ಮೂಡಲಗಿಯಲ್ಲಿ ಸಾಯಿ ಮಂದಿರ ಉದ್ಘಾಟನೆ
ಒಂದೇ ಮಂದಿರದಲ್ಲಿ ಭಕ್ತರಿಗೆ ಶಿರಡಿ ಸಾಯಿಬಾಬಾ ಮತ್ತು ಪುಟ್ಟಪರ್ತಿ ಸಾಯಿಬಾಬಾರ ದರ್ಶನ ಭಾಗ್ಯ- ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ- ಪಟ್ಟಣದ ಸತ್ಯಸಾಯಿ ಸೇವಾ ಸಮೀತಿಯವರು ಸಾರ್ವಜನಿಕರು ಮತ್ತು ವಿವಿಧ ಸಂಘ- ಸಂಸ್ಥೆಗಳ ವಂತಿಗೆಯಲ್ಲಿ ಭವ್ಯವಾಗಿ ನಿರ್ಮಿಸಿರುವ ಸಾಯಿ ಮಂದಿರವು ಭಕ್ತರನ್ನು ಆಕರ್ಷಿಸುವ ಸುಂದರವಾದ ಮಂದಿರವಾಗಿದೆ. ಸಾಯಿಬಾಬಾ ಸಕಲ ಭಕ್ತರ ಸಂಕಷ್ಟಗಳನ್ನು ನಿವಾರಿಸಿ ಎಲ್ಲರಲ್ಲಿಯೂ ಪ್ರೀತಿ, ಸಹನೆ ಮೂಡುವಂತಾಗಲಿ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಆಶಿಸಿದರು.
ಗುರುವಾರದಂದು ಪಟ್ಟಣದ ಲಕ್ಷ್ಮೀ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸಾಯಿ ಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಡಲಗಿಯಲ್ಲಿಯೇ ಸುಂದರವಾದ ಮಂದಿರವನ್ನು ನಿರ್ಮಿಸಲು ಶಕ್ತಿ ಮೀರಿ ಪ್ರಯತ್ನಿಸಿರುವ ಸತ್ಯಸಾಯಿ ಸೇವಾ ಸಮೀತಿಯವರನ್ನು ಶ್ಲಾಘಿಸಿದರು.
ಸಾಯಿ ಮಂದಿರ ನಿರ್ಮಿಸಲು 2015 ರಲ್ಲಿ ಇಲ್ಲಿನ ಪುರಸಭೆಯಿಂದ 4 ಗುಂಟೆ ನಿವೇಶನವನ್ನು ನೀಡಲಾಯಿತು. ಸೇವಾ ಸಮೀತಿಯ ಸದಸ್ಯರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು. ಅಂದಾಜು 1.50 ಕೋಟಿ ರೂಪಾಯಿ ವೆಚ್ಚವು ಈ ಮಂದಿರಕ್ಕೆ ತಗುಲಿದೆ. ಮಂದಿರ ನಿರ್ಮಾಣವಾಗಲು ಮೂಡಲಗಿ ಸಾರ್ವಜನಿಕರು ತನು,ಮನ, ಧನದ ಸೇವೆಯನ್ನು ಸಲ್ಲಿಸಿದ್ದಾರೆ. ನೂರು ರೂಪಾಯಿ ಯಿಂದ ಲಕ್ಷ, ಲಕ್ಷ ರೂಪಾಯಿಗಳನ್ನು ದೇಣಿಗೆಯನ್ನಾಗಿ ನೀಡಿದ್ದಾರೆ. ಎಲ್ಲ ಧರ್ಮಗಳ ಜನರು ಒಂದೇ ಎಂಬುದನ್ನು ಸಂದೇಶವನ್ನು ಸಾರಿರುವ ಶಿರಡಿ ಬಾಬಾ ಮತ್ತು ಪುಟ್ಟಪರ್ತಿ ಸಾಯಿ ಬಾಬಾರವರ ದರ್ಶನವನ್ನು ಏಕಕಾಲಕ್ಕೆ ಒದಗಿಸಿಕೊಟ್ಟು ಭವ್ಯವಾದ ಮಂದಿರ ತಲೆಎತ್ತಲು ಕಾರಣೀಕರ್ತರಾದ ದಾನಿಗಳನ್ನು ಅವರು ಅಭಿನಂದಿಸಿದರು.
ಇನ್ಮುಂದೆ ಸಾಯಿ ಬಾಬಾ ದರ್ಶನಕ್ಕಾಗಿ ದೂರದ ಶಿರಡಿ ಅಥವಾ ಪುಟ್ಟಪರ್ತಿಗೆ ಹೋಗಬೇಕಿಲ್ಲ. ಮೂಡಲಗಿಯಲ್ಲಿಯೇ ಒಂದೇ ಮಂದಿರದಲ್ಲಿ ಶಿರಡಿ- ಪುಟ್ಟಪರ್ತಿ ಸಾಯಿಬಾಬಾರ ದರ್ಶನವು ಭಕ್ತ ಸಮೂಹಕ್ಕೆ ಆಗಲಿದೆ. ಈ ಭಾಗದಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಿಸಲು ಈ ಮಂದಿರವು ಅನುಕೂಲವಾಗಲಿದೆ. ಮಂದಿರವನ್ನು ಭಕ್ತರಿಗೆ ಅರ್ಪಿಸಿದ್ದಾಗಿದೆ. ಪೂಜಾ ಕಾರ್ಯಗಳನ್ನು ದಿನನಿತ್ಯ ಅಚ್ಚುಕಟ್ಟಾಗಿ ನಡೆಯಬೇಕು. ಇದಕ್ಕಾಗಿ ಶಾಶ್ವತ ಅರ್ಚಕರನ್ನು ನಿಯೋಜಿಸಬೇಕು. ಪೂಜೆ- ಪುನಸ್ಕಾರದಿಂದ ಮನಸ್ಸು ನೆಮ್ಮದಿಯನ್ನು ನೀಡುತ್ತದೆ ಎಂದು ಅವರು ಹೇಳಿದರು.
ಸಾಯಿಬಾಬಾರ ಪವಾಡಗಳು ಅಷ್ಟಿಷ್ಟಲ್ಲ. ರೋಗಗಳನ್ನು ಗುಣಪಡಿಸಿದರು. ಭಕ್ತರು ಬಯಸಿರುವ ವಸ್ತುಗಳನ್ನು ನೀಡಿದರು. ಭಕ್ತರಿಗೆ ಬಂದ ಕಷ್ಟಗಳನ್ನು ನಿವಾರಿಸಿದರು. ಎಲ್ಲ ಜಾತಿ- ಧರ್ಮಗಳನ್ನು ಒಂದೇ ಎಂಬುದನ್ನು ಸಾರಿದರು. “ಸಬ್ ಕಾ ಮಾಲೀಕ ಏಕ್” ಎಂಬುದನ್ನು ಒತ್ತಿ ಒತ್ತಿ ಹೇಳಿದರು. ಪವಾಡ ಪುರುಷ ಸಾಯಿಬಾಬಾರ ದರ್ಶನವನ್ನು ಪಡೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಕೆಗೆ ಭಕ್ತಿ, ಶ್ರದ್ಧಾ ಪೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವರು ಭಕ್ತ ವೃಂದಕ್ಕೆ ತಿಳಿಸಿದರು.
ಭಾರತದಲ್ಲಿ ಅನೇಕಾನೇಕ ಜಾತಿ- ಧರ್ಮಗಳಿವೆ. ಆದರೆ ಎಲ್ಲರೂ ಪೂಜಿಸುವುದು ಮಾತ್ರ ದೇವರನ್ನು. ದೇವರಿಗೆ ಅದ್ಭುತವಾದ ಶಕ್ತಿಯಿದೆ. ಸಾಮರ್ಥ್ಯವಿದೆ. ದೇವರಿಂದಲೇ ಎಲ್ಲವೂ ನಡೆಯುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ ಧಾರ್ಮಿಕತೆಯನ್ನು ವಿಶ್ವವ್ಯಾಪಿಯಾಗಿ ಬೆಳೆಸುತ್ತಿದೆ. ನಾವುಗಳು ನಂಬಿಕೊಂಡು ಬದುಕುತ್ತಿರುವ ದೇವರು ಸದಾ ನಮ್ಮೊಂದಿಗಿದ್ದಾನೆ ಎಂಬುದಕ್ಕೆ ನಮಗೆ ಬರುತ್ತಿರುವ ಕಷ್ಟಗಳು ದೂರವಾಗುತ್ತಿರುವುದಕ್ಕೆ ಸಾಕ್ಷಿಯಾಗಿವೆ ಎಂದು ಅವರು ಹೇಳಿದರು.
ದಿವ್ಯ ಸಾನ್ನಿಧ್ಯವನ್ನು ಸ್ಥಳೀಯ ದತ್ತಾತ್ರೇಯ ಬೋಧ ಮಹಾಸ್ವಾಮಿಗಳು ವಹಿಸಿದ್ದರು. ಸಾನ್ನಿಧ್ಯವನ್ನು ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಮುನ್ಯಾಳ- ರಂಗಾಪೂರದ ಡಾ. ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶಿರೂಂಜ- ಕುಳಲಿಯ ಬಸವ ಸಮರ್ಥ ಮಹಾಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಸತ್ಯಸಾಯಿ ಸೇವಾ ಸಮೀತಿ ಸಂಚಾಲಕ ಹಣಮಂತ ಸೋರಗಾವಿ ವಹಿಸಿದ್ದರು.
ರೆಡ್ಡಿ ಬ್ಯಾಂಕ್ ಸ್ಥಳೀಯ ಶಾಖಾಧ್ಯಕ್ಷ ಮತ್ತು ಹಿರಿಯ ಮುಖಂಡ ಎಸ್.ಆರ್. ಸೋನವಾಲ್ಕರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಪುರಸಭೆ ಅಧ್ಯೆಕ್ಷೆ ಖುರ್ಷಾದ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಬಸವರಾಜ ಗುಲಗಾಜಂಬಗಿ, ಸಂತೋಷ ಸೋನವಾಲ್ಕರ, ಡಾ. ಶಿವು ವೀರಣ್ಣ ಹೊಸೂರ, ತಹಶೀಲ್ದಾರ ಶ್ರೀಶೈಲ ಗುಡಮೆ, ಬಿ.ಟಿ.ನಂದಗಾವಿ, ಸತ್ಯಸಾಯಿ ಸೇವಾ ಸಮೀತಿ ಜಿಲ್ಲಾಧ್ಯಕ್ಷ ವಸಂತ ಬಾಳಿಗಾ, ಬೆಳಗಾವಿ ಆಧ್ಯಾತ್ಮಿಕ ವಿಭಾಗದ ಹಿರಿಯ ಸಂಪನ್ಮೂಲ ವ್ಯಕ್ತಿ ಸುರೇಶ ಕಬ್ಬೂರ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಸೇವಾ ಸಮಿತಿಯ ಪ್ರಮುಖರು, ಪುರಸಭೆ ಹಾಲಿ- ಮಾಜಿ ಸದಸ್ಯರು, ಸಹಕಾರಿಗಳು, ಅಧಿಕಾರಿಗಳು ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಯಿ ಮಂದಿರ ನಿರ್ಮಾಣಕ್ಕೆ ನಿವೇಶನ ಸಹಿತ 8 ಲಕ್ಷ ರೂಪಾಯಿ ದೇಣಿಗೆ ನೀಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಸತ್ಯಸಾಯಿ ಸೇವಾ ಸಮೀತಿಯಿಂದ ಸತ್ಕರಿಸಿ, ಗೌರವಿಸಲಾಯಿತು.
ಮಂದಿರ ನಿರ್ಮಾಣಕ್ಕೆ ದೇಣಿಗೆಯನ್ನು ನೀಡಿರುವ ದಾನಿಗಳು, ಮಹಾ ಪ್ರಸಾದ ದಾನಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.