ಬೈಲಹೊಂಗಲ: ಖ್ಯಾತ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಹಾವೇರಿಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2023ರ ಜನವರಿ 6 ಶುಕ್ರವಾರ, 7 ಶನಿವಾರ ಹಾಗೂ 8 ಭಾನುವಾರದಂದು ಮೂರು ದಿನಗಳ ಕಾಲ ನಡೆಯಲಿದೆ. ‘ಸಾಮರಸ್ಯದ ಭಾವ-ಕನ್ನಡದ ಜೀವ’ ಎಂಬ ಧ್ಯೇಯದೊಂದಿಗೆ ಜರುಗಲಿರುವ ಸಮ್ಮೇಳನದಲ್ಲಿ ಭಾಗವಹಿಸುವವರು ಪ್ರತಿನಿಧಿಯಾಗಿ ನೋಂದಾಯಿಸಲು ಡಿಸೆಂಬರ 18 ಕೊನೆಯ ದಿನವಾಗಿದೆ.
ಕೋವಿಡ್ ಕಾಲದ ನಂತರ ಅತ್ಯಂತ ಅದ್ಧೂರಿಯಾಗಿ ನಡೆಯಲಿರುವ ಕನ್ನಡಿಗರ ಹಬ್ಬದಲ್ಲಿ ತಾಲೂಕಿನಿಂದ, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಭಾಗವಹಿಸುವುದರ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮನವಿ ಮಾಡಿದ್ದಾರೆ.
ನೋಂದಾಯಿತ ಪ್ರತಿನಿಧಿಗಳಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಲಭ್ಯವಿರುವ ವಸತಿ ವ್ಯವಸ್ಥೆಯ ಜೊತೆಗೆ ವಸತಿ ಸ್ಥಳದಿಂದ ಸಮ್ಮೇಳನದ ಸ್ಥಳಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಊಟ/ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗುವುದು. ಆಕರ್ಷಕ ಕಿಟ್ ಮತ್ತು ಬ್ಯಾಡ್ಜ್ ನೀಡಲಾಗುವುದು.
ಅಲ್ಲದೇ ಭಾಗವಹಿಸಿದ ಪ್ರತಿನಿಧಿಗಳಿಗೆ ಓ.ಓ.ಡಿ. ಹಾಜರಾತಿ ಪ್ರಮಾಣ ಪತ್ರ ಒದಗಿಸಲಾಗುವುದು. ಐತಿಹಾಸಿಕ ಹಾವೇರಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಅಕ್ಷರ ಜಾತ್ರೆಯಲ್ಲಿ ಎಲ್ಲ ಕನ್ನಡ ಮನಸ್ಸುಗಳು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9844491490/ 9945326808/ 8861325272 ಸಂಪರ್ಕಿಸಿರಿ.