ಮೂಡಲಗಿ : ಇಂದಿರಾ ಕ್ಯಾಂಟಿನ್ ರಾಜ್ಯ ಸರ್ಕಾರದ ಮಹತ್ತರ ಯೋಜಗಳಲ್ಲೊಂದಾಗಿದ್ದು, ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಊಟ ಹಾಗೂ ಉಪಹಾರದ ಸೌಲಭ್ಯಗಳನ್ನು ಈ ಭಾಗದ ಜನ ಸಾಮಾನ್ಯರು ಪಡೆದುಕೊಳ್ಳಬೇಕೆಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಮನವಿ ಮಾಡಿದರು.
ಮಂಗಳವಾರದಂದು ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರ ಇತ್ತೀಚೆಗಷ್ಟೆ ಪ್ರಾರಂಭವಾದ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿ ಮಾತನಾಡಿದ ಅವರು, ಕ್ಯಾಂಟಿನ್ ಸಿಬ್ಬಂದಿಯೊಂದಿಗೆ ಚರ್ಚಿಸಲಾಗಿ ಸದ್ಯಕ್ಕೆ ಸರ್ಕಾರದಿಂದ ಈ ಕ್ಯಾಂಟಿನ್ ನಲ್ಲಿ ಗ್ರಾಹಕರಿಗೆ ದಿನಕ್ಕೆ ೩೦೦ ಪ್ಲೇಟ್ ಊಟೋಪಾಹಾರ ಒದಗಿಸುವ ಗುರಿಯಿದ್ದು ಇನ್ನೂ ಹೆಚ್ಚಿನ ಬೇಡಿಕೆಯಿದೆ. ಆದಷ್ಟು ಬೇಗ ಸಂಬಂಧಪಟ್ಟ ಮೇಲಿನ ಅಧಿಕಾರಿಗಳ ಜೊತೆ ಮಾತನಾಡಿ ದಿನಕ್ಕೆ ೫೦೦ಪ್ಲೇಟ್ ವರೆಗೆ ಸೌಲಭ್ಯ ಒದಗಿಸುವ ಕುರಿತು ಮನವಿ ಮಾಡಲಾಗುವುದು ಎಂದರು.
ಕ್ಯಾಂಟೀನ್ ಸಿಬ್ಬಂದಿಗೆ ಶುಚಿ ರುಚಿ ಜೊತೆ ಗುಣಮಟ್ಟ ಸುಧಾರಿಸುವ ಕುರಿತು ಕಿವಿಮಾತು ಹೇಳಿದ ಸವಸುದ್ದಿಯವರು, ನಂತರ ಪಟ್ಟಣದ ಭಾಜೀ ಮಾರ್ಕೆಟ್ ನಲ್ಲಿ ನಿರ್ಮಾಣವಾಗುತ್ತಿರುವ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸದಾಶಿವ ಮುರಗೋಡ, ವಿಠ್ಠಲ ಸುಲ್ತಾನಪೂರ, ಅನೇಕ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.