ದುಡಿಮೆ ಮತ್ತು ಬೆವರುಗಳೇ ನಮ್ಮ ಆರೋಗ್ಯದ ಲಕ್ಷಣಗಳು. ನಿಸರ್ಗಕ್ಕೆ ಒತ್ತಾಯಿಸದೆ ಸಹಕರಿಸಿ ಬದುಕಬೇಕು. ಅನಾರೋಗ್ಯ ಆರೋಗ್ಯದ ರುಚಿ ತೋರಿಸುತ್ತದೆ ಎಂದು ಕ ಸಾ ಪ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿ ಹೇಳಿದರು.
ರವಿವಾರ ದಿ.7 ರಂದು ಲಿಂಗಾಯತ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾದ ‘ವಾರದ ಸತ್ಸಂಗ ಮತ್ತು ಉಪನ್ಯಾಸ’ ಕಾರ್ಯಕ್ರಮದಲ್ಲಿ’ ಅಂಗೈಯಲ್ಲಿ ಆರೋಗ್ಯ’ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಾವು ತಿನ್ನುವ ಆಹಾರ ಪದ್ಧತಿ ಹೇಗಿರಬೇಕು. ನಾವು ತಿನ್ನುವ ಯಾವ ಯಾವ ಪದಾರ್ಥಗಳಲ್ಲಿ ಇರುವ ವಿಶೇಷತೆ ಏನು. ಹಣ್ಣುಗಳಲ್ಲಿ ತರಕಾರಿಗಳಲ್ಲಿ ಇರುವ ವಿಶೇಷತೆಗಳೇನು. ಪರಾವಲಂಬಿ ಗಳಿಂದ ನಮ್ಮ ದೇಹವನ್ನು ರಕ್ಷಣೆ ಮಾಡಿಕೊಳ್ಳಲು ನಾವು ಹೇಗೆ ಬದುಕಬೇಕು, ಎಂಬುದನ್ನು ಅನೇಕ ಉದಾಹರಣೆಗಳನ್ನು ಕೊಡುತ್ತಾ ವಿವರಿಸಿದರು. ಸಂಘಟನೆಯ ಸದಸ್ಯರಾದ ಸದಾಶಿವ ದೇವರಮನಿ ಮಾತನಾಡಿ ಹಿಂದಿನ ಕಾಲದ ವಾಸ್ತವಿಕತೆಯನ್ನು ನಾವಿಂದು ಬಳಕೆ ಮಾಡುತ್ತಿಲ್ಲ. ನಮ್ಮ ಅಡುಗೆಮನೆ ನಮ್ಮ ಆಸ್ಪತ್ರೆ ಮತ್ತು ನಾವೇ ಅದರ ವೈದ್ಯರಾಗಬೇಕು. ಹಣ್ಣು ಕಾಯಿ ತರಕಾರಿ ಬೇಳೆ ಮುಂತಾದವುಗಳನ್ನು ಅತ್ಯಂತ ವಿಚಾರ ಶೀಲತೆಯಿಂದ ಬಳಸಿದಾಗ ಆರೋಗ್ಯವನ್ನು ಕಾಪಾಡಬಹುದು ಎಂದರು. ಶ್ರಾವಣ ಮಾಸದ ಪ್ರಯುಕ್ತ ಸತ್ಸಂಗ ಮತ್ತು ಉಪನ್ಯಾಸಗಳು ಮನಸ್ಸಲ್ಲಿ ಚೈತನ್ಯ ಮೂಡಿಸುವುದರ ಜೊತೆಗೆ ನಮ್ಮನ್ನು ವಿಶೇಷ ಲೋಕಕ್ಕೆ ಕರೆದೊಯ್ಯುತ್ತವೆ.ಆ ನಿಟ್ಟಿನಲ್ಲಿ ಸತ್ಸಂಗ ನಿರಂತರವಾಗಿರಬೇಕು ಎಂದು ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿ.ಕೆ ಪಾಟೀಲ, ಶಿವಕುಮಾರ ಪಾಟೀಲ, ಬಿ. ಎಂ. ತಿಗಡಿ,ಸಂಗಮೇಶ ಅರಳಿ, ಶಿವಾನಂದ ತಲ್ಲೂರ, ಬಿ. ಬಿ. ಮಠಪತಿ, ಮಹಾದೇವಿ ಅರಳಿ, ಬಸಮ್ಮಾ ಮಠದ, ಸುವರ್ಣಾ ಗುಡಸ, ಸುನೀತಾ ಕಲ್ಮಠ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶರಣ ಶರಣೆಯರು ಇಂದ ಸಾಮೂಹಿಕ ವಚನ ಪ್ರಾರ್ಥನೆ ಮತ್ತು ಅನುಭಾವಿಗಳಿಂದ ವಚನಗಳ ವಿಶ್ಲೇಷಣೆ ನಡೆಯಿತು. ಬಸಮ್ಮ ವಸ್ತ್ರದ ಭಾವಗೀತೆ ಪ್ರಸ್ತುತಪಡಿಸಿದರು. ಸುರೇಶ ನರಗುಂದ ಕಾರ್ಯಕ್ರಮವನ್ನು ನಿರ್ವಹಿಸಿ ನಿರೂಪಿಸಿದರು. ಕೊನೆಯಲ್ಲಿ ವಚನ ಮಂಗಳ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.