ಮೈಸೂರು – ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿಂದು (ಡಿ.29) ಸಮಷ್ಟಿ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ವಿ.ವಿ.ಪುರಂ ಪೊಲೀಸ್ ಠಾಣೆಯ ಉಪ ಆರಕ್ಷಕ ಸಂಚಾರ ನಿರೀಕ್ಷಕರಾದ ಶ್ರೀಧರ್ ಎಲ್.ಸಿ.ಯವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಮಾತನಾಡುತ್ತಾ, ಆತ್ಮವಿಶ್ವಾಸದಿಂದ ಕ್ರೀಡೆಗಳಲ್ಲಿ ಭಾಗವಹಿಸಿದರೆ ಯಶಸ್ಸು ಖಂಡಿತ ಸಾಧ್ಯ. ಬರೀ ಓದುವುದಕ್ಕಷ್ಟೇ ಸೀಮಿತಗೊಳಿಸದೇ ಪಠ್ಯೇತರ ಚಟುವಟಿಕೆಗಳಲ್ಲಿ ಒಂದಾದ ಕ್ರೀಡೆ ಹಾಗೂ ಯೋಗಾಸನದಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಪ್ರತಿ ನಿತ್ಯವೂ ಒಂದು ಗಂಟೆಯಾದರೂ ಕ್ರೀಡೆಯಲ್ಲಿ ಭಾಗವಹಿಸಿದರೆ ಅತ್ಯುತ್ತಮ ಆರೋಗ್ಯವನ್ನು ಕಾಪಾಡಿಕೊಂಡು, ಶಿಸ್ತುಬದ್ಧ ಜೀವನವನ್ನು ರೂಪಿಸಿಕೊಳ್ಳಬಹುದು ಎಂದರು.
ಇಂದಿನ ವಿದ್ಯಾರ್ಥಿಗಳು ನಿಯತಕಾಲಿಕೆ ಪತ್ರಿಕೆಗಳನ್ನು ಕಡ್ಡಾಯವಾಗಿ ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡು, ಪ್ರಸ್ತುತ ದೇಶದ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಮುಂದಾಗಬೇಕು. ಅದನ್ನು ಬಿಟ್ಟು, ಮೊಬೈಲ್, ವಾಟ್ಸ್ ಅಪ್, ಫೇಸ್‍ಬುಕ್‍ನಲ್ಲಿ ಬೇಡದ ವಿಚಾರದಲ್ಲಿ ನಿರತರಾಗಿ ಮನಸ್ಸಿನ ಬೌದ್ಧಿಕ ಶಕ್ತಿಯನ್ನು ಸೀಮಿತಗೊಳಿಸುತ್ತಿರುವುದು ಬೇಸರದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ್ ಅವರು ಮಾತನಾಡಿ, ಬದುಕುವುದಕ್ಕೆ ವಿದ್ಯೆ ಎಷ್ಟು ಮುಖ್ಯವೋ, ಬಾಳುವುದಕ್ಕೆ ಆರೋಗ್ಯವೂ ಅಷ್ಟೇ ಮುಖ್ಯ ಎಂದು ತಿಳಿಸಿದರು. ಆಟ, ಪಾಠಗಳಲ್ಲಿ ಸಮಾನವಾಗಿ ಭಾಗವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಕಾಲೇಜಿನ ಪ್ರಾಂಶುಪಾಲರಾದ ಸಿ.ಕೆ.ಅಶೋಕಕುಮಾರ್ ಅವರು ಮಾತನಾಡಿ, ಆರೋಗ್ಯವೇ ನಿಜವಾದ ಸಂಪತ್ತು. ಆದ್ದರಿಂದ ಶರೀರದ ಅಂಗಾಂಗಗಳಿಗೆ ಶ್ರಮ ನೀಡಬೇಕು, ದೇಹದಲ್ಲಿ ಬೆವರಿಳಿಸಬೇಕು. ಹಾಗಾದಾಗ ಮಾತ್ರ ಆರೋಗ್ಯ ಸದೃಢವಾಗಿರುತ್ತದೆ. ಗೆಲುವು, ಸೋಲು ಮುಖ್ಯವಲ್ಲ. ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವದೇ ನಿಜವಾದ ಗೆಲುವು ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಎಸ್.ನಾಗರಾಜ್, ಸಂಸ್ಥೆಯ ಆಡಳಿತಾಧಿಕಾರಿ ಶ್ರೀಕಾಂತ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಿ.ಶಿವಶಂಕರ್, ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಹೆಚ್.ಆರ್.ಪರಮೇಶ್, ಎ.ಶಿಲ್ಪ, ಡಾ.ಪೂಜಾ, ಕಾವ್ಯಶ್ರೀ ಆರ್.ರಾವ್, ರಶ್ಮಿ ಎಂ.ಕೆ., ವಿಂಧ್ಯಾ, ಪ್ರವೀಣ್, ಲೋಕೇಶ್, ಡಾ.ಡಿ.ಸಿ.ಉಮೇಶ್ ಹಾಗೂ ಇತರರು ಉಪಸ್ಥಿತರಿದ್ದರು. ಸಮಷ್ಟಿ ವಾರ್ಷಿಕ ಕ್ರೀಡಾಕೂಟದಲ್ಲಿ 100, 200, 400, 800, 1,500 ಮೀಟರ್ ಓಟದ ಸ್ಪರ್ಧೆಯನ್ನು ಬಾಲಕ-ಬಾಲಕಿಯರಿಗಾಗಿ ಏರ್ಪಡಿಸಲಾಗಿತ್ತು. ಇತರ ಕ್ರೀಡೆಗಳಾದ ಭಾರ ಎಸೆಯುವ ಸ್ಪರ್ಧೆ, ಜಾವಲಿನ್, ಗೋಣಿಚೀಲದಲ್ಲಿ ಓಡುವ ಸ್ಪರ್ಧೆ, ಕಬ್ಬಡ್ಡಿ, ತ್ರೋಬಾಲ್ ಹೀಗೆ ಹತ್ತು ಹಲವು ಕ್ರೀಡಾ ಸ್ಪರ್ಧೆಗಳನ್ನು ಕ್ರೀಡಾಪಟುಗಳಿಗಾಗಿ ಆಯೋಜಿಸಲಾಗಿತ್ತು. ಇಡೀ ಕ್ರೀಡಾಸ್ಪರ್ಧೆಗಳಲ್ಲಿ ಅತಿ ಹೆಚ್ಚು ಅಂಕ ಮತ್ತು ಬಹುಮಾನವನ್ನು ಗಳಿಸಿದ ಪಂದ್ಯ ಪುರುಷ ಶ್ರೇಷ್ಠ ಪ್ರಶಸ್ತಿಯನ್ನು ಅಮೂಲ್ಯ ಎಂ.ಎಸ್. ಪಡೆದುಕೊಂಡರು. ನೀರಜ್ ಶರ್ಮ ಪ್ರಾರ್ಥಿಸಿದರೆ, ಕು.ಅಕ್ಷತಾ ಸ್ವಾಗತಿಸಿದರು. ಕು.ಸೌಜನ್ಯ ವಂದಿಸಿದರೆ, ಮಂಜುನಾಥ್ ಸಿ.ಎನ್.ಕಾರ್ಯಕ್ರಮ ನಿರೂಪಿಸಿದರು.