ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಳೆದ ಮುವತೈದು ವರ್ಷಗಳಿಂದ ಭೋಗೋಳ ಶಾಸ್ತ್ರ ಪ್ರಾಧ್ಯಾಪಕರಾಗಿ ಹಾಗೂ ಪ್ರಾಚಾರ್ಯರಾಗಿ ಸೇವೆಗೈದು ಸೇವಾ ನಿವೃತ್ತಿ ಹೊಂದಿದ ಡಾ.ಸುರೇಶ ಚಿತ್ರಗಾರ ಅವರಿಗೆ ಮೂಡಲಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿ ಸಮೂಹ, ಹಿತೈಷಿಗಳು ಸತ್ಕರಿಸಿ ಬೀಳ್ಕೊಟ್ಟರು.
ಮೂಡಲಗಿ ಶಿಕ್ಷಣ ಸಂಸ್ಥೆಯಿಂದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಆರ್.ಸೋನವಾಲಕರ, ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ಹಳೆ ಮತ್ತು ಹಾಲಿ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಡಾ.ಸುರೇಶ ಚಿತ್ರಗಾರವರನ್ನು ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ, ಅನುಭವಿ ಪ್ರಾಧ್ಯಾಪಕರುಗಳು ವಯೋಸಹಜ ಸೇವಾ ನಿವೃತ್ತಿ ಹೊಂದುತ್ತಿರುವುದು ನಮ್ಮ ಸಂಸ್ಥೆಗೆ ಹಾನಿಯಾಗುತ್ತದೆ ಅದಕ್ಕಾಗಿ ಅವರಿಗೆ ಆಯುಷ್ಯ ಹಾಗೂ ಅರೋಗ್ಯ ಇರುವವರಿಗೆ ನಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಕೋರುತ್ತಾ ಅವರ ನಿಷ್ಠೆಯುಳ್ಳ ಕಾರ್ಯಗಳನ್ನು ಸ್ಮರಿಸಿದರು. ಚಿತ್ರಗಾರ ಅವರಿಗೆ ಆಯುಷ್ಯ, ಅರೋಗ್ಯ ದೇವರು ಇನ್ನಷ್ಟು ದಯಪಾಲಿಸಲಿ ಎಂದು ಹಾರೈಸಿದರು.
ಕಾಲೇಜಿನ ಪ್ರೊ.ವಿನೋದ ಭೈರನಟ್ಟಿ ಮಾತನಾಡಿ, ಡಾ.ಸುರೇಶ ಚಿತ್ರಗಾರ ಅವರು ಪದವಿ ಕಾಲೇಜು ಮಟ್ಟದಲ್ಲಿ ಯುಜಿಸಿ ನಿಯಮದ ಪ್ರಕಾರ ಪ್ರೊಪೆಸರ್ ಹುದ್ದೆಗೆ ಬಡ್ತಿ ಪಡೆದ ವಿರಳಾತಿ ವಿರಳರಲ್ಲಿ ಒಬ್ಬರು. ಚಿತ್ರಗಾರ ಅವರು ತಮ್ಮ ಸೇವಾ ಅವಧಿಯಲ್ಲಿ ಎನ್.ಎಸ್.ಎಸ್, ಆಯ್.ಕ್ಯೂ.ಎಸ್.ಸಿ, ನ್ಯಾಕ್ ಸಂಯೋಜಕರಾಗಿ, ಪ್ರಾಚಾರ್ಯರಾಗಿ ವಿವಿಧ ಮಜಲುಗಳಲ್ಲಿ ಉತ್ತಮ ಕಾರ್ಯಗೈದಿದ್ದಾರೆ ಎಂದರು.
ಸತ್ಕಾರ ಸ್ವೀಕರಿಸಿದ ಡಾ.ಸುರೇಶ ಚಿತ್ರಗಾರ ಮಾತನಾಡಿ, ನನ್ನ ೩೫ ವರ್ಷಗಳ ಸೇವಾ ಅವಧಿಯಲ್ಲಿ ಏಳು ಜನ ಸಂಸ್ಥೆಯ ಚೇರಮನ್ನರು ಏಳು ಜನ ಪ್ರಾಚಾರ್ಯರ ಕೈಯಲ್ಲಿ ಕೆಲಸ ಮಾಡುವ ಅವಕಾಶ ಆಗುವದರೊಂದಿಗೆ ಸರಕಾರ ವಿಶ್ವವಿದ್ಯಾಲಯದ ಯುಜಿಸಿ ಆಡಳಿತ ಮಂಡಳಿ ಸಿಬ್ಬಂದಿ, ವಿದ್ಯಾರ್ಥಿಗಳು ಹಾಘೂ ಪಾಲಕರುಗಳೊಂದಿಗೆ ಸಂಪರ್ಕ ಸಾಧಿಸಿ ಕೆಲಸ ಮಾಡುವ ಅನುಭವ ಸ್ಮರಣೀಯವಾದದ್ದು ಎಂದು ಬಣ್ಣಿಸಿದರು.
ಮಹಾಂತೇಶ ಕುಂದರಗಿ, ಶಂಕರ ಡೋಣಿ, ಕುಮಾರಿ ಪಾಟೀಲ ಮಾತನಾಡಿದರು. ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಆರ್.ಪಿ.ಸೋನವಾಲಕರ, ನಿರ್ದೇಶಕರಾದ ಎಸ್.ಆರ್.ಸೋನವಾಲಕರ, ವಿಜಯಕುಮಾರ ಸೋನವಾಲಕರ, ಬಿ.ಎಚ್.ಸೋನವಾಲಕರ, ಅಪ್ಪಾಸಾಹೇಬ ಹೊಸಕೋಟಿ, ಅನಿಲ ಸತರಡ್ಡಿ, ಸಂದೀಪ ಸೋನವಾಲಕರ, ಡಾ.ಶಿವಾ ಹೊಸೂರ ಮತ್ತು ಡಾ.ವ್ಹಿ.ಆರ್.ದೇವರಡ್ಡಿ, ಡಾ.ಎಮ್.ಕೆ.ಕಂಕಣವಾಡಿ, ಜಿ.ವ್ಹಿ.ನಾಗರಾಜ, ಸುರೇಶ ಲಂಕೆಪ್ಪನವರ, ಡಾ.ಬಿ.ಸಿ.ಪಾಟೀಲ, ಬಿ.ಪಿ.ಬಂದಿ, ಎಸ್.ಸಿ.ಮಂಟೂರ, ಶ್ರೀಶೈಲ ತುಪ್ಪದ, ಶಂಕರ ಡೋಣಿ, ಮಹಾಲಿಂಗಯ್ಯಾ ಪೂಜೇರಿ, ವಿಠ್ಠಲ ಲಂಗೋಟಿ ಮತ್ತಿತರರು ಉಪಸ್ಥಿತರಿದ್ದರು.