ಉತ್ಸವ ಸಮಿತಿಯ ಹುಚ್ಚಪ್ಪ ಸಿಂಹಾಸನ, ಪಟ್ಟಣ ಪಂಚಾಯತಿ ಅಧ್ಯಕ್ಷ ರಮೇಶ ಜಮಖಂಡಿ, ಶಂಕರಲಿಂಗಪ್ಪ ಮಂಕಣಿ, ಯಲ್ಲಪ್ಪ ವಡ್ಡರ, ದೇವಿಪ್ರಸಾದ ನಿಂಬಲಗುಂದಿ, ಗುರು ಪಾಟೀಲ, ನಬಿಸಾಬ್ ತಹಶೀಲ್ದಾರ ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳು ಇದ್ದರು.