ಸಚಿವರ ಆತಿಥ್ಯದ ಹೆಸರಿನಲ್ಲಿ ವಸೂಲಿಗಿಳಿಯಿತೆ ಜಿಲ್ಲಾಡಳಿತ?
ಮೂಡಲಗಿ: ಸನ್ ೨೦೨೨ ಹಾಗೂ ೨೦೨೩ ರಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನಕ್ಕೆ ಆಗಮಿಸುವ ರಾಜ್ಯ ಸರ್ಕಾರದ ಸಚಿವರು ಅಧಿಕಾರಿಗಳ ಆತಿಥ್ಯಕ್ಕಾಗಿ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕಾ ಮಟ್ಟದ ಅಧಿಕಾರಿಗಳಿಂದ ಹಾಗೂ ಅಬಕಾರಿ ಮಾರಾಟಗಾರರಿಂದ ಹಣ ವಸೂಲಿ ಮಾಡಲಾಗಿದೆ ಎಂಬ ವಿಷಯವನ್ನು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಬಹಿರಂಗಪಡಿಸಿದ್ದಾರೆ.
ಈ ವಿಷಯವನ್ನು ಪ್ರಸ್ತಾಪಿಸಿ ಗಡಾದ ಅವರು ದಿ. ೨೭.೧೨.೨೦೨೨ ರಂದು ಅಂದಿನ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮತ್ತು ದಿ. ೪.೧.೨೦೨೪ ರಂದು ಸಭಾಪತಿ ಹೊರಟ್ಟಿ ಹಾಗೂ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ ಅವರುಗಳಿಗೆ ಎರಡು ಪತ್ರಗಳನ್ನು ಬರೆದು ಬೆಳಗಾವಿ ಜಿಲ್ಲಾ ಅಧಿಕಾರಿಗಳು ಸಚಿವರ, ಅಧಿಕಾರಿಗಳ ಆತಿಥ್ಯಕ್ಕಾಗಿ ತಾಲುಕಾ ಮಟ್ಟದ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದಾರೆ ಕೊಡದೇ ಇದ್ದರೆ ನೌಕರಿ ಕಳೆದುಕೊಳ್ಳಬೇಕಾಗುವ ಭಯ ಹುಟ್ಟಿಸಿ ಹಣ ವಸೂಲಿ ಮಾಡಿದ್ದಾರೆ ಈ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಧಿವೇಶನಗಳು ನಡೆದಾಗ ಸಚಿವರು, ಸರ್ಕಾರಿ ಅಧಿಕಾರಿಗಳಿಗೆ ಉಳಿದುಕೊಳ್ಳಲು ವಸತಿ, ಊಟ, ಉಪಾಹಾರ ಹಾಗೂ ಸುವರ್ಣ ಸೌಧಕ್ಕೆ ಹೋಗಿ ಬರಲು ವಾಹನ ವ್ಯವಸ್ಥೆಯನ್ನು ಸರ್ಕಾರ ಒದಗಿಸಿರುತ್ತದೆ ಆದರೂ ಜಿಲ್ಲಾ ಅಧಿಕಾರಿಗಳು ಕೆಳ ಮಟ್ಟದ ಅಧಿಕಾರಿಗಳಿಂದ ರೂ. ೫-೧೦ ಸಾವಿರ, ಪುರಸಭೆ, ನಗರಸಭೆಗಳಿಂದ ೨೫-೫೦ ಸಾವಿರ ಅಲ್ಲದೆ ಮಹಾನಗರ ಪಾಲಿಕೆಗಳಿಂದ ಒಂದು ಲಕ್ಷದ ವರೆಗೂ ವಸೂಲು ಮಾಡಿದ್ದಾರೆ ಹಣ ಕೊಡದಿದ್ದರೆ ನೌಕರಿ ಕಳೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ವಿಚಿತ್ರವೆಂದರೆ, ಪ್ರತಿಯೊಂದು ವೈನ್ ಶಾಪ್, ಬಾರ್, ರೆಸ್ಟೋರೆಂಟ್ ಗಳಿಂದ ಒಂದು ಬಾಟಲ್ ಮದ್ಯದ ಹಿಂದೆ ರೂ. ೩೦ ರಂತೆ ವಸೂಲು ಮಾಡಿದ್ದು ಬಾರ್ ಗಳ ಮಾಲೀಕರು ಕಮಕ್ ಕಿಮಕ್ ಎನ್ನದೆ ಹಣ ನೀಡಿದ್ದಾರಲ್ಲದೆ ತಮ್ಮ ನೋವನ್ನೂ ತೋಡಿಕೊಂಡಿದ್ದಾರೆ ಎಂಬುದಾಗಿ ಗಡಾದ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಅಧಿಕಾರಿಗಳ ಈ ಶೋಷಣೆಯ ಬಗ್ಗೆ ಬೆಳಗಾವಿಯ ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಗಡಾದ ಅವರಿಗೆ ಪತ್ರ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದು ಪಶು ಇಲಾಖೆಯ ಅಧಿಕಾರಿಗಳಿಂದಲೂ ರೂ. ೫೦೦೦, ರೂ.೩೦೦೦, ರೂ. ೨೫೦೦ ರಂತೆ ವಸೂಲು ಮಾಡಿದ್ದು ಅದೇ ಖರ್ಚಿನಲ್ಲಿ ಪ್ರತಿದಿನ ಕುಡಿತ, ಊಟ ಅಲ್ಲದೆ ಗೋವಾ ಟ್ರಿಪ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಹೋರಾಟ ಮಾಡಿ ತಮ್ಮ ಹಣವನ್ನು ಮರಳಿ ಕೊಡಿಸಬೇಕು ಎಂಬುದಾಗಿಯೂ ಪಶು ಇಲಾಖೆಯ ಅಧಿಕಾರಿಗಳು ತಮಗೆ ದಿ. ೧೫.೧೨.೨೦೨೩ ರಂದು ಪತ್ರ ಬರೆದಿರುವುದಾಗಿ ಭೀಮಪ್ಪ ಗಡಾದ ಬಹಿರಂಗಪಡಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳಿಂದಾಗಿ ಬೆಳಗಾವಿಯ ಅಧಿವೇಶನದ ಪ್ರತಿಷ್ಠೆ ಹಾಳಾಗಿದ್ದು ಇದಕ್ಕೆ ಕಾರಣರಾದ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ವಿಧಾನ ಸಭೆಯ ಸಚಿವಾಲಯವು ಜಿಲ್ಲಾಧಿಕಾರಿಗಳಿಗೆ ಕಾರ್ಯದರ್ಶಿಗಳ ಮೂಲಕ ಪತ್ರ ಬರೆದು ಕ್ರಮ ಕೈಗೊಳ್ಳಲು ಸೂಚಿಸಿದ್ದು ಬೆಳಗಾವಿ ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುವರು ಎಂಬುದನ್ನು ಕಾದು ನೋಡಬೇಕು.