Homeಸುದ್ದಿಗಳುಬಿಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಜೊಲ್ಲೆಯವರನ್ನು ಆಯ್ಕೆ ಮಾಡಿ - ಬಾಲಚಂದ್ರ ಜಾರಕಿಹೊಳಿ

ಬಿಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಜೊಲ್ಲೆಯವರನ್ನು ಆಯ್ಕೆ ಮಾಡಿ – ಬಾಲಚಂದ್ರ ಜಾರಕಿಹೊಳಿ

ನಿಪ್ಪಾಣಿ- ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಕಾಣಬೇಕಾದರೆ ಅಣ್ಣಾ ಸಾಹೇಬ ಜೊಲ್ಲೆಯವರಂತಹ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾದರೆ ಭವಿಷ್ಯದಲ್ಲಿ ಬಿಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ದೊಡ್ಡದಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯ ಇಲ್ಲವೆಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಗುರುವಾರದಂದು ನಿಪ್ಪಾಣಿ ತಾಲ್ಲೂಕಿನ ಅಪ್ಪಾಚಿವಾಡಿ ಹಾಲಸಿದ್ಧನಾಥ ಸಭಾ ಭವನದಲ್ಲಿ ಬಿಡಿಸಿಸಿ ಬ್ಯಾಂಕಿನ ಚುನಾವಣಾ ಪ್ರಚಾರದ ಅಂಗವಾಗಿ ನಿಪ್ಪಾಣಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೊಲ್ಲೆಯವರಂತಹ ಸಹಕಾರಿಗಳು ನಮ್ಮ ಬಿಡಿಸಿಸಿ ಬ್ಯಾಂಕಿಗೆ ಅಗತ್ಯವಾಗಿದೆ ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕಿಗೆ ಈಗ ಶತಮಾನೋತ್ಸವ ಸಂಭ್ರಮ.‌ ಆದರೂ ಕೇವಲ ಆರುವರೆಯಿಂದ 7 ಸಾವಿರ ಕೋಟಿ ರೂಪಾಯಿ ಠೇವಣಿಯನ್ನು ಮಾತ್ರ ಹೊಂದಿದೆ. ಆದರೆ ಅಣ್ಣಾಸಾಹೇಬ ಜೊಲ್ಲೆಯವರು ಬೀರೇಶ್ವರ ಸೊಸೈಟಿಯನ್ನು ಸ್ಥಾಪಿಸಿ ಸುಮಾರು 25 ವರ್ಷಗಳಾಗಿವೆ. ಕಡಿಮೆ ಅವಧಿಯಲ್ಲಿ ಸುಮಾರು 4 ಸಾವಿರ ಕೋಟಿ ರೂಪಾಯಿ ಠೇವಣಿ ಹಣ ಸಂಗ್ರಹಿಸಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ.‌ ಅವರ ದೂರದೃಷ್ಟಿಯಿಂದಾಗಿ ಬೀರೇಶ್ವರ ಸೊಸೈಟಿ ಇಂದು ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿ ಅಭಿವೃದ್ಧಿಪಥದಲ್ಲಿ ಮುನ್ನಡೆಯುತ್ತಿದೆ. ಅ.19 ರಂದು ನಡೆಯುವ ಚುನಾವಣೆಯಲ್ಲಿ ಜೊಲ್ಲೆಯವರನ್ನು ಗೆಲ್ಲಿಸಿ ಆಶೀರ್ವಾದ ಮಾಡುವಂತೆ ಅವರು ಮತದಾರರಲ್ಲಿ ಕೋರಿದರು.

ಸಹಕಾರಿ ಕ್ಷೇತ್ರದಲ್ಲಿ ಮಿಂಚುತ್ತಿರುವ ಜೊಲ್ಲೆಯವರಿಗೆ ಸಹಕಾರ ಕೊಡುವಂತೆಯೂ ಇತರೆ ಪಕ್ಷಗಳ ಮುಖಂಡರಿಗೆ ಮನವಿ ಮಾಡಿದ ಅವರು, ಬಿಡಿಸಿಸಿ ಬ್ಯಾಂಕ್ ರೈತರಿಗೆ ಸೇರಿದ್ದು, ಹೀಗಾಗಿ ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ರಾಜಕೀಯ ಮಾಡುವ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡೋಣ. ಆದರೆ ಇದು ಸಹಕಾರಿಯಾಗಿದ್ದು, ಎಲ್ಲರೂ ಕೂಡಿಕೊಂಡು ಕೆಲಸ ಮಾಡೋಣ. ನಿಪ್ಪಾಣಿ ಕ್ಷೇತ್ರದಿಂದ ಅಣ್ಣಾಸಾಹೇಬ್ ಜೊಲ್ಲೆಯವರು ಆಯ್ಕೆ ಆಗಲು ವೀರಕುಮಾರ ಪಾಟೀಲ, ಪ್ರಕಾಶ ಹುಕ್ಕೇರಿ, ಮಹಾಂತೇಶ ಕವಟಗಿಮಠ, ಗಣೇಶ ಹುಕ್ಕೇರಿ, ಉತ್ತಮ ಪಾಟೀಲ, ಲಕ್ಷ್ಮಣರಾವ್ ಚಿಂಗಳೆಯವರು ಸಹ ಬೆಂಬಲ ನೀಡುವಂತೆಯೂ ಅವರು ಪಕ್ಷಬೇಧ ಮರೆತು ಸಹಕಾರ ಕೋರಿದರು.

ಸಹಕಾರಿ ತತ್ವದಡಿ ರೈತರಿಗೆ ಎಲ್ಲ ರೀತಿಯ ಅನುಕೂಲವಾಗಬೇಕು.‌ ಅವರಿಗೆ ಆರ್ಥಿಕ ಸೌಲಭ್ಯಗಳು ದೊರಕಬೇಕು. ಅವರು ಸಹ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆನ್ನುವ ವಿಚಾರಗಳನ್ನಿಟ್ಟುಕೊಂಡು ಚುನಾವಣೆಗೆ ತಯಾರು ಮಾಡಿಕೊಂಡಿದ್ದೇವೆ. ಸಹಕಾರಿ ಕ್ಷೇತ್ರ ಎಂದೆಂದಿಗೂ ಸಹಕಾರಿಯಾಗಿಯೇ ಉಳಿಯಬೇಕು. ರಾಜಕೀಯ ಹಸ್ತಕ್ಷೇಪ ಆಗಲೇಬಾರದು. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಮುಖಂಡರು ಸೇರಿಕೊಂಡು ಪೆನಲ್ ಮಾಡಿದ್ದೇವೆ. ಚುನಾವಣೆಗೆ ಇನ್ನೂ ಎರಡು ತಿಂಗಳು ಕಾಲಾವಕಾಶವಿದ್ದರೂ ಈಗಾಗಲೇ ಪ್ರಚಾರ ಕಾರ್ಯವನ್ನು ಸಮಾರೋಪ ಮಾಡಿದ್ದೇವೆ. ಖಾನಾಪೂರದಿಂದ ಆರಂಭಗೊಂಡ ಪ್ರಚಾರವು ನಿಪ್ಪಾಣಿ ಬಳಿಯ ಹಾಲಸಿದ್ಧನಾಥ ದೇವಸ್ಥಾನದಲ್ಲಿ ಮುಗಿಸುತ್ತಿದ್ದೇವೆ. ಇತಿಹಾಸ ಪ್ರಸಿದ್ಧ ಹಾಲ ಸಿದ್ಧನಾಥ ದೇವರು ನಮ್ಮ ಫೆನಲಿನ ಎಲ್ಲ ಅಭ್ಯರ್ಥಿಗಳು ಆಯ್ಕೆ ಮಾಡುವಂತೆ ಆಶೀರ್ವಾದ ಮಾಡಲಿ ಎಂದು ಪ್ರಾರ್ಥಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಚುನಾವಣೆಯನ್ನು ಎದುರಿಸೋಣ. ಕನಿಷ್ಟ ಪಕ್ಷ 12 ರಿಂದ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಖಂಡಿತವಾಗಿಯೂ ನಮ್ನದೇ ಫೆನಲ್ ಪ್ರಚಂಡ ಬಹುಮತ ಸಾಧಿಸಿದಂತಾಗುತ್ತದೆ. ಮುಂದೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ದೊರಕಿಸಿಕೊಟ್ಟರೆ ಅವರಿಗೆ ಒಳ್ಳೆಯದಾಗುತ್ತದೆ. ರೈತರಿಗೆ ಒಳ್ಳೆಯದನ್ನು ಮಾಡಲು ಬ್ಯಾಂಕಿಗೆ ಬರುತ್ತಿದ್ದೇವೆ ಹೊರತು ಅವರಿಗೆ ಕೆಟ್ಟದ್ದನ್ನು ಮಾಡಲು ಅಲ್ಲವೆಂದು ಅವರು ಸ್ಪಷ್ಟಪಡಿಸಿದರು.

ಮಹಾರಾಷ್ಟ್ರದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ಹಾದಿಯಲ್ಲಿ ನಾವೆಲ್ಲರೂ ಸಾಗೋಣ. ರಾಜಕೀಯ, ಸಹಕಾರ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಅನನ್ಯವಾಗಿದೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ‌. ಅಂತೆಯೇ ಮಿತ್ರರೂ ಅಲ್ಲ. ಇಂದಿನ ಶತ್ರುಗಳು ನಾಳಿನ ಮಿತ್ರರಾಗುತ್ತಾರೆ. ಅಂತೆಯೇ ಇಂದಿನ ಮಿತ್ರರು ನಾಳಿನ ವಿರೋಧಿಗಳಾಗುತ್ತಾರೆ. ಇದೇ ದೃಷ್ಟಿಯನ್ನು ಇಟ್ಟುಕೊಂಡು ಅಣ್ಣಾಸಾಹೇಬ್ ಜೊಲ್ಲೆಯವರು ತಮ್ಮ ರಾಜಕೀಯ ವಿರೋಧಿಗಳನ್ನು ಭೇಟಿ ಮಾಡಿ ಮತ ಯಾಚಿಸುವಂತೆಯೂ ಹೇಳಿದ್ದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮತ್ತು ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆಯವರು ಮತಯಾಚಿಸಿ ಮಾತನಾಡಿ, ಬ್ಯಾಂಕು ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಎಲ್ಲ ಪಿಕೆಪಿಎಸ್ ಗಳಿಗೆ ಮೂಲ ಸೌಕರ್ಯಗಳನ್ನು ನೀಡಲು ಸಿದ್ಧನಿರುವೆ. ಈಗಾಗಲೇ 75 ಪಿಕೆಪಿಎಸ್ ಗಳು ಬೆಂಬಲ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯು ಹೆಚ್ಚಾಗಲಿದೆ. ರೈತರ ಸೇವೆಗೆ ಸದಾ ಬದ್ಧನಿದ್ದು, ಅಕ್ಟೋಬರ್ ತಿಂಗಳಲ್ಲಿ ಜರುಗುವ ಚುನಾವಣೆಯಲ್ಲಿ ನನಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ನಿಪ್ಪಾಣಿ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಜನೋಪಯೋಗಿ ಕೆಲಸಗಳನ್ನು ಮಾಡಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಿಲ್ಲ. ಶಾಸಕ ಬಾಲಚಂದ್ರ ಜಾರಕಿಹೊಳಿಯವರು ನಮ್ಮ ನಿಪ್ಪಾಣಿ ಕ್ಷೇತ್ರಕ್ಕೆ 30 ಸಹಕಾರಿ ಸಂಘಗಳ ಸ್ಥಾಪನೆಗೆ ಸಹಕಾರ ನೀಡಿದ್ದನ್ನು ಸ್ಮರಿಸಿದರು. ಸೌಜನ್ಯ ಗುಣಗಳುಳ್ಳ ಅಣ್ಣಾಸಾಹೇಬ್ ಜೊಲ್ಲೆಯವರನ್ನು ಬಿಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಆಯ್ಕೆ ಮಾಡಿ ರೈತರ ಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ಅವರು ಕೋರಿದರು.

ವೇದಿಕೆಯಲ್ಲಿ ನಗರಾಧ್ಯಕ್ಷೆ ಸೊನಲ್ ಕೊಠಡಿಯಾ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ, ಅಪ್ಪಾಸಾಹೇಬ್ ಜೊಲ್ಲೆ, ರಾಜೇಂದ್ರ ಅಂಕಲಗಿ, ಪವನ್ ಪಾಟೀಲ, ವಿಕ್ರಮ ಇನಾಂದಾರ, ಸತ್ತೆಪ್ಪ ಡೋಣಿ, ಸಂತೋಷ ಸಾಂಗಾಕಾರ, ಬಾಳಾಸಾಹೇಬ ಜೋರಾಪುರೆ, ಜಯವಂತ ಬಾಟಲೆ, ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರು, ಸಹಕಾರಿ ಮುಖಂಡರು, ನಗರ ಸೇವಕರು, ನಿಪ್ಪಾಣಿ ಕ್ಷೇತ್ರದ ಎಲ್ಲ ಪಿಕೆಪಿಎಸ್ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಅಣ್ಣಾಸಾಹೇಬ್
ಜೊಲ್ಲೆಯವರು ಗೌರವಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group