ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಶತಾಯುಷಿ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರಾದ ಪಾಯಪ್ಪ ಹಂಚಿನಮನಿ ಗುರುಗಳಿಗೆ ಗ್ರಾಮದ ಎಲ್ಲ ಶಿಷ್ಯಬಳಗದಿಂದ ಭವ್ಯ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ರು.
ಈ ಸಂದರ್ಭದಲ್ಲಿ, ಹಂಚಿನಮನಿ ಗುರುಗಳ ಸೇವಾ ಅವಧಿಯಲ್ಲಿ ಅವರು ಸಲ್ಲಿಸಿದ ಮಹತ್ವದ ಸೇವೆಗಳನ್ನು ಹಾಗೂ ವಿವಿಧ ಹುದ್ದೆಗಳಲ್ಲಿ ನೀಡಿದ ಅಮೂಲ್ಯ ಕೊಡುಗೆಯನ್ನು ಡಾ. ಗಜಾನಂದ ಸೋಗಲನ್ನವರ ಪ್ರಾಸ್ತಾವಿಕವಾಗಿ ಸ್ಮರಿಸಿದರು.
ಸಂಸ್ಕಾರ ಉಳಿಯಲು ಶಿಕ್ಷಕರ ಸೇವೆಯ ಮಹತ್ವ — ಬಾಬಾಸಾಹೇಬ್ ಪಾಟೀಲ
ಕಾರ್ಯಕ್ರಮದಲ್ಲಿ ಕಿತ್ತೂರ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ ಮಾತನಾಡಿ, “ನಮ್ಮೂರ ಸಂಸ್ಕಾರವನ್ನು ಉಳಿಸಲು ಇಂತಹ ಶ್ರದ್ಧಾ ಹಾಗೂ ನಿಷ್ಠೆಯೊಂದಿಗೆ ಶಿಕ್ಷಣ ಸೇವೆ ಸಲ್ಲಿಸಿದ ಗುರುಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ,” ಎಂದರು.
ಇನ್ನೊರ್ವ ನಿವೃತ್ತ ಶಿಕ್ಷಕರಾದ ಬಿ.ಎ. ಪಾಟೀಲ ಅವರು ಪಾಯಪ್ಪ ಹಂಚಿನಮನಿ ಅವರೊಡನೆ ಕಳೆದ ಒಡನಾಟವನ್ನು ಮತ್ತು ಶೈಕ್ಷಣಿಕ ಸೇವೆಯನ್ನು ಸ್ಮರಿಸಿದರು.
ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ :
ಕಾರ್ಯಕ್ರಮದ ಅಂಗವಾಗಿ, 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗೆ ಗೌರವ ಸಲ್ಲಿಸುವ ಮೂಲಕ, ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಶುಭ ಹಾರೈಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದವರಿಗೆ ಹಾಗೂ ಆಪರೇಷನ್ ಸಿಂಧೂರ್‌ನಲ್ಲಿ ಬಲಿಯಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿ, ಶೋಕಾಚರಣೆಯನ್ನು ನಡೆಸಲಾಯಿತು.
ಮಾಜಿ ಸೈನಿಕರು ಮತ್ತು ಗ್ರಾಮ ಮುಖಂಡರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಎಲ್ಲ ಊರಿನ ಮಾಜಿ ಸೈನಿಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಗಣಪತಿ ನೇಗಿನಹಾಳ, ಪಾಯಪ್ಪ ಮೂಲಿಮನಿ, ಯಲ್ಲಪ್ಪ ಮೇಲಿನಮನಿ, ಮೇಜರ್ ಮೋಹನ ಅಂಗಡಿ, ಗ್ರಾಮಪಂಚಾಯತ್ ಅಧ್ಯಕ್ಷರು ಹಾಗೂ ಗ್ರಾಮಪಂಚಾಯತ್ ಸದಸ್ಯರಾದ ಶಿವಾನಂದ ಪೂಜೇರಿ, ರಮೇಶ ಪೂಜೇರಿ ಹಾಗೂ ಗ್ರಾಮದ ಊರಿನ ನಾಗರಿಕರು ಉಪಸ್ಥಿತರಿದ್ದರು.
ಮಹಾದೇವಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.