ಸಿಂದಗಿ; ಆಡಳಿತಾರೂಢ ಸರಕಾರಕ್ಕೆ ವಿರೋಧ ಪಕ್ಷಗಳ ಎಚ್ಚರಿಕೆ ಗಂಟೆ ಇದ್ದರೆ ಮಾತ್ರ ಸರಿ ದಾರಿಗೆ ತರಲು ಸಾಧ್ಯ ಆ ಕಾರಣಕ್ಕೆ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದ ೬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕಾರದ ಧೋರಣೆಯನ್ನು ಖಂಡಿಸಿ ಇದೇ ಅ.೧೪ ರಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲು ನಿರ್ದರಿಸಿದ್ದೇವೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕ್ಷೇತ್ರದಲ್ಲಿ ಅತೀವೃಷ್ಠಿಯಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ ರೂ ೨೫ ಸಾವಿರ ಪರಿಹಾರ ನೀಡಬೇಕು, ಮಳೆಯಿಂದ ಬಿದ್ದ ಮನೆಗಳಿಗೆ ಈ ಸರಕಾರದಲ್ಲಿ ಪೂರ್ಣ ಬಿದ್ದ ಮನೆಗಳಿಗೆ ಬರೀ ರೂ ೧ಲಕ್ಷ ೨೫, ಅರ್ಧ ಬಿದ್ದ ಮನೆಗಳಿಗೆ ರೂ ೫೦ ಸಾವಿರ, ಅಲ್ಲದೆ ಜಲಾವೃತಗೊಂಡ ಮನೆಗಳಿಗೆ ರೂ ೫ ಸಾವಿರ ನೀಡಲಾಗುತ್ತಿದ್ದು ನಿಮ್ಮ ಸರಕಾರ ಸುಭದ್ರವಿದೆ ಎಂದು ಹೇಳುತ್ತಿದ್ದಿರಿ ಕಳೆದ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರದಲ್ಲಿ ರೂ ೫ ಲಕ್ಷ, ನೆರೆ ಹಾವಳಿಯಿಂದ ಜಲಾವೃತಗೊಂಡ ಮನೆಗಳಿಗೆ ೧೦ ಸಾವಿರ ನೀಡಲಾದ ಪರಿಹಾರ ನಿಮಗೆ ತಾಕತ್ತಿದ್ದರೆ ಇನ್ನೂ ಹೆಚ್ಚಿನ ಪರಿಹಾರ ಕೊಡುವ ಕಾರ್ಯ ಆಗಬೇಕು ಎಂದು ಆಗ್ರಹಿಸಿದರು.
ರೈತರು ಬೆಳೆದ ಎಲ್ಲ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಹಾಳಾಗಿವೆ, ಬಹುಪಾಲು ಕಬ್ಬು ಹಾನಿಯಾಗಿದೆ ಇನ್ನೂ ಉಳಿದ ಪ್ರತಿಶತ ೨೦ ಕಬ್ಬು ಕಟಾವಿಗೆ ಬಂದಿದ್ದು ಈಗಾಗಲೇ ಕೇಂದ್ರ ಸರಕಾರ ಎಂಆರ್‌ಪಿ ದರ ನಿಗದಿ ಮಾಡಿದೆ ಅವರಿಗೆ ಬೆಂಬಲ ಬೆಲೆ ನೀಡಿ ಕಬ್ಬು ಕಟಾವು ಮಾಡಬೇಕು, ಭೀಮಾನದಿ ಪ್ರವಾಹದಿಂದ ಬಾಧಿತವಾದ ಗ್ರಾಮಗಳನ್ನು ಶಾಶ್ವತ ಸ್ಥಳಾಂತರಿಸಿ ಬಸವ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಡುವ ಕೆಲಸ ವಾಗಬೇಕು, ಬಹು ವಾರ್ಷಿಕ ಬೆಳೆಗಳಿಗೆ ಎಕರೆಗೆ ರೂ ೧ ಲಕ್ಷ ಪರಿಹಾರ ಘೋಷಣೆ ಮಾಡಬೇಕು, ಸಿಂದಗಿ, ಆಲಮೇಲ ತಾಲೂಕಿನ ಎಲ್ಲ ಹದೆಗೆಟ್ಟ ರಸ್ತೆಗಳಲ್ಲಿ ಗುಂಡಿ ಮುಚ್ಚಿ ರಸ್ತೆಗಳನ್ನು ಸುಧಾರಣೆ ಮಾಡಬೇಕು ಹೀಗೆ ೬ ಬೇಡಿಕೆಗಳನ್ನು ಇಟ್ಟುಕೊಂಡು ಧರಣಿ ಪ್ರಾರಂಭಿಸಲು ನಿರ್ಧಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ರೈತ ಮೋರ್ಚಾ ಕಾರ್ಯದರ್ಶಿ ಪೀರು ಕೆರೂರ, ಸಿದ್ದರಾಮ ಆನಗೊಂಡ, ಮಹಿಳಾ ಮೋರ್ಚಾ ಅಧ್ಯಕ್ಷೆ ನೀಲಮ್ಮ ಯಡ್ರಾಮಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಕಿ, ಅಶೋಕ ನಾರಾಯಣಪುರ, ಬಂಗಾರೆಪ್ಪ ಬಿರಾದಾರ, ಮಲ್ಲು ಸಾವಳಸಂಗ ಮಾಧ್ಯಮ ಪ್ರತಿನಿದಿ ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರಿದ್ದರು.

