ಕುಲಗೋಡ ಪಂಚಾಯತ ಪಿಡಿಓ ಕರ್ಮಕಾಂಡ

Must Read

ದಾಖಲಾತಿ ತಿದ್ದುವಲ್ಲಿ ಈ ಪಿಡಿಓ ಪಾತ್ರ ಎಷ್ಟು ?

ಮೂಡಲಗಿ : ನಕಲಿ ದಾಖಲೆಗಳನ್ನು ಸೃಷ್ಟಿಸಿ ಮನೆಯ ಜಾಗವನ್ನು ಪರಭಾರೆ ಮಾಡಿದ ಪ್ರಕರಣವೊಂದರ ತನಿಖೆಗೆ ಬಂದ ಅಧಿಕಾರಿಗಳ ಮುಂದೆಯೇ ಸಹೋದರರ ಮಧ್ಯೆ ಗಲಾಟೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಬುಧವಾರದಂದು ಈ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ವಿವರ: ಸ್ವಂತ ಸಹೋದರನೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮನೆಯ ಜಾಗವನ್ನು ಪರಭಾರೆ ಮಾಡಿಕೊಂಡಿರುವ ಬಗ್ಗೆ ಕುಲಗೋಡ ಗ್ರಾಮದ ನಿವಾಸಿ ಶಿವನಗೌಡ ಪಾಟೀಲ ಎಂಬಾತನು ಜಿಲ್ಲಾಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಆಧಾರ ಮೇಲೆ ತನಿಖೆಗೆ ಬಂದಿದ್ದ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್ ಜಿ ಚಿನ್ನನವರ ಮುಂದೆಯೇ ಸಹೋದರರ ಗಲಾಟೆಯಾಗಿದ್ದು, ನಂತರ ಗ್ರಾಮದ ತಮ್ಮಣ್ಣ ವೃತ್ತದಲ್ಲಿ ಶಿವನಗೌಡ ಮತ್ತು ಕಾಂಗ್ರೆಸ್ ಕೌಜಲಗಿ ಬ್ಲಾಕ್ ಅಧ್ಯಕ್ಷ ಪ್ರಕಾಶ ಅರಳಿ ಇವರಿಬ್ಬರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಇನ್ನೂವರೆಗೂ ಕುಲಗೋಡ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಶಿವನಗೌಡ ಪಾಟೀಲ ಆರೋಪ ಏನು? ಕುಲಗೋಡ ಗ್ರಾಮದ ಸರ್ವೆ ನಂ.147 ರಲ್ಲಿ ಒಟ್ಟು 20 ಎ 03 ಗುಂಟೆ ಜಮೀನು ಹೊಂದಿದ್ದಾರೆ. ಸದರೀ ಜಮೀನು ಶಿವನಗೌಡ ಆತನ ಸಹೋದರರಾದ ಸುರೇಶಗೌಡ, ರಮೇಶಗೌಡ, ಮೋಹನಗೌಡ, ವೆಂಕನಗೌಡ ಹಾಗೂ ಸಹೋದರಿ ಸುವರ್ಣಾ ಕೊಂ. ತಿಮ್ಮಣ್ಣ ನಾಯಕ ಅವರ ಜಂಟಿ ಒಡೆತನದಲ್ಲಿ ಇದ್ದು, ಸದರೀ ಜಮೀನನ್ನು ಲಪಟಾಯಿಸುವ ಉದ್ದೇಶ ಹೊಂದಿರುವ ಶಿವನಗೌಡನ ಸಹೋದರ ವೆಂಕನಗೌಡ ಪಾಟೀಲ ಎಂಬಾತ 2024 ಫೆಬ್ರುವರಿ 23ರಂದು 100 ರೂ, ಬಾಂಡ್ ಪಡೆದು ಶಿವನಗೌಡ ಮತ್ತು ಉಳಿದ ಸಹೋದರರ ಹೆಸರಿನಲ್ಲಿ ಖೊಟ್ಟಿ ಹಕ್ಕು ಬಿಟ್ಟ ಪತ್ರ ತಯಾರಿಸಿ ನೋಟರಿ ಕೂಡ ಮಾಡಿಸಿರುತ್ತಾನೆ. ಸದರೀ ನೋಟರಿ ಪ್ರತಿಯೊಂದಿಗೆ ವೆಂಕನಗೌಡ ಪಾಟೀಲ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಹೊಲದಲ್ಲಿ ಮನೆಯ ಉತಾರ ಸೃಷ್ಟಿಸಲು ವಿನಂತಿಸಿರುತ್ತಾನೆ.

ಈ ವಿನಂತಿಯ ಮೇರೆಗೆ ಕುಲಗೋಡ ಗ್ರಾಮ ಪಂಚಾಯತನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಓ ಆ ಮನವಿಯನ್ನು ಪರಿಶೀಲಿಸದೇ, ಸ್ಥಾನಿಕ ಚೌಕಾಶಿ ನಡೆಸದೇ, ಅರ್ಜಿ ಸಲ್ಲಿಸಿದವರ ಮನೆಯ ಯಾವೊಬ್ಬ ಸದಸ್ಯರ ಗಮನಕ್ಕೂ ತರದೇ ಗ್ರಾಮ ಪಂಚಾಯತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರುಗಳಿಗೆ ಹಣ ನೀಡಿ ಪಂಚಾಯತಿಯಲ್ಲಿ ಖೊಟ್ಟಿ ಠರಾವು ಸೃಷ್ಟಿಸಿ ವೆಂಕನಗೌಡ ಪಾಟೀಲ ಹೆಸರಿನಲ್ಲಿ ಮನೆಯ ಉತಾರನ್ನು ಸೃಷ್ಟಿಸಿರುತ್ತಾರೆ ಎಂಬ ಆರೋಪವಾಗಿದೆ.

ಘಟನೆಯ ಸತ್ಯಾಸತ್ಯತೆ ಇನ್ನಷ್ಟೇ ಹೊರಬರಬೇಕಿದ್ದು ದಾಖಲಾತಿಗಳ ಜವಾಬ್ದಾರಿ ಹೊಂದಿರುವ ಗ್ರಾಮ ಪಂಚಾಯತ ಪಿಡಿಓ ಯಾರ ಗಮನಕ್ಕೂ ತಾರದೇ ಹೆಸರು ಬದಲಾಯಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ತಾಲೂಕಾ ಪಂಚಾಯತ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕಾಗಿದೆ.

LEAVE A REPLY

Please enter your comment!
Please enter your name here

Latest News

ಕಲಬುರಗಿ ವಿಮಾನ ನಿಲ್ದಾಣ ಸ್ತಬ್ಧ: ರಾಜ್ಯ ಸರಕಾರದ ಮೌನದಿಂದ ಅಭಿವೃದ್ಧಿಗೆ ಹಿನ್ನಡೆ

371 ಜೆ ವ್ಯಾಪ್ತಿಯ ವಿಮಾನ ನಿಲ್ದಾಣಕ್ಕೆ ಗ್ರಹಣ: ಜನಪ್ರತಿನಿಧಿಗಳ ಮೌನಕ್ಕೆ ಆಕ್ಷೇಪಇತ್ತೀಚೆಗಷ್ಟೇ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ...

More Articles Like This

error: Content is protected !!
Join WhatsApp Group