ಕ. ಸಾ.ಪ ಜಿಲ್ಲಾ ಘಟಕದ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
ಬೆಳಗಾವಿ :ಶರಣರ ವಚನಗಳನ್ನು ಕೇವಲ ಮನನ ಮಾಡುತ್ತಾ ಸಾರುತ್ತಾ ಸಾಗದೆ ಆ ವಚನಗಳಲ್ಲಿ ಅಡಗಿರುವ ನೈಜಭಕ್ತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡದ್ದೇ ಆದರೆ ಜೀವನ ಸಾರ್ಥಕತೆಯನ್ನು ಸಾಧಿಸಬಹುದು ಎಂದು ಸಾಹಿತಿ ಮತ್ತು ಉಪನ್ಯಾಸಕ ಡಾ. ಅ ಬ ಇಟಗಿ ಹೇಳಿದರು.
ರವಿವಾರ ದಿ 14 ರಂದು ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಕ. ಸಾ. ಪ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ದಿ. ಡಾ ಎಸ್.ವಿ ಬಾಗಿಯವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಚನಗಳಲ್ಲಿ ನಿಜ ಭಕ್ತಿಯ ನಿಲುವು’ ವಿಷಯ ಕುರಿತಾಗಿ ಮಾತನಾಡುತ್ತಾ ಅವರು ವಿವರಿಸಿದರು.
ಆಚಾರ,ವಿಚಾರ ಸಮತಾಭಾವ ಅಡಗಿರುವ ವಚನಗಳು ಮತ್ತು ಶರಣರ ಜೀವನ ಶೈಲಿ ಅನುಸರಿಸಿದ್ದೆ ಆದರೆ ಜಾತಿ, ಧರ್ಮ, ಮೇಲು, ಕೀಳು, ಗಡಿ ಸಂಘರ್ಷ ಮೀರಿ ಹೃದಯ ವೈಶಾಲ್ಯತೆ ಹೊಂದುವುದಲ್ಲದೆ ವಚನಗಳಲ್ಲಿ ಅಡಗಿರುವ ನಿಜ ಭಕ್ತಿಯ ಸಾರವನ್ನು ಅರಿತು ಅದರಂತೆ ನಡೆದರೆ ಜೀವನ ಸಾರ್ಥಕತೆಯತ್ತ ಸಾಗುವದು ಎಂದು ಶರಣರ ಅನೇಕ ವಚನಗಳನ್ನು ವಿಶ್ಲೇಷಣೆ ಮಾಡುತ್ತಾ ಭಕ್ತಿಯ ಭಾವ ನಡೆ ನುಡಿಗಳಲ್ಲಿ ಅನುಸರಿಸುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸ ರಾ ಸುಳಕೂಡೆ ಮಾತನಾಡಿ ಭಕ್ತಿ ಎಂಬುವುದು ನಮ್ಮ ಭಾವವಾಗಿರಬೇಕು. ಸಮಾಜ ಸಂಘರ್ಷಕ್ಕೆ ನಮ್ಮ ವೈಚಾರಿಕತೆಯ ಭಿನ್ನತಯೇ ಕಾರಣ ಎಂದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಸೇವೆಗಾಗಿ ಸಾಹಿತಿ ಬಿ ಕೆ ಮಲಾಬಾದಿ ಮತ್ತು ಬಸವ ಸಂಸ್ಕೃತಿಯ ಅಭಿಯಾನದಲ್ಲಿ ಬಸವಣ್ಣ ವೇಷಧಾರಿಯಾಗಿ ದ್ವಿತೀಯ ಸ್ಥಾನ ಗಳಿಸಿದ 80 ರ ಹರೆಯದ ನಿವೃತ್ತ ಉಪನ್ಯಾಸಕ ಬಿ ಎಸ್ ದೊಡ್ಡಬಂಗಿಯವರನ್ನು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಯ ರು ಪಾಟೀಲ, ಸರಜೂ ಕಾಟ್ಕರ, ಡಾ. ಬಸವರಾಜ ಜಗಜಂಪಿ, ಇಂದಿರಾ ಮೂಟೆಬೆನ್ನೂರ,ನೀಲಗಂಗಾ ಚರಂತಿಮಠ,ಡಾ. ಹೇಮಾ ಸೋನೋಳ್ಳಿ, ಅಶೋಕ ಉಳೇಗಡ್ಡಿ, ಎಂ ಕೆ ಅಲಾಸೆ, ವೀರಭದ್ರ ಅಂಗಡಿ, ನಿತಿನ ಮೆಣಸಿನಕಾಯಿ ಜಿಲ್ಲಾ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ , ಸೇರಿದಂತೆ ಅನೇಕ ಸಾಹಿತಿಗಳು ಮತ್ತು ಸಾಹಿತ್ಯಾ ಸಕ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ತಲ್ಲೂರ ಸ್ವಾಗತಿಸಿದರು, ಸುನಿಲ ಹಲವಾಯಿ ನಿರೂಪಿಸಿದರು ಬಿಬಿ ಮಠಪತಿ ವಂದಿಸಿದರು.

