371 ಜೆ ವ್ಯಾಪ್ತಿಯ ವಿಮಾನ ನಿಲ್ದಾಣಕ್ಕೆ ಗ್ರಹಣ: ಜನಪ್ರತಿನಿಧಿಗಳ ಮೌನಕ್ಕೆ ಆಕ್ಷೇಪ
ಇತ್ತೀಚೆಗಷ್ಟೇ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ ಹೊಂದಲಾಗಿತ್ತು ಆದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5000 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಕೂಡ ಎಲ್ಲೊ ಒಂದು ಕಡೆ ಅಭಿವೃದ್ಧಿ ಮಾತ್ರ ಕುಂಠಿತಗೊಳ್ಳುತ್ತಿರುವುದು ಬೇಸರದ ಸಂಗತಿ.
ಅದರಲ್ಲಿಯೂ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ಮಾಡಿದರೂ ಕೂಡ ಯಾವುದೇ ರೀತಿ ಅಭಿವೃದ್ಧಿ ಕಾಣದೆ ಇರುವುದು ದುಃಖಕರ ಸಂಗತಿ. ಇದೀಗ ಅಕ್ಟೋಬರ್ 15 ರಿಂದ ವಿಮಾನ ಸಂಚಾರ ಪೂರ್ಣ ಸ್ಥಗಿತಗೊಳಿಸಿದ್ದು ತುಂಬಾ ದುಃಖದ ವಿಷಯ. ಪ್ರಯಾಣಿಕರು ಸರಕಾರದ ಈ ನಡೆಯಿಂದ ನಿರಾಶದಾಯಕರಾಗಿದ್ದಾರೆ. ಇದು ಕೇವಲ ಪ್ರಯಾಣಕ್ಕೆ ಅಷ್ಟೇ ಸೀಮಿತವಾಗಿರುವುದಿಲ್ಲ, ವಿಮಾನ ನಿಲ್ದಾಣದ ಅನುಕೂಲತೆ ಇದ್ದರೆ ಕೈಗಾರಿಕೆದಾರರು ಕೂಡ ಕಲ್ಯಾಣ ಕರ್ನಾಟಕದ ಕಡೆ ಆಕರ್ಷಿಸಬಹುದು.
ಉದ್ಯೋಗಿಕರಣಗಳಲ್ಲಿ ಕೂಡ ಪ್ರಗತಿಯನ್ನು ಕಾಣಬಹುದು.
ವಿಮಾನ ನಿಲ್ದಾಣವು ಅಭಿವೃದ್ಧಿ ಸಂಕೇತ
371ಜೆ ಅಡಿ ಬರುವ ನಿಲ್ದಾಣ ವಾಗಿರುದರಿಂದ ಹೆಚ್ಚಿನ ಮಹತ್ವ ಪಡೆದಿದೆ.ಸ್ಟಾರ್ ವಿಮಾನ ಸಂಸ್ಥೆ ಬದಲಾಗಿ ಇಂಡಿಗೋ ಮತ್ತಿತರ ಖಾಸಗಿ ಸಂಸ್ಥೆಗಳ ಸಭೆ ನಡೆಸಬೇಕು. ಕೇಂದ್ರ ವಿಮಾನ ಯಾನ ಸಚಿವರ ಜೊತೆ ಕೂಡಾ ಚರ್ಚಿಸಿ ಉಡಾನ್ ಯೋಜನೆ ಪುನಃ ಜಾರಿ ಮಾಡಲು ಪ್ರಯತ್ನಿಸಬೇಕಾಗಿದೆ . ನಮ್ಮ ರಾಜಧಾನಿ ಬೆಂಗಳೂರಿಗೆ ಹೋಗಲು ತುರ್ತು ವಿಮಾನದ ಅಗತ್ಯತೆ ಕಲ್ಪಿಸಿ ಹಾಗೂ ಮುಂಬೈ ಮಂಗಳೂರು ದೆಹಲಿ ಕೂಡ ವಿಮಾನದ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದರೆ ಅಭಿವೃದ್ಧಿಗೆ ಬೇಗ ದೊರಕುತ್ತದೆ. ಕಳೆದ ತಿಂಗಳು ನವಿ ಮುಂಬಯಿ ಹೊಸ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿದ್ದು ಅಲ್ಲಿಗೂ ಕಲಬುರಗಿಯಿಂದ ವಿಮಾನ ಸಂಚಾರ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುವುದರೊಂದಿಗೆ ಪ್ರಯಾಣಿಕರ ಸಂಖ್ಯೆಯು ಹೆಚ್ಚುತ್ತದೆ.
ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರ ಸ್ಥಳ ಕಲಬುರಗಿ ವಿಮಾನ ನಿಲ್ದಾಣದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಪುನರಾರಂಭಕ್ಕೆ ಮುಂದಾಗಬೇಕು ಹಾಗೂ ಉಡಾನ್ ಯೋಜನೆ ಮರು ಆರಂಭಿಸಿ ಕಲಬುರಗಿ ವಿಮಾನ ನಿಲ್ದಾಣವನ್ನು ಉಳಿಸಬೇಕು ಎಂದು ಸಾರ್ವಜನಿಕರ ಒತ್ತಾಯಎಂದು ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಮನವಿಯಾಗಿದೆ.
ವಿಮಾನ ಪ್ರಯಾಣ ಎಂದು ಟಿಕೆಟ್ ಬುಕ್ ಮಾಡಿ ಟಿಕೆಟ್ ಬುಕ್ ಮಾಡಲು ಹೋದಾಗ ವಿಷಯ ತಿಳಿದು ಬೇಸರವಾಗಿದೆ.ಬೆಂಗಳೂರಿನಿಂದ ಕಲಬುರಗಿಗೆ ನಿತ್ಯ ಸಂಚರಿಸುತ್ತಿದ್ದ ಸ್ಟಾರ್ ಏರ್ ಲೈನ್ಸ್ ವಿಮಾನ ಸಂಸ್ಥೆಯು ಇದೀಗ ಹೊಸದಾಗಿ ಬೆಂಗಳೂರಿನಿಂದ ಅದೇ ವಿಮಾನವನ್ನು ಅದೇ ವೇಳೆಗೆ ಸೋಲಾಪುರಕ್ಕೆ ಸಂಚಾರ ಪ್ರಾರಂಭಿಸಿರುವುದರಿಂದ ಕಲಬುರಗಿ ವಿಮಾನ ನಿಲ್ದಾಣ ಈಗ ಬಿಕೋ ಎನ್ನುತ್ತಿದೆ. 2019 ರಿಂದ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ತಿರುಪತಿಗೆ ಸಂಚಾರ ಪ್ರಾರಂಭಿಸಿತ್ತು. 2022 ರ ವರೆಗೆ ದೆಹಲಿಯ ಹಿಂಡೋನ್ ಗೆ ವಿಮಾನಸೇವೆ ಲಭ್ಯವಿತ್ತು. ಮೂರು ವರ್ಷಗಳ ಕಾಲ ಉಡಾನ್ ಯೋಜನೆ ಅಡಿ ಸಬ್ಸಿಡಿಯಿಂದ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದ ವಿಮಾನ ಸಂಸ್ಥೆ ಈಗ ಉಡಾನ್ ಯೋಜನೆ ಸ್ಥಗಿತಗೊಂಡಿರುವ ಹೆಸರಿನಲ್ಲಿ ಹಾಗೂ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿದೆ ಎಂಬ ಸುಳ್ಳು ನೆಪ ಹೇಳಿ ಸ್ಟಾರ್ ಏರ್ ಲೈನ್ಸ್ ಸಂಪೂರ್ಣ ಸಂಚಾರ ಸ್ಥಗಿತಗೊಳಿಸಿ ಕಲಬುರಗಿ ಬದಲಿಗೆ ಸೊಲ್ಲಾಪುರ, ಬೀದರ್ ಶಿವಮೊಗ್ಗ ಮತ್ತು ನಾಂದೇಡ್ ಮುಂತಾದಡೆಗಳಿಗೆ ಸಂಚಾರ ಪ್ರಾರಂಭಿಸಿ ಜನರು ವಿಚಲಿತರಾಗುವಂತೆ ಮಾಡಿದೆ.
ಸಮರ್ಪಕ ನಿರ್ವಹಣೆ ಮಾಡದೇ ಇರುವುದು
ಸ್ಟಾರ್ ಏರ್ ಲೈನ್ಸ್ ಪ್ರಯಾಣಿಕರಿಗೆ ಸಮಯದ ಅನಾನುಕೂಲತೆ ಸೃಷ್ಟಿ ಮಾಡಿ ನಿಗದಿತ ಸಮಯಕ್ಕೆ ವಿಮಾನ ಹಾರಾಟವನ್ನು ಮಾಡದೆ ಕೊನೆಯ ಕ್ಷಣಕ್ಕೆ ರದ್ದು ಮಾಡಿ ಪ್ರಯಾಣಿಕರನ್ನು ಸಂಕಷ್ಟಕೀಡು ಮಾಡುತ್ತಿರುವುದರಿಂದ ಪ್ರಯಾಣಿಕರು ಟಿಕೆಟ್ ಬುಕ್ ಮಾಡಲು ಹಿಂಜರಿಯುವಂತಾಯಿತು.
ಜೊತೆಗೆ ಹೊಸ ನಿಲ್ದಾಣಗಳನ್ನು ಆಯ್ಕೆ ಮಾಡಿ ಕಲಬುರಗಿ ವಿಮಾನ ನಿಲ್ದಾಣದ ಟ್ರಿಪ್ ಗಳನ್ನು ರದ್ದು ಮಾಡುವ ಮೂಲಕ ಪ್ರಯಾಣಿಕರಿಗೆ ಪಂಗನಾಮ ಹಾಕಿ ಇದೀಗ ನೂತನವಾಗಿ ಆರಂಭಗೊಂಡ ಶಿವಮೊಗ್ಗ , ಸೊಲ್ಲಾಪುರಕ್ಕೆ ಹೊಸದಾಗಿ ಸೇವೆ ಆರಂಭಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಮೋಸ ಮಾಡುತ್ತಿದೆ.
ಸೇವೆ ಸ್ಥಗಿತವನ್ನು ಪ್ರಶ್ನಿಸಿದರೆ ಪ್ರಯಾಣಿಕರ ಕೊರತೆ ಹಾಗೂ ಉಡಾನ್ ಸ್ಕೀಮ್ ರದ್ದತಿ ಎಂದು ಕೇಂದ್ರದತ್ತ ಬೆರಳು ಮಾಡುತ್ತಿದ್ದು ಈಗ ವಿಮಾನ ನಿಲ್ದಾಣ ಕೇವಲ ತರಬೇತಿ ನೀಡುವ ವಿಮಾನ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ, ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಯಾಣಿಕರ ಕೊರತೆ ಇಲ್ಲ ಅದಾಗಿಯೂ ವಿಮಾನ ಹಾರಾಟ ರದ್ದು ಮಾಡಿದೆ.
ಕಲಬುರಗಿಯಿಂದ ಬೆಂಗಳೂರು ಒನ್ ಸ್ಟಾಪ್ ಮಾರ್ಗವಾಗಿ ಮಂಗಳೂರು, ಹೊಸದಾಗಿ ನಿರ್ಮಾಣಗೊಂಡ
ನವಿಮುಂಬಯಿ, ಪೂನಾ, ತಿರುಪತಿ, ದೆಹಲಿ ( ಹಿಂಡೋನ್) ಮುಂತಾದಡೆಗಳಿಗೆ ಸಂಚಾರ ಪ್ರಾರಂಭಿಸಲು ಉತ್ತಮ ಅವಕಾಶವಿದೆ. ಈಗಾಗಲೇ ಆಂಧ್ರ,ತೆಲಂಗಾಣದ ಸಣ್ಣಪುಟ್ಟ ನಗರಗಳ ವಿಮಾನ ನಿಲ್ದಾಣದಿಂದ ಮುಂಬಯಿ ಮತ್ತಿತರೆಡೆಗಳಿಗೆ ರಾಜಕೀಯ ಪ್ರತಿನಿಧಿಗಳ ಮುತುವರ್ಜಿಯಿಂದ ಸಂಚಾರ ಆರಂಭಗೊಳ್ಳುತ್ತಿದ್ದರೂ ಕಲ್ಯಾಣ ಕರ್ನಾಟಕ ಭಾಗದ ಈ ವಿಮಾನ ನಿಲ್ದಾಣ ಮಾತ್ರ ತೀವ್ರ ಕಡೆಗಣನೆಗೆ ಒಳಗಾಗಿದೆ. ಸದ್ಯಕ್ಕೆ ನವಿಮುಂಬಯಿ ವಿಮಾನ ನಿಲ್ದಾಣದಲ್ಲಿ ಹೆಚ್ಚು ವಿಮಾನಗಳಿಗೆ ಅವಕಾಶ ನೀಡುತ್ತಿರುವುದರಿಂದ ನಮ್ಮ ಕಲಬುರಗಿಗೆ ಈ ಅವಕಾಶವು ಕೈ ತಪ್ಪಿದಂತಾಗಿದೆ.
ಕಲ್ಯಾಣ ಕರ್ನಾಟಕದ ರಾಜಕಾರಣಿಗಳ ಇಚ್ಛಾ ಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ಮಾದರಿಯ ಕಲಬುರಗಿ ವಿಮಾನ ನಿಲ್ದಾಣವು ಈಗ ಕೇಳುವವರಿಲ್ಲ ಎನ್ನುವಂತಾಗಿದೆ. ಸ್ಟಾರ್ ಏರ್ ಕಂಪನಿ ಈ ಭಾಗದ ಪ್ರಯಾಣಿಕರ ಜೊತೆ ಬೇಕಾಬಿಟ್ಟಿ ವರ್ತನೆ ಮಾಡಿದರೂ ಯಾವೊಬ್ಬ ಜನಪ್ರತಿನಿಧಿಯು ಪ್ರಶ್ನಿಸದಿರುವುದು ಪ್ರಯಾಣಿಕರಲ್ಲಿ ಮುಜುಗರ ಉಂಟುಮಾಡಿದೆ.
ಇತ್ತೀಚೆಗಷ್ಟೇ ಪ್ರಾರಂಭಗೊಂಡ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ,ಸ್ಟಾರ್ ವಿಮಾನ ಸಂಸ್ಥೆಗಳು ಹೈದರಾಬಾದ್, ಚೆನ್ನೈ ಮುಂಬೈ ಗೋವಾ ತಿರುಪತಿ ಬೆಂಗಳೂರು ಮುಂತಾದಯ ಕಡೆಗಳಿಗೆ ಸಂಪರ್ಕ ಕಲ್ಪಿಸುತ್ತಿದೆ.ಆದರೆ ಆರು ವರ್ಷಗಳ ಹಿಂದೆ ಪ್ರಾರಂಭಗೊಂಡ ಕಲಬುರಗಿ ವಿಮಾನ ನಿಲ್ದಾಣ ಮಾತ್ರ ಸಂಪೂರ್ಣವಾಗಿ ಬಾಗಿಲು ಮುಚ್ಚಿಕೊಂಡಿದೆ.ಕಲಬರಗಿ ವಿಮಾನ ನಿಲ್ದಾಣದಿಂದ ಸೊಲ್ಲಾಪುರ, ನಾಂದೇಡ್ , ವಿಜಯಪುರ, ರಾಯಚೂರು, ಬೀದರ್ ಮುಂತಾದಡೆಗಳ ಪ್ರಯಾಣಿಕರು ಸಂಚರಿಸುತ್ತಿದ್ದು , ಪ್ರಯಾಣಿಕರಿಗೆ ಅನುಕೂಲವಾಗುವಂತಹ ಸೂಕ್ತ ಸಮಯದ ನಿರ್ವಹಣೆ ಇಲ್ಲದೆ ಇರುವುದು ಈಗ ಎಲ್ಲವೂ ಸ್ತಬ್ದಗೊಂಡಿದೆ.
ಬೆಂಗಳೂರಿಂದ ಬೆಳಗ್ಗೆ 8 ಗಂಟೆಗೆ ಹೊರಟು ಕಲಬುರಗಿ ಹಾಗೂ ರಾತ್ರಿ 8 ಗಂಟೆಗೆ ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಸಂಚಾರ ಆರಂಭಗೊಂಡರೆ ಪ್ರಯಾಣಿಕರ ಸಂಖ್ಯೆ ಹೆಚ್ಚಳಗೊಳ್ಳುವುದರ ಜೊತೆಗೆ ಅನುಕೂಲವಾಗುತ್ತದೆ .
ಸರಕಾರದ ಎಲ್ಲಾ ಯೋಜನೆಗಳನ್ನು ಸಕಾಲಕ್ಕೆ ತಕ್ಕಂತೆ ಜಾರಿಗೊಳಿಸಿ ಕಾರ್ಯರೂಪಕ್ಕೆ ತಂದಾಗ ಮಾತ್ರ
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆಗುತ್ತದೆ. ಇಲ್ಲಿ ಜನಸಾಮಾನ್ಯರಿಂದ ಎಲ್ಲಾ ಪ್ರತಿನಿಧಿಗಳ ಭಾಗವಹಿಸುವಿಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಮಾಜಿ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಶಂಕು ಸ್ಥಾಪನೆ ಮಾಡಿದ ಬಹು ನಿರೀಕ್ಷಿತ ವಿಮಾನ ನಿಲ್ದಾಣವು ಕುಂಟುತ್ತಾ ಸಾಗಿ ಕೊನೆಗೂ 2019 ರಿಂದ ಸಂಚಾರ ಸೇವೆ ಪ್ರಾರಂಭಿಸಿತು.
371 ಜೆ ಇದ್ದರೂ ಕಲ್ಯಾಣ ಕರ್ನಾಟಕಕ್ಕೆ ಆಘಾತ ಕೊಟ್ಟ ವಿಮಾನ ಸಂಸ್ಥೆಯ ಕಾರ್ಯ ಪುನ ಆರಂಭವಾಗಲು ರಾಜ್ಯ ಸರ್ಕಾರಿ ಮಹಿಳಾ ನೌಕರ ಸಂಘ ಧ್ವನಿ ಎತ್ತುತ್ತಿದೆ, ನಮ್ಮೊಂದಿಗೆ ಎಲ್ಲಾ ಸಂಘ-ಸಂಸ್ಥೆಯವರು ಹಾಗೂ ಸಮಸ್ತ ಕಲ್ಯಾಣ ಕರ್ನಾಟಕದ ನಾಗರಿಕರು ಹಾಗೂ ನಮ್ಮ ಶಾಸಕರೆಲ್ಲರೂ ಧ್ವನಿ ಎತ್ತಿ ವಿಮಾನ ನಿಲ್ದಾಣದ ಉನ್ನತಿಕರಣ ಹಾಗೂ ವಿಮಾನ ಪ್ರಯಾಣ ಪುನ ಆರಂಭಿಸಲು ಕೈಜೋಡಿಸಬೇಕು
ನಂದಿನಿ ಸನಬಾಳ ಪಾಳಾ ಕಲಬುರಗಿ