ಬೆಳಗಾವಿ – ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿರುವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಪ್ರತಿ ವರ್ಷ ಜೂನ 15 ರಂದು ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ಜರುಗಿಸಿ, ಸಮಾಜ ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಹೇಳಲಾಗಿದೆ. ಆದರೆ ಈ ಘೋಷಣೆಯ ಉದ್ದೇಶವನ್ನು ಸರಕಾರ ಹಾಗೂ ಸಮಾಜಗಳು ತಿಳಿದುಕೊಳ್ಳದ ಕಾರಣ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘ (ರಿ) ಮತ್ತು ಕರ್ನಾಟಕ ಸ್ಟೇಟ್ ಸೀನಿಯರ್ ಸಿಟಿಜೆನ್ಸ್ ಅಸೋಸಿಯೇಶನ್, ಬೆಳಗಾವಿ ಇವುಗಳು ದಿ. ೧೬ ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು, ತಹಶೀಲ್ದಾರರ ಕಛೇರಿಯ ಮುಂದೆ ಹಿರಿಯ ನಾಗರಿಕರು ಸೇರಿ ಸರಕಾರಕ್ಕೆ ಮನವಿ ಅರ್ಪಣೆ ಮಾಡುವ ಜೊತೆಗೆ ಹೋರಾಟಕ್ಕೆ ಮುಂದಾಗಲಿವೆ
ಸರಕಾರದ ನಿರ್ಲಕ್ಷ್ಯದಿಂದ ದೌರ್ಜನ್ಯ ಹೆಚ್ಚಾಗಲು ಕಾರಣವಾಗಿದೆ. ಭಾರತದ ಸಂವಿಧಾನ ಮೂಲಕ ಹಿರಿಯ ನಾಗರಿಕರ ಸಾಮಾಜಿಕ ಭದ್ರತೆ, ಸಾಮಾಜಿಕ ನ್ಯಾಯ, ರಕ್ಷಣೆ ಮಾಡುವದು ಸರಕಾರದ ಕರ್ತವ್ಯವಾಗಿರುವದರ ಈ ಕುರಿತು ಸನ್ ೨೦೦೭ ರಲ್ಲಿ ಹಿರಿಯ ನಾಗರಿಕರ ಕಾನೂನು ರಚಿಸಿ ಹಿರಿಯರಿಗೆ ಹಲವಾರು ಸೌಲಭ್ಯಗಳನ್ನು ನೀಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಿದೆ. ಆದರೆ ಸದರಿ ಕಾನೂನಿನಂತೆ ಸರಕಾರ ಅನುಷ್ಠಾನಗೊಳಿಸಿಲ್ಲ. ಈ ಕುರಿತು ಹಿರಿಯ ನಾಗರಿಕರ ಸಂಘ ಸಂಸ್ಥೆಗಳು ನಿರಂತರವಾಗಿ ಸರ್ಕಾರಕ್ಕೆ ಸಲ್ಲಿಸಿದ ಬೇಡಿಕೆಯನ್ನು ಸರಕಾರವು ಮನವಿಗಳನ್ನು ಪರಿಶೀಲಿಸದೆಯಿರುವುದು ಹಾಗೂ ಗಮನಹರಿಸದೇ ಇದ್ದು ಸದರಿ ಸರಕಾರದ ಈ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಸರಕಾರಕ್ಕೆ ಮನವಿ ಸಲ್ಲಿಸುವದು ಹಾಗೂ ಎಲ್ಲ ಹಿರಿಯ ನಾಗರಿಕರನ್ನು ಹೋರಾಟಕ್ಕಾಗಿ ಜಾಗೃತಿಗೊಳಿಸುವದು ಉದ್ದೇಶವಾಗಿದೆ.
ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಗಳು :
1. ರಾಷ್ಟ್ರದ ಎಲ್ಲ ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ರಚಿಸುವದು. (ಕಾನೂನಿನಲ್ಲಿ ಇದೆ)
2. ಆರ್ಥಿಕವಾಗಿ ದುರ್ಬಲರಾದ ಎಲ್ಲ ಹಿರಿಯ ನಾಗರಿಕರಿಗೆ ಮಾಸಿಕ ರೂ. ಹತ್ತು ಸಾವಿರ ವೃದ್ಧಾಪ್ಯ ವೇತನ ನೀಡುವದು.
3. ರಾಷ್ಟ್ರ ಹಾಗೂ ಎಲ್ಲ ರಾಜ್ಯಗಳಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕವಾದ ಮಂತ್ರಾಲಯ, ಸಚಿವರನ್ನು ನಿಯಮಿಸುವದು.
4. ಹಿರಿಯ ನಾಗರಿಕ ತಡೆಹಿಡಿದ ರೇಲ್ವೆ ರಿಯಾಯಿತಿ ತಕ್ಷಣ ಆರಂಭಿಸುವದು.
5. ಆಯುಷ್ಮಾನ ಭಾರತ ಹಿರಿಯ ನಾಗರಿಕರ ಆರೋಗ್ಯ ವಿಮೆ ಕಾರ್ಡ ಸಕ್ರಿಯಗೊಳಿಸುವದು.
ರಾಜ್ಯ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಗಳು:
1. ಎಲ್ಲಾ ಪೋಲೀಸ ಠಾಣೆಯಲ್ಲಿ ಹಿರಿಯ ನಾಗರಿಕರ ಸಮಿತಿ ರಚಿಸುವುದು. ( ಕಾನೂನಿನಲ್ಲಿದೆ )
2. ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಾಲು, ಚಿಕಿತ್ಸಾ ವಿಭಾಗ ಇರಬೇಕು (ಕಾನೂನಿನಲ್ಲಿದೆ)
3. ಎಲ್ಲಾ ಹಿರಿಯ ನಾಗರಿಕರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ನೀಡುವದು
4. ಆರ್ಥಿಕವಾಗಿ ಹಿಂದುಳಿದ ಎಲ್ಲ ಹಿರಿಯರಿಗೆ ಮಾಸಿಕ ರೂ. ಐದು ಸಾವಿರ ವೃದ್ಯಾಪ್ಯ ವೇತನ ನೀಡುವದು (ಕೇಂದ್ರದಿಂದ 5 ಸಾವಿರ )
5. ವೃದ್ಯಾಪ್ಯ ವೇತನ ವಾರ್ಷಿಕ ಆದಾಯ ಮಿತಿಯನ್ನು 33 ಸಾವಿರದಿಂದ 1.20ಲಕ್ಷ ಹೆಚ್ಚಿಸುವದು. ( ಬಿ.ಪಿ.ಎಲ್ ಆದಾಯ ಮಿತಿ )
6. ನಿವೃತ್ತ ನೌಕರರ 7ನೇ ವೇತನ ಆಯೋಗದ 2ನೇ ಭಾಗ ತಕ್ಷಣ ಬಿಡುಗಡೆ ಮಾಡಬೇಕು.
ರಾಷ್ಟ್ರೀಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನ
ರಾಷ್ಟ್ರದಲ್ಲಿ ಸುಮಾರು ೨೦ ಕೋಟಿ, ರಾಜ್ಯದಲ್ಲಿ ೮೦ ಲಕ್ಷ ಹಿರಿಯ ನಾಗರಿಕರಿದ್ದು, ಇವರ ಅವಲಂಬಿತರ ಸಂಖ್ಯೆ ಕೂಡಿ ಶೇಕಡಾ ೨೦ ರಷ್ಟು ಮತಗಳು ಹಿರಿಯ ನಾಗರಿಕರಿಗೆ ಬಲವರ್ಧನೆಗಾಗಿ ಇವೆ. ಆದರೆ ಇವರ ಸಂಘಟನೆ ಕೊರತೆಯಿಂದ ಸರಕಾರ ಇವರತ್ತ ಗಮನ ಹರಿಸುತ್ತಿಲ್ಲವಾದ ಕಾರಣ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ಹೆಸರಿನಿಂದ ರಾಷ್ಟ್ರದಾದ್ಯಂತ ಹಿರಿಯ ನಾಗರಿಕರ ನೊಂದಣಿ ಆರಂಭಿಸಿದ್ದು ಕರ್ನಾಟಕ ರಾಜ್ಯದಲ್ಲಿ ಸುಮಾರು ೫ ಲಕ್ಷ ಹಿರಿಯ ನಾಗರಿಕರ ನೋಂದಣಿ ಆರಂಭಿಸಿದ್ದು ಕರ್ನಾಟಕ ರಾಜ್ಯದಲ್ಲಿ ಸುಮಾರು 2 ಲಕ್ಷ ಹಿರಿಯ ನಾಗರಿಕರ ನೊಂದಣಿ ಆಗಿದೆ. ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಗಳನ್ನು ಪರಿಗಣಿಸುವಂತೆ ಮಾಡುವದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ರಾಜ್ಯ ಸರಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೌಲಭ್ಯಗಳು ಸಿಗುತ್ತಿಲ್ಲ
ಕರ್ನಾಟಕ ರಾಜ್ಯದಲ್ಲಿರುವ ಹಿರಿಯ ನಾಗರಿಕರಲ್ಲಿ ಮುಕ್ಕಾಲು ಭಾಗ ಆರ್ಥಿಕ ತೊಂದರೆಗಳಿಂದ ಕೌಟುಂಬಿಕ ದೌರ್ಜನ್ಯಗಳಿಂದ ಬಳಲುತ್ತಿದ್ದು ಇವರು ಗ್ರಾಮಾಂತರದಲ್ಲಿದ್ದಾರೆ. ಇವರ ಬೇಡಿಕೆ ಸಮಸ್ಯೆಗಳ ಕುರಿತು ನಮ್ಮ ಸಂಘವು ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಿದೆ. ಈ ಕುರಿತು ಇಲಾಖೆಯ ನಿರ್ದೇಶನಾಲಯದಿಂದ ಪೂರ್ವಭಾವಿಯಾಗಿ ಸಭೆ ಕರೆದು, ನ್ಯಾಯಬದ್ಧ ಬೇಡಿಕೆಗಳನ್ನು ಚರ್ಚಿಸಲು ಹಲವು ಬಾರಿ ಸಭೆ ಜರುಗಿಸಿ ಕೊನೆಯದಾಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ದಿನಾಂಕ : ೩೦.೧೨.೨೦೨೪ ರಂದು ಸಭೆ ಜರುಗಿಸಿ, ಹಿರಿಯ ನಾಗರಿಕರ ಕಾನೂನು ಬದ್ಧ ಸೌಲಭ್ಯಗಳನ್ನು ಒದಗಿಸಲು ಎಲ್ಲ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು 4 ತಿಂಗಳು ಕಳೆದರೂ ಯಾವ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ
ಬಜೆಟ್ ನಲ್ಲಿ ಸಲ್ಲಿಕೆಯಾದ ಬೇಡಿಕೆಯನ್ನು ಕೈ ಬಿಟ್ಟ ಸರಕಾರ
ಇಲಾಖೆಯ ನಿರ್ದೇಶನಾಲಯದಿಂದ ಈ ವರ್ಷದ ಬಜೆಟ್ ೨೦೨೫-೨೬ರಲ್ಲಿ ಘೋಷಣೆಯಾಗಬೇಕಾದ ಕೆಲವೇ ಕೆಲವು ಆರ್ಥಿಕ ಹೊರೆಯಾಗದ ಬೇಡಿಕೆಗಳನ್ನು ನಿರ್ದೇಶನಾಲಯ ಸರಕಾರಕ್ಕೆ ಬಜೆಟ್ ಪೂರ್ವದಲ್ಲಿ ಸಲ್ಲಿಸಿದ್ದರೂ ಇತ್ತ ಸರಕಾರ ನೋಡಲೇ ಇಲ್ಲ. ಈ ಪ್ರಕಾರ ಹಿರಿಯ ನಾಗರಿಕರನ್ನು ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ.
ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಇದೇ ದಿನಾಂಕ: ೦೩.೦೬.೨೦೨೫ ರಂದು ಸಂಘದ ಪ್ರತಿನಿಧಿಗಳ ೫೦ ಪದಾಧಿಕಾರಿಗಳ ತಂಡವು ಭೇಟಿ ಮಾಡಿ ಮನವಿ ಅರ್ಪಿಸಿ ಅರ್ಧಗಂಟೆ ಚರ್ಚಿಸಲಾಗಿದೆ. ಇದರ ಕುರಿತು ತೀವ ಕ್ರಮಕೈಕೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದು ಇದನ್ನು ಕಾಯ್ದು ನೋಡಬೇಕಾಗಿದೆ.
ಪ್ರಕಟಣೆ :
ಅಧ್ಯಕ್ಷರು
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ (ರಿ.) ಜಿಲ್ಲಾ ಘಟಕ, ಬೆಳಗಾವಿ, ಅಧ್ಯಕ್ಷರು
ಕರ್ನಾಟಕ ಸ್ಟೇಟ್ ಸೀನಿಯರ ಸಿಟಿಜನ್ಸ
ಅಸೋಸಿಯೇಶನ್ (ರಿ) ಎನ್ ಜಿ ಓ, ಬೆಳಗಾವಿ