HomeಲೇಖನSarojini Naidu Information in Kannada- 'ಭಾರತದ ಕೋಗಿಲೆ' ಸರೋಜಿನಿ ನಾಯ್ಡು

Sarojini Naidu Information in Kannada- ‘ಭಾರತದ ಕೋಗಿಲೆ’ ಸರೋಜಿನಿ ನಾಯ್ಡು

spot_img

‘ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದ ಕವಯತ್ರಿ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಸ್ವಾತಂತ್ರ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರು ಫೆಬ್ರವರಿ 13, 1879ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಪ್ರಥಮ ಮಹಿಳಾ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಪ್ರಥಮ ರಾಜ್ಯಪಾಲರಾದ ಹೆಗ್ಗಳಿಕೆಗೆ ಪಾತ್ರರಾದವರು.

ಸರೋಜಿನಿಯವರ ತಂದೆ ಅಘೋರನಾಥ ಚಟ್ಟೋಪಾಧ್ಯಾಯರು ವಿಜ್ಞಾನಿ ಮತ್ತು ತತ್ವಶಾಸ್ತ್ರಜ್ಞರು. ಹೈದರಾಬಾದಿನಲ್ಲಿ ನಿಜಾಂ ಕಾಲೇಜನ್ನು ಸಂಸ್ಥಾಪಿಸಿದ ಕೀರ್ತಿ ಅವರದು. ತಾಯಿ ಸುಂದರಿ ದೇವಿ ಬಂಗಾಳದ ಕವಯತ್ರಿ. ಸರೋಜಿನಿಯವರ ಸಹೋದರ ಬೀರೇಂದ್ರನಾಥರು ಕ್ರಾಂತಿಕಾರಿಯಾಗಿ ಹಾಗೂ ಅವರ ಮತ್ತೊಬ್ಬ ಸಹೋದರ ಹರೀಂದ್ರನಾಥರು ಕವಿಯಾಗಿ, ರಂಗತಜ್ಞರಾಗಿ ಹಾಗೂ ನಟರಾಗಿ ಪ್ರಸಿದ್ಧರು.

ಬಾಲಪ್ರತಿಭೆ ಎನಿಸಿದ್ದ ಸರೋಜಿನಿ ನಾಯ್ಡು ಅವರು ಓದಿನಲ್ಲಿ ಯಾವಾಗಲೂ ಮುಂದು. ಉರ್ದು, ತೆಲುಗು, ಇಂಗ್ಲಿಷ್, ಬೆಂಗಾಳಿ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಅವರು ಪ್ರಾವೀಣ್ಯತೆ ಸಾಧಿಸಿದ್ದರು. ಮದ್ರಾಸ್ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸರೋಜಿನಿಯವರು ಪ್ರಪ್ರಥಮ ಸ್ಥಾನ ಪಡೆದಾಗ ಅವರು ಎಲ್ಲೆಡೆ ಪ್ರಸಿದ್ಧರಾಗಿಬಿಟ್ಟಿದ್ದರು. ತಂದೆಯವರಿಗೆ ಮಗಳು ಸರೋಜಿನಿ ವಿಜ್ಞಾನ ಅಥವಾ ಗಣಿತದಲ್ಲಿ ಹೆಚ್ಚು ಸಾಧಿಸಬೇಕೆಂಬ ಅಭಿಪ್ರಾಯವಿತ್ತಾದರೂ ಸರೋಜಿನಿ ಅವರಿಗೆ ಕಾವ್ಯದಲ್ಲಿ ಹಂಬಲ ಮೂಡಿತು. ಇಂಗ್ಲಿಷಿನಲ್ಲಿ ಕಾವ್ಯ ರಚನೆಯಲ್ಲಿ ತೊಡಗಿದ ಸರೋಜಿನಿ ಅವರ ಪ್ರತಿಭೆಯ ಬಗ್ಗೆ ಸಂತೋಷಿಸಿದ ಹೈದರಾಬಾದ್ ನಿಜಾಮರು ಸರೋಜಿನಿಯವರಿಗೆ ವಿದೇಶದಲ್ಲಿ ಓದುವ ಸಲುವಾಗಿ ವಿದ್ಯಾರ್ಥಿವೇತನವನ್ನು ನೀಡಿದರು.

ಸರೋಜಿನಿ ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಇಂಗ್ಲೆಂಡಿಗೆ ಹೊರಟರು. ಲಂಡನ್ನಿನ ಕಿಂಗ್ಸ್ ಕಾಲೇಜು ಮತ್ತು ಕೇಂಬ್ರಿಡ್ಜಿನ ಗಿರ್ಟನ್ ಕಾಲೇಜುಗಳಲ್ಲಿ ವ್ಯಾಸಂಗ ನಡೆಸುತ್ತಿದ್ದ ಸರೋಜಿನಿಯವರು ಆ ಕಾಲದ ಪ್ರಸಿದ್ಧ ಕವಿಗಳಾದ ಆರ್ಥರ್ ಸೈಮನ್ ಮತ್ತು ಎಡ್ಮಂಡ್ ಗಸ್ಸೇ ಅವರೊಡನೆ ಸಂಪರ್ಕ ಬೆಳಸಿಕೊಂಡರು. ಗಸ್ಸೇ ಅವರು ಸರೋಜಿನಿ ಅವರಿಗೆ ಭಾರತದ ಪರ್ವತಗಳು, ನದಿ, ದೇವಾಲಯ, ಸಾಮಾಜಿಕ ಪರಿಸರ ಮತ್ತು ಜೀವನಗಳನ್ನು ತಮ್ಮ ಕಾವ್ಯಕ್ಕೆ ವಸ್ತುವನ್ನಾಗಿ ಮಾಡಿಕೊಳ್ಳಲು ಸೂಚಿಸಿದರು. ಹೀಗಾಗಿ ಸರೋಜಿನಿಯವರು ತಮ್ಮ ಸಮಕಾಲೀನ ಭಾರತೀಯ ಬದುಕು ಮತ್ತು ಘಟನಾವಳಿಗಳನ್ನು ತಮ್ಮ ಕಾವ್ಯಕ್ಕೆ ವಸ್ತುವನ್ನಾಗಿಸತೊಡಗಿದರು. ಸರೋಜಿನಿಯವರ ಕವನ ಸಂಕಲನಗಳಾದ ‘the golden threshold’, ‘the broken wing’, ‘the bird of time’ ಮುಂತಾದವು ಬೃಹತ್ ಸಂಖ್ಯೆಯ ಭಾರತೀಯ ಮತ್ತು ಇಂಗ್ಲಿಷ್ ಓದುಗರನ್ನು ಆಕರ್ಷಿಸಿದವು.

 

 

ಡಾ. ಗೋವಿಂದರಾಜು ಎಂಬುವರನ್ನು ಪ್ರೇಮಿಸಿದ ಸರೋಜಿನಿಯವರು, ಜಾತಿ ಪದ್ಧತಿಯಿದ್ದ ಅಂದಿನ ಕಠಿಣ ದಿನಗಳಲ್ಲಿ ಯಾವುದೇ ವಿರೋಧಗಳನ್ನೂ ಲೆಕ್ಕಿಸದೆ ಅಂತರ್ಜಾತೀಯ ವಿವಾಹವಾದರು. ಮುಂದೆ ತಮ್ಮ ವೈವಾಹಿಕ ಜೀವನವನ್ನು ಸುಸೂತ್ರವಾಗಿ ನಿರ್ವಹಿಸಿದ ಅವರಿಗೆ ನಾಲ್ಕು ಮಕ್ಕಳು.

1905ರ ವರ್ಷದಲ್ಲಿ ಬಂಗಾಳದ ವಿಭಜನೆಯಾದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಸರೋಜಿನಿ ನಾಯ್ಡು ಅವರು ಗೋಪಾಲಕೃಷ್ಣ ಗೋಖಲೆ, ರಬೀಂದ್ರನಾಥ ಠಾಗೂರ್, ಮಹಮ್ಮದ್ ಆಲಿ ಜಿನ್ನಾ, ಅನ್ನಿ ಬೆಸೆಂಟ್, ಸಿ. ಪಿ. ರಾಮಸ್ವಾಮಿ ಅಯ್ಯರ್, ಮಹಾತ್ಮ ಗಾಂಧಿ, ಜವಹರಲಾಲ್ ನೆಹರೂ ಮುಂತಾದವರ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಸ್ತ್ರೀಯರಲ್ಲಿ ಜಾಗೃತ ಮನೋಭಾವನೆಯನ್ನು ತರಲು ದೇಶದಾದ್ಯಂತ ಸಂಚರಿಸಿದ ಅವರು ದೇಶದ ಸ್ತ್ರೀಯರಲ್ಲಿ ಆತ್ಮವಿಶ್ವಾಸ ತುಂಬುವ ಕಾಯಕ ನಡೆಸಿದರು.

ಸರೋಜಿನಿ ನಾಯ್ಡು ಅವರು 1925ರ ವರ್ಷದಲ್ಲಿ ಕಾನ್ಪುರದಲ್ಲಿ ಜರುಗಿದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದುದೇ ಅಲ್ಲದೆ ಅಸಹಕಾರ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಗಾಂಧೀಜಿ ಮತ್ತು ಇತರ ಸ್ವಾತಂತ್ರ ಹೋರಾಟಗಾರರ ಜೊತೆಯಲ್ಲಿ ಸೆರೆಮನೆ ವಾಸವನ್ನನುಭವಿಸಿದರು. 1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಅವರನ್ನು 21 ತಿಂಗಳುಗಳ ಕಾಲ ಸೆರೆವಾಸದಲ್ಲಿ ಇರಿಸಲಾಯಿತು. ಗಾಂಧೀಜಿಯವರೊಡನೆ ಆತ್ಮೀಯ ಸಂಬಂಧ ಹೊಂದಿದ್ದ ಸರೋಜಿನಿ ನಾಯ್ಡು ಅವರು ಗಾಂಧೀಜಿಯವರನ್ನು ಪ್ರೀತಿಯಿಂದ ‘ಮಿಕ್ಕಿಮೌಸ್’ ಎಂದು ಕರೆಯುತ್ತಿದ್ದರಂತೆ.

ಸ್ವಾತಂತ್ರ್ಯಾನಂತರದಲ್ಲಿ ಸರೋಜಿನಿ ನಾಯ್ಡು ಅವರನ್ನು ಉತ್ತರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಸರೋಜಿನಿ ನಾಯ್ಡು ಅವರು ಮಾರ್ಚ್ 2, 1949ರಂದು ನಿಧನರಾದರು.

‘The Golden Threshold’, ‘The Bird of Time: Songs of Life, Death & the Spring’, ‘The Broken Wing: Songs of Love, Death and the Spring, including “The Gift of India” , ‘Muhammad Ali Jinnah: An Ambassador of Unity’(1916), ‘The Sceptred Flute: Songs of India’, ‘The Feather of the Dawn’ ಮುಂತಾದವು ಸರೋಜಿನಿ ನಾಯ್ಡು ಅವರ ಪ್ರಸಿದ್ಧ ಪ್ರಕಟಣೆಗಳಾಗಿವೆ.


ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

RELATED ARTICLES

Most Popular

error: Content is protected !!
Join WhatsApp Group