ಸಿಂದಗಿ; ಪ್ರತಿಯೊಂದು ಸಮುದಾಯವನ್ನು ಗೌರವಿಸಿ ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಜಯಂತಿಗಳನ್ನು ಆಚರಿಸುವ ಸತ್ಕಾರ್ಯಗಳನ್ನು ನಡೆಸಿದೆ. ಮಹಾನ್ ವ್ಯಕ್ತಿಗಳ ತತ್ವ-ಸಂದೇಶಗಳು ಸರ್ವಕಾಲಿಕವಾಗಿದ್ದು ಅದರ ಹಲವು ಭಾಗವನ್ನಾದರೂ ಜನರು ಜೀವನದಲ್ಲಿ ಅಳವಡಿಸಿಕೊಂಡಾಗ, ಉತ್ತಮ ಸಮಾಜ ನಿರ್ಮಾಣದೊಂದಿಗೆ ಸದೃಢ ಭಾರತ ಹೊರಹೊಮ್ಮಲು ಸಾಧ್ಯವಿದೆ ಎಂದು ವಿಜಯಪುರ ಎಲೈಟ್ ಕಾಲೇಜಿನ ಉಪನ್ಯಾಸ ಬಸವರಾಜ ಹಡಪದ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಸವಿತಾ ಮಹರ್ಷಿ ಜಯಂತಿ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಕುಲ ಕಸುಬುಗಳು ಅವರವರ ಬದುಕಿಗೆ ಹೊರತು ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಶೋಷಣೆ ಮಾಡುವುದಲ್ಲ. ಪ್ರತಿಯೊಬ್ಬನಲ್ಲಿಯೂ ತಾನು ಮಾಡುವ ಕಸುಬಿನ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಲು ಸಾಧ್ಯವಿದೆ. ಎಲ್ಲಕ್ಕಿಂತ ಮಿಗಿಲಾಗಿ, ಸ್ವರ ವಿಶ್ವಾಸ, ಗೌರವದೊಂದಿಗೆ ಧರ್ಮ ರಕ್ಷಿಸುವ
ಸತ್ಕಾರ್ಯ ನಡೆಯಬೇಕು. ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿ ದೇವ ದೇವತೆಗಳ ಆಯುಷ್ಕರ್ಮ ಸೇವೆಯನ್ನು ಮಾಡುತ್ತಿದ್ದಾರೆಂದು ಕಾಶಿ ಕ್ಷೇತ್ರದಲ್ಲಿ ದೊರೆತ ಮಹಾಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿರುವುದರಿಂದಲೇ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದಿದ್ದಾರೆ. ಸವಿತಾ ಮಹರ್ಷಿಯ ಪುತ್ರಿಯಾಗಿರುವ ಗಾಯತ್ರಿದೇವಿಯ ಮಂತ್ರಗಳಲ್ಲಿ ಸವಿತೃ ಎಂಬ ಪದವು ಸ್ಪಷ್ಟ ವಾಗಿ ಕಾಣುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಕರೆಪ್ಪ ಬೆಳ್ಳಿ ಮಾತನಾಡಿ, ಸರಕಾರ ಸಂತ ಶರಣರ ಜಯಂತಿಗಳನ್ನು ಆಚರಿಸುತ್ತಿರುವುದು ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಅನುಸರಿಸಬೇಕು ಅಲ್ಲದೆ ಪ್ರತಿಯೊಂದು ಸಮಾಜವು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣದಿಂದ ಸ್ವಾವಲಂಬಿಸಿ ಬದುಕಿನೊಂದಿಗೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ, ಶಿರಸ್ತೆದಾರ ಜ್ಯೋಶಿ, ಸವಿತಾ ಮಹರ್ಷಿ ಸಮಾಜದ ಅದ್ಯಕ್ಷ ಮಹಾಂತೇಶ ನಾವಿ, ಯೋಜನಾ ಪ್ರಾಧಿಕಾರದ ಸದಸ್ಯ ರವಿ ನಾವಿ, ನೀಲಕಂಠ ಹಡಪದ, ಬಸವರಜ ಸೋಂಪೂರ, ಪ್ರಕಾಶ ನಾವಿ, ಸದಾಶಿವ ನಾವಿ, ರಘವೇಂದ್ರ ಕೊಟನೂರ, ರಾಘು ನಾವಿ, ಸಿದ್ದಲಿಂಗ ನಾವಿ, ಶ್ರೀಮಂತ ನಾವಿ, ಶಿವಪುತ್ರ ನಾವಿ, ರವಿ ನಾವಿ, ಗುಂಡು ನಾವಿ, ಮಲ್ಲು ನಾವಿ ಸೇರಿದಂತೆ ಅನೇಕರಿದ್ದರು.

