ನಾಯಕರಹಳ್ಳಿ ಮಂಜೇಗೌಡರು ವೈ,ಹೆಚ್.ಈಶ್ವರ್ ಅವರ ನಂಬರ್ ಕಳಿಸಿದ್ದರು. ಈಶ್ವರ್ ಯಲಗುಂದ ಗ್ರಾಮದವರು. ಈ ಹಿಂದೆ ಮಂಜೇಗೌಡರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಯಲಗುಂದ ಗ್ರಾಮದಲ್ಲಿ ದಿನಾಂಕ 27,28 ಫೆಬ್ರುವರಿ 2018ರ ಎರಡು ದಿನಗಳು ಈ ಯಲಗುಂದ ಗ್ರಾಮದಲ್ಲಿ ಹಾಸನ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು.
ಸಮ್ಮೇಳನಾಧ್ಯಕ್ಷತೆಯ ಗೌರವ ನನಗೆ (ಗೊರೂರು ಅನಂತರಾಜು) ದೊರಕಿದ್ದು ಒಂದು ಸೌಭಾಗ್ಯ. ಒಂದು ಹಳ್ಳಿಗಾಡು ಪ್ರದೇಶದಲ್ಲಿ ಅಷ್ಟೊಂದು ಆಭೂತಪೂರ್ವವಾಗಿ ನಡೆದ ಈ ಸಮ್ಮೇಳನದಲ್ಲಿ ಸಾವಿರಾರು ಮಂದಿ ಗ್ರಾಮಸ್ಥರು ಭಾಗವಹಿಸಿದ್ದು ಅಂದು ನನಗೆ ಆಶ್ಚರ್ಯ ತಂದಿತ್ತು. ಇಡೀ ಊರು ಉತ್ಸವದಲ್ಲಿ ಪಾಲ್ಗೊಂಡಿತ್ತು.
ಕಲಾತಂಡಗಳ ಮೆರವಣಿಗೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರು ಹಾಡು ನೃತ್ಯದಲ್ಲಿ ವಾದ್ಯಕ್ಕೆ ಕುಣಿದು ಕುಪ್ಪಳಿಸುತ್ತಾ ಸುಮಾರು ಒಂದೂವರೆ ಕಿ.ಮೀ. ನಿಟ್ಟೂರು ಗ್ರಾಮದಿಂದ ಯಲಗುಂದ ಗ್ರಾಮಕ್ಕೆ ಮೆರವಣಿಗೆಯಲ್ಲಿ ಸಾಗಿ ಬಂದಿದ್ದನ್ನು ಸ್ವತ: ರಥದಲ್ಲಿ ಕುಳಿತು ವೀಕ್ಷಿಸಿ ಮೂಕ ವಿಸ್ಮಿತನಾಗಿದ್ದೆ. ಈ ಯಶಸ್ವಿ ಸಮ್ಮೇಳನದ ಹಿಂದಿನ ರೂವಾರಿಗಳಲ್ಲಿ ಈ ಈಶ್ವರ ಮತ್ತು ಅಂದು ಸಾಲಗಾಮೆ ಹೋಬಳಿ ಅಧ್ಯಕ್ಷರಾಗಿದ್ದ ಯಲಗುಂದ ರಮೇಶ ತಾಲ್ಲೂಕು ಅಧ್ಯಕ್ಷ ಜೆ.ಓ.ಮಹಾಂತಪ್ಪ, ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡರು, ಗೌರವ ಅಧ್ಯಕ್ಷ ನಾಕಲಗೊಡು ರವಿ ಇವರೆಲ್ಲರ ಸಕ್ರಿಯ ಪಾತ್ರವಿದೆ. ಇರಲಿ ಈ ಈಶ್ವರ ಅವರು ತಮ್ಮ ಊರಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಇಲ್ಲಿಯ ಈಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಸಕ್ರಿಯರಾಗಿ ದೇವಸ್ಥಾನ ಮತ್ತು ಊರಿನ ಇತಿಹಾಸ ಕುರಿತ್ತಾಗಿ ಒಂದಿಷ್ಟು ಮಾಹಿತಿ ಪೋಟೋ ಕಳಿಸಿದ್ದರು.
ಹಾಸನ ತಾಲ್ಲೂಕಿನ ಯಲಗುಂದ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಇತಿಹಾಸ ಪ್ರಸಿದ್ಧ ಶ್ರೀ ಈಶ್ವರ ದೇವಸ್ಥಾನ ಈಗ ಜೀರ್ಣೋದ್ದಾರ ಕಾರ್ಯದ ಫಲವಾಗಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಈಶ್ವರ ದೇವಸ್ಥಾನ ಲೋಕಾರ್ಪಣೆಗೆ ಸಿದ್ದವಾಗಿದೆ. ಹೊಯ್ಸಳ ಕಾಲದ ಈ ದೇವಾಲಯ ಪುನಃ ನಿರ್ಮಾಣಗೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್, ಗ್ರಾಮದ ದೇವಸ್ಥಾನ ಸಮಿತಿ, ಪುರಾತತ್ವ ಇಲಾಖೆ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ 45 ಲಕ್ಷ ರೂಗಳ ವೆಚ್ಚದಲ್ಲಿ ಪುನಃ ನಿರ್ಮಾಣಗೊಂಡಿದೆ. ಈ ದೇವಸ್ಥಾನವು 11 ನೇ ಶತಮಾನದ್ದಾಗಿದೆ. ಇಂದು ಜೀಣೋದ್ದಾರ ಯಶಸ್ವಿಯಾಗಿ ಮುಗಿದ್ದಿದ್ದು ಸುಮಾರು ಒಂದು ಹೆಕ್ಟೇರ್ ವಿಸ್ತಾರ ಜಾಗದಲ್ಲಿ ದೇವಸ್ಥಾನದ ಸುತ್ತಲೂ ಕಾಂಪೌಂಡ್, ನೆಲಹಾಸಿಗೆ ಕಲ್ಲು ಚಪ್ಪಡಿ, ದೇವಸ್ಥಾನದ ಆವರಣದಲ್ಲಿ ಹೊಯ್ಸಳರ ಕಾಲದ ಶಿಲಾಶಾಸನಗಳು, ವೀರಗಲ್ಲು, ಆಂಜನೇಯನ ಹಳೆಯ ಮೂರ್ತಿ,ವಿಶ್ರಾಂತಿಗೆ ಕಲ್ಲು ಬೆಂಚ್ ಗಳು, ನೀರಿನ ವ್ಯವಸ್ಥೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ವೈ.ಹೆಚ್ ಈಶ್ವರರವರು ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿ ಫೆಬ್ರವರಿ-18, 19 ಭಾನುವಾರ ಸೋಮವಾರ ನಾಡಿನ ಆನೇಕ ಪರಮಪೂಜ್ಯ ಸ್ವಾಮಿಜೀಗಳು, ವಿವಿಧ ಕ್ಷೇತ್ರ ಗಣ್ಯರು ಸಮಾಜ ಸೇವಕರು ಗ್ರಾಮಸ್ಥರಿಂದ ಒಡಗೂಡಿ ಲೋಕಾರ್ಪಣೆಗೊಳ್ಳುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ.ವೀರೇಂದ್ರಹೆಗ್ಗಡೆ ಯವರು, ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮುಂತಾದ ಗಣ್ಯರ ಸಮ್ಮುಖದಲ್ಲಿ ಪೂಜಾ ಕಂಕೈರ್ಯವು ನೆರವೇರಿಸಲು ಸಿದ್ಧತೆಗಳು ನಡೆದಿವೆ.
ಹಾಸನದಿಂದ 21 ಕಿ.ಮೀ. ದೂರದಲ್ಲಿರುವ ಯಲಗುಂದ ಗ್ರಾಮವು ಗ್ರಾಮ ಪಂಚಾಯಿತಿಯನ್ನು ಒಳಗೊಂಡಿದೆ. ಸುಮಾರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ 238 ಮನೆಗಳಿವೆ.
ಇತಿಹಾಸ ಪ್ರಸಿದ್ದ ಯಲಗುಂದ ಗ್ರಾಮವು ಹಾಸನ ಜಿಲ್ಲೆಯ ಒಂದು ಪುರಾತನ ಗ್ರಾಮ. ಇಲ್ಲಿನ ಹೊಯ್ಸಳರ ಕಾಲದ ಈಶ್ವರ ದೇವಾಲಯಕ್ಕೆ ಸುಮಾರು ಎಂಟೂವರೆ ಶತಮಾನದ ಇತಿಹಾಸವಿದೆ. ಕಾಲ ಕಾಲಕ್ಕೆ ಇದರ ಜಿರ್ಣೋದ್ದಾರ ಆಗುತ್ತಾ ಬಂದರೂ ಪ್ರಸ್ತುತ ದೇವಾಲಯವು ಪೂರ್ಣ ಶಿಥಿಲವಾಗಿ ಕುಸಿದು ಹೋಗುತ್ತಿದ್ದ ಕಾರಣ ಗ್ರಾಮಸ್ಥರ ಒತ್ತಾಸೆಯ ಫಲವಾಗಿ ಪುನರ್ ನಿರ್ಮಾಣಗೊಂಡಿದೆ. ಯಲಗುಂದ ಗ್ರಾಮವು ಹೊಯ್ಸಳರ ರಾಜ್ಯದ ಒಂದು ಭಾಗವಾಗಿದ್ದು, ಆಗ ನೀರ್ಗುಂದನಾಡು ಎಂಬ ಆಡಳಿತ ವಿಭಾಗಕ್ಕೆ ಸೇರಿತ್ತು. ಹೊಯ್ಸಳ ದೊರೆ ವಿಷ್ಣುವರ್ಧನನ ಆಡಳಿತ ಕಾಲದ ಕೇತೆಯ ನಾಯಕ ಎಂಬಾತನು ಇಲ್ಲಿನ ಹೆಗ್ಗಡೆಯಾಗಿದ್ದು ಅವನ ಪತ್ನಿ ಜಕ್ಕಿಬ್ಬೆಯು ಇಲ್ಲಿನ ಹೆಗ್ಗಡತಿಯಾಗಿದ್ದಳು. ಇವರಿಗೆ ಶಾಂತಲೆ ಎಂಬ ಮಗಳಿದ್ದಳು.
ಈಕೆಯನ್ನು ಪ್ರಸಿದ್ಧ ಹೊಯ್ಸಳ ದೊರೆ ವಿಷ್ಣುವರ್ಧನನು ವಿವಾಹವಾಗಿದ್ದನು. ಈಕೆಯ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲದ ಕಾರಣ ಇವಳನ್ನು ವಿಷ್ಣುವರ್ಧನನ ಪಟ್ದ ರಾಣಿ ನಾಟ್ಯ ರಾಣಿ ಶಾಂತಲೆ ಎಂದು ತಿಳಿದಿರುವುದು ಉಂಟು. ಆದರೆ ಈಕೆ ವಿಷ್ಣುವರ್ಧನನ ಪಟ್ಟದರಾಣಿ ಶಾಂತಲ ದೇವಿಯಲ್ಲಾ ಅವರಿಬ್ಬರು ವಿಷ್ಣುವರ್ಧನನಿಗೆ ಒಂದೇ ಹೆಸರಿನ ಇಬ್ಬರು ಪತ್ನಿಯರಾಗಿದ್ದರು. ಎಂಬುದನ್ನು ಖಚಿತವಾಗಿ ಶಾಸನಗಳಲ್ಲಿ ಚಿಕ್ಕ ಶಾಂತಲೆ ದಾಖಲಿಸಿವೆ. ಈ ಚಿಕ್ಕಶಾಂತಲೆಯೇ ಯಲಗುಂದ ಪ್ರಾಂತ್ಯದ ಆಡಳಿತ ನಿರ್ವಹಿಸುತ್ತಿದ್ದಳು. ಈ ಚಿಕ್ಕ ಶಾಂತಲೆಗೆ ಬೊಪ್ಪಲೆ ಎಂಬ ಮಗಳಿದ್ದಳು. ಕಾರಣಾಂತರಗಳಿಂದ ಈ ತಾಯಿ- ಮಗಳಿಬ್ಬರು ಮೃತರಾದರು. ಆಗ ಅವರುಗಳ ಶ್ರಾದ್ದ,(ಪರೋಕ್ಷ ವಿನಯ)ದ ನಿಮಿತ್ತ ಅಂದಿನ ಪದ್ದತಿಯಂತೆ ಹೆಗ್ಗಡತಿ ಜಕ್ಕಿಮಬ್ಬೆಯು ಈ ಯಲಗುಂದದಲ್ಲಿ ಶಿವಭಕ್ತೆಯಾಗಿದ್ದರಿಂದ ಈಶ್ವರ ದೇವಾಲಯ ಕಟ್ಟಿಸಿದಳು ಎಂಬ ಪ್ರತೀತಿ ಇದೆ. ಈ ಎಲ್ಲಾ ಐತಿಹಾಸಿಕ ವಿಚಾರಗಳಲ್ಲೂ ದೇವಾಲಯ ನಿರ್ಮಾಣ ಶಾಸನದಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ (ಸಂಖ್ಯೆ66 ವಿ.ಕ.8)
ಈ ದೇವಾಲಯಕ್ಕೆ ಮೂಲ ಹೆಸರು ಶಾಂತಲೇಶ್ವರ-ಬೊಪ್ಪಲೇಶ್ವರ ಎಂದಿದ್ದರೂ ಕ್ರಮೇಣ ಕಳೆದ ಶತಮಾನದ ಹೊತ್ತಿಗೆ ಅದು ಶಾಂತಮಲ್ಲೇಶ್ವರ ಎಂದಾಗಿತ್ತು. ಈಗ ಈಶ್ವರ ದೇವಾಲಯ ಎಂದಾಗಿದೆ. ಇಲ್ಲಿ 11 ನೇ ಶತಮಾನದ ಸಾಮ್ರಾಜ್ಯದ ಅನೇಕ ಕುರುಹುಗಳನ್ನು ಕಾಣಬಹುದಾದ ಐತಿಹಾಸಿಕ ತಾಣವಾಗಿದೆ. ಅಂದಿನ ಹೊಯ್ಸಳ ಸಾಂಸ್ಕೃತಿಕ ಪರಂಪರೆಯ ನೆನಪನ್ನು ಹೊತ್ತ ಈ ಊರಿನಲ್ಲಿ ಸಿದ್ಧರಾಮೇಶ್ವರ. ರಾಮೇಶ್ವರ, ಕರಿಯಮ್ಮ ದೇವಿ ಮತ್ತು ಬೆಟ್ಟದ ಮೇಲೆ ಮುಳ್ಳೇಶ್ವರ ದೇವಸ್ಥಾನಗಳಿವೆ. ಇಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಆಂಜನೇಯ ಮೂರ್ತಿ ಇದೇ ಸಂದರ್ಭದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಈಶ್ವರ್ ದೂರವಾಣಿಯಲ್ಲಿ ತಿಳಿಸಿದರು. ಅಂದ ಹಾಗೆ ನಿರ್ದೇಶಕ ಹಾಸನ ರಮೇಶ್ ಅವರು ಈ ಊರಿನಲ್ಲಿ ರೈತಾಪಿ ಬದುಕಿನ ಶ್ರೀಮಂತ ಎಂಬ ಸಿನಿಮಾ ಶೂಟಿಂಗ್ ಮಾಡಿ ಇಲ್ಲಿನ ಮತ್ತು ಹಾಸನ ಸುತ್ತಲಿನ ರಮ್ಯ ದೃಶ್ಯಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ.
-ಗೊರೂರು ಅನಂತರಾಜು, ಹಾಸನ.
9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-573201.