20ನೇ ಶತಮಾನದ ಸಮಗ್ರ ಬದುಕಿನ ಪ್ರತಿಬಿಂಬ -‘ಶರಣು ಶರಣಾರ್ಥಿ’ ; ಡಾ. ಸಯ್ಯದ್ ಮುಜೀಬ್ ಅಹ್ಮದ್, ಮಾನ್ವಿ

Must Read

ಹುನಗುಂದ : ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ನಡೆದ ಹೊನ್ನಕುಸುಮ ಸಾಹಿತ್ಯ ವೇದಿಕೆಯ “ತಿಂಗಳ ಬೆಳಕು -28″ನೇ ಕೃತಿ ಅವಲೋಕನ, ಸಂವಾದ, ಚರ್ಚೆ ಕಾರ್ಯಕ್ರಮ ನಡೆಯಿತು. ಡಾ. ಹೇಮಂತ್ ಭೂತನಾಳ ಅವರ “ಶರಣು ಶರಣಾರ್ಥಿ” ಎಂಬ ಆತ್ಮಕಥೆಯನ್ನು ಕುರಿತು ಡಾ. ಸಯ್ಯದ್ ಮುಜೀಬ್ ಅಹ್ಮದ್, ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಾನ್ವಿ ಅವರು ಮಾತನಾಡಿದರು.

ಪುಸ್ತಕ ಓದಬೇಕು ಎನ್ನುವವರು ಮೊದಲು ಪುಸ್ತಕವನ್ನು ಖರೀದಿಸಬೇಕು. ನಂತರ ನಮ್ಮನ್ನು ಓದಿನ ಕಡೆ ಕೊಂಡೊಯ್ಯುತ್ತದೆ ಎಂದರು. ಸಮಾಜದ ಬದಲಾವಣೆಗೆ ಆತ್ಮಕಥೆಗಳು ಮಹತ್ವದ ಪಾತ್ರ ವಹಿಸಿವೆ. ಇವರ ಆತ್ಮಕಥೆಯು 20ನೇ ಶತಮಾನದ ವ್ಯಕ್ತಿಯ ಬದುಕು, ಜನಜೀವನ ವ್ಯವಸ್ಥೆ, ಶೈಕ್ಷಣಿಕ ಸಂಗತಿಗಳು, ಆಡಳಿತ ವ್ಯವಸ್ಥೆ, ಸಾಮಾಜಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬದುಕನ್ನು ತಿಳಿಯಲು ಮಹತ್ವದ ಪಾತ್ರವಹಿಸಿದೆ ಎಂದರು.

ಸುದೀರ್ಘವಾದ ಇವರ ಆತ್ಮಕಥೆಯಲ್ಲಿ 29 ಅಧ್ಯಾಯಗಳಿದ್ದು ಪ್ರತಿಯೊಂದು ಅಧ್ಯಾಯವು ಹಲವು ಮಹತ್ವದ ವಿಷಯಗಳನ್ನು ವಿವರಿಸುತ್ತವೆ. ಸಮಾಜಶಾಸ್ತ್ರಜ್ಞರಾಗಿ ಸಮಾಜದ ಸುತ್ತಲಿನ ಸಂಗತಿಗಳೊಂದಿಗೆ ತಮ್ಮ ಜೀವನವನ್ನು ಅನಾವರಣಗೊಳಿಸಿರುವುದನ್ನು ಕಾಣಬಹುದು. ಇಂದಿನ ವರ್ತಮಾನದ ಬದುಕಿನಲ್ಲಿ ಆತ್ಮಕಥೆಗಳು ವ್ಯಕ್ತಿಯ ಜೀವನದ ಜೊತೆಗೆ ಬಹುಮುಖ್ಯ ವಿಷಯಗಳನ್ನು ತಿಳಿಸುತ್ತವೆ. ಅದೇ ರೀತಿ ಈ ಕೃತಿಯು ಹಲವು ಮೌಲ್ಯಯುತ ಸಂಗತಿಗಳನ್ನು ತಿಳಿಸುತ್ತವೆ ಎಂದರು. ಡಾ. ಹೇಮಂತ್ ಭೂತನಾಳರ ಬಾಲ್ಯಜೀವನ, ದಾಂಪತ್ಯ ಬದುಕು, ಶಿಕ್ಷಣ ರಂಗದ ಸೇವೆ, ಆಡಳಿತ ವ್ಯವಸ್ಥೆ, ಅಸ್ಪೃಶ್ಯ ಜೀವನ, ಪ್ರತಿಭಟನೆ, ಆದರ್ಶ ಬದುಕು ಮೊದಲಾದ ಅವರ ಆತ್ಮಕಥೆಯಲ್ಲಿ ಅಭಿವ್ಯಕ್ತಿಗೊಂಡ ವಿಚಾರಗಳನ್ನು ತಿಳಿಸಿದರು.

ಆತ್ಮಕಥೆ ಉದ್ಧಗಲಕ್ಕೂ ಡಾ.ಹೇಮಂತ ಭೂತನಾಳರು ಅಪ್ಪನ ಸ್ಥಾನದಲ್ಲಿ ಕಂಡ ಅಣ್ಣನ ತ್ಯಾಗ ಗುಣಗಳು, ತಂದೆ-ತಾಯಿಯ ವಿಚಾರ, ಒಡಹುಟ್ಟಿದವರ ಅನನ್ಯತೆ, ತಲೆಮಾರುಗಳ ಪರಿಚಯ ಹತ್ತು ಹಲವು ಸಂಗತಿಗಳನ್ನು ವಿವರಿಸಿದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಆತ್ಮಕಥೆ ಬರವಣಿಗೆಯ ಶೈಲಿ, ಅವರ ಭಾಷೆ , ಅನುಭವದ ಬದುಕನ್ನು ಕುರಿತು ಗೌರವ, ಅಭಿಮಾನ ವ್ಯಕ್ತಪಡಿಸಿದರು. ನನ್ನ ಓಣಿ, ನನ್ನ ಜನರು, ನನ್ನೂರು ಬಿಜಾಪುರ, ಮೊದಲ ಬಾರಿಗೆ ಮನೆ ಬಿಟ್ಟಾಗ, ಐದನೇ ನಂಬರ್ ಶಾಲೆ, ಆಸ್ಪತ್ರೆಯ ಅನುಭವ, ನಾನು ಹುಲಿ ವೇಷ ಹಾಕಿದೆ, ಅಪ್ಪನ ಕೊನೆಯ ದಿನಗಳು, ಒಡಹುಟ್ಟಿದವರು, ಕಿವಿಯ ಮೇಲೆ ಹಾದು ಹೋದ ಗುಂಡುಗಳು, ಭತ್ತದ ನಾಡಿಗೆ, ಕಲ್ಲುಗಳ ಊರು ಇಲಕಲ್, ಮೊದಲಾದ ಅಧ್ಯಾಯಗಳನ್ನು ಕುರಿತು ಸುಧೀರ್ಘವಾಗಿ ಮಾತನಾಡಿದರು.

ಡಾ. ಹೇಮಂತ್ ಭೂತನಾಳ ಅವರು ಲೇಖಕರ ಮಾತುಗಳನ್ನಾಡುತ್ತ ತಮ್ಮ ಅನುಭವದ ಬುತ್ತಿಯನ್ನು, ರಸಾನುಭವ ಘಟನೆಗಳನ್ನು ಮೆಲುಕು ಹಾಕಿದರು. ಶರಣರು ಪ್ರಜ್ಞೆಯನ್ನು ದೇವರಂತೆ ಕಂಡರು. ಅವರಂತೆ ನುಡಿಯಲ್ಲಿ ನಡೆ ಪರಿಶುದ್ಧಗೊಂಡು ಜ್ಞಾನದ ಅರಿವು ಹುಟ್ಟಬೇಕು ಎಂದರು.

ಸಮಾಜದ ವ್ಯವಸ್ಥೆಯಲ್ಲಿ ತಾವು ಬೆಳೆದು ಬಂದ ಪರಿಸರ, ಸಮಾಜವನ್ನು ಕಂಡ ರೀತಿ, ಸಮಾಜವು ಅವರನ್ನು ಕಂಡ ಬಗೆ, ಅಂದಿನ ಅವರ ಬಾಲ್ಯ ಜೀವನ, ದೇವಾಲಯ ಪ್ರವೇಶಕ್ಕಾಗಿ ಹೋರಾಡಿದ ಸನ್ನಿವೇಶ, ಅವರ ಸಾಮಾಜಿಕ ಕಾಳಜಿ, ಗೆಳೆಯರೊಂದಿಗಿನ ಸಂವಾದ, ಕೆಲವರಲ್ಲಿ ಜಾಗೃತವಾಗಿರುವ ಜಾತಿ ವ್ಯವಸ್ಥೆ ಮೊದಲಾದ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್ ಎಸ್ ಮುಡಪಲದಿನ್ನಿ ಅವರು ಮಾತನಾಡುತ್ತ, ಆತ್ಮಕಥೆ ಹಾಗೂ ಜೀವನ ಚರಿತ್ರೆಗೆ ಇರುವ ವ್ಯತ್ಯಾಸವನ್ನು ತಿಳಿಸಿದರು. ಕೆಲವು ಆತ್ಮಕಥೆಗಳು ಬಹಳ ಜನರಿಗೆ ಓದಲು ನೀರಸವೆನಿಸುತ್ತವೆ. ಆದರೆ ಡಾ.ಹೇಮಂತ್ ಭೂತನಾಳರ “ಶರಣು ಶರಣಾರ್ಥಿ” ಆತ್ಮಕಥೆಯು ಈ ವಿಷಯದಲ್ಲಿ ಯಶಸ್ಸು ಸಾಧಿಸಿದೆ. ಒಬ್ಬ ಸ್ನೇಹಿತ ಮತ್ತೊಬ್ಬ ಸ್ನೇಹಿತನ ಜೊತೆ ಹರಟೆ ಹೊಡೆಯುವಂತೆ ನಿರೂಪಣೆಗೊಂಡಿದೆ ಎಂದು ಹೇಳಿದರು. ನಮ್ಮ ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಜೀವಂತವಾಗಿದೆ. ಅದನ್ನು ತೊಲಗಿಸಲು ಇಂತಹ ಕಾರ್ಯಕ್ರಮಗಳ ಮೂಲಕ ಸಾಧ್ಯವೆಂದರು.

ಅಭಿಷೇಕ ಮುಡಪಲದಿನ್ನಿ ಪ್ರಾರ್ಥಿಸಿದರು. ಎಂ.ಡಿ. ಚಿತ್ತರಗಿ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕೆ. ಎ.ಬನ್ನಟ್ಟಿ,  ಜನಾದ್ರಿ ವಕೀಲರು, ಶ್ರೀಮತಿ ಲಲಿತ ಹೊಸಪ್ಯಾಟಿ, ಶ್ರೀಮತಿ ಮುರ್ತುಜಾ ಬೇಗಂ ಕೊಡಗಲಿ, ಶ್ರೀಮತಿ ಇಂದುಮತಿ ಪುರಾಣಿಕ್, ಡಾ. ತಿಪ್ಪೇಸ್ವಾಮಿ ಡಿ.ಎಸ್. ಜಗದೀಶ್ ಹಾದಿಮನಿ, ಡಾ. ಎಲ್. ಜಿ. ಗಗ್ಗರಿ, . ಜಗದೀಶ ಹದ್ಲಿ ಇನ್ನಿತರ ಲೇಖಕರು, ಹೊನ್ನ ಕುಸುಮ ಸಾಹಿತ್ಯ ವೇದಿಕೆಯ ಸರ್ವ ಸದಸ್ಯರು ಹಾಗೂ ಭೂತನಾಳ ಕುಟುಂಬವರ್ಗ ಪಾಲ್ಗೊಂಡಿದ್ದು, ಕಾರ್ಯಕ್ರಮ ಯಶಸ್ವಿಯಾಯಿತು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group