ಸಿಂದಗಿ: ಉಪ ಚುನಾವಣೆಯಲ್ಲಿ 31185 ಮತಗಳ ಅಂತರವನ್ನು ಪಡೆಯುವುದರ ಮೂಲಕ ದಿಗ್ವಿಜಯ ಸಾಧಿಸಿದ ಶಾಸಕರಾದ ರಮೇಶ ಬಾ ಭೂಸನೂರ ಅವರಿಗೆ ಸಚಿವ ಸ್ಥಾನವನ್ನು ನೀಡುವುದರ ಮೂಲಕ ವಿಜಯಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಗೌರವಾನ್ವಿತ ಬಸವರಾಜ ಬೊಮ್ಮಾಯಿ ಅವರು ಮುನ್ನುಡಿ ಬರೆಯಬೇಕೆಂದು ಬಿಜೆಪಿ ಯುವ ಮುಖಂಡ ಎಸ್ ಆರ್ ಪಾಟೀಲ (ಖೈನೂರ) ಅವರು ಆಗ್ರಹಿಸಿದ್ದಾರೆ.
ಈ ಕುರಿತು ಸಿಂದಗಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ರಮೇಶ ಭೂಸನೂರ ಅವರು 3ನೇ ಭಾರಿ ಜಯಭೇರಿ ಬಾರಿಸುವುದರೊಂದಿಗೆ ಸಿಂದಗಿ ಮತಕ್ಷೇತ್ರ ಬಿಜೆಪಿ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇಲ್ಲಿಯ ವರೆಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನರ ನಾಡಿ ಮಿಡಿತದಂತೆ ಜನರ ಸೇವೆ ಮಾಡಿದ್ದಾರೆ. ಸಿಂದಗಿ ಕ್ಷೇತ್ರದ ಬಹಳಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಇರುವುದರಿಂದ ಸಚಿವ ಸ್ಥಾನ ನೀಡುವುದರ ಮೂಲಕ ವಿಜಯಪುರ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾಗಿದೆ ಎಂಬ ಹಣೆಪಟ್ಟಿಯಿಂದ ಮುಕ್ತ ಗೊಳಿಸಬೇಕೆಂದು ಕೋರಿದ್ದಾರೆ.