ಜಮಖಂಡಿ: ಬಸವಾದಿ ಶರಣರ ತತ್ವ ಗಳನ್ನು ಬೋಧಿಸುವ ಮೂಲಕ ಶರಣ ಸಂಸ್ಕೃತಿಯನ್ನು ಜನ ಮಾನಸದಲ್ಲಿ ಬಿತ್ತಿ ಈ ನಾಡಿನಲ್ಲಿ ಸಕಾರಾತ್ಮಕ ಪರಿವರ್ತನೆ ತಂದಿದ್ದ ಲಿಂ.ಡಾ.ಈಶ್ವರ ಮಂಟೂರ ಶರಣರು ಮಾನಸಿಕ ತಜ್ಞರಾಗಿದ್ದರು ಎಂದು ಇಳಕಲ್‌ನ ವಿಜಯಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಹುನ್ನೂರ-ಮಧುರಖಂಡಿ ಗ್ರಾಮಗಳ ಬಸವಜ್ಞಾನ ಗುರುಕುಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬಸವಾದಿ ಶರಣರ ವಚನ ಸಾಹಿತ್ಯದ ಸಾನ್ನಿಧ್ಯದಲ್ಲಿ ಮಂಗಳವಾರ ಬಸವಜ್ಞಾನ ಗುರುಕುಲದಲ್ಲಿ ನಡೆದ ಶರಣಸಂಸ್ಕೃತಿ ಉತ್ಸವ, ಜಾನಪದ ಕಲಾಮಹೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಲಿಂ.ಡಾ.ಈಶ್ವರ ಮಂಟೂರ ಶರಣರ ೪ನೇ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜಮಖಂಡಿಯ ಓಲೆಮಠದ ಆನಂದ ದೇವರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಷಟ್‌ಸ್ಥಲ ಧ್ವಜ ಬಸವಣ್ಣ ಮತ್ತು ಅಲ್ಲಮಪ್ರಭು ಹಾರಿಸಿದ ಧ್ವಜವಾಗಿದೆ. ಷಟ್‌ಸ್ಥಲ ಲಿಂಗಾಯತ ಧರ್ಮದ ಲಾಂಛನ ಧ್ವಜವಾಗಿದೆ ಎಂದು ಆಶೀರ್ವಚನ ನೀಡಿದರು.
ಜಮಖಂಡಿಯ ಬಸವಜ್ಯೋತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಬಸವ ಪುತ್ಥಳಿಗೆ ಪುಷ್ಪವೃಷ್ಟಿ ನೆರವೇರಿಸಿ ಮಾತನಾಡಿ, ಬಸವಣ್ಣನವರು ಪಂಚಾಚಾರ, ಷಟ್‌ಸ್ಥಲ, ಅಷ್ಟಾವರಣಗಳ ಪ್ರತೀಕವಾಗಿದ್ದರು. ಅರಿವು, ಆಚಾರ, ಅನುಭಾವಗಳ ಮೊತ್ತವೆ ಬಸವಣ್ಣ ಎಂದು ಬಣ್ಣಿಸಿದರು.
ಹೊಳಲ್ಕೆರೆಯ ಉಪನ್ಯಾಸಕ ಡಾ.ಜಿ.ವಿ. ಮಂಜುನಾಥ ಶರಣ ಸಂಸ್ಕೃತಿ ಕುರಿತು ಅನುಭಾವ ಹಂಚಿಕೊಂಡರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ರಾಜ್ಯ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ದಾವಣಗೆರೆಯ ವಿಭೂತಿ ಬಸವಾನಂದ ಮಾತನಾಡಿದರು.
ಸಂಡೂರಿನ ಸಂಸದ ಈ ತುಕಾರಾಮ (ಬಸವಚೇತನ), ಸವದಿಯ ಪ್ರಗತಿಪರ ರೈತ ನಂದಕುಮಾರ ಪಾಟೀಲ (ಕೃಷಿಚೇತನ), ಹುನ್ನೂರಿನ ರಂಗಭೂಮು ಕಲಾವಿದ ಕೆ.ಆರ್. ಮಹಾಲಿಂಗಪ್ಪ (ಕಲಾಚೇತನ) ಹಾಗೂ ವಿಜಯಪುರದ ವಿಶ್ರಾಂತ ಎಂಜಿನಿಯರ್ ಎಸ್.ವೈ. ಗದಗ (ಈಶಚೇತನ) ಅವರುಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಂಸದ ಈ ತುಕಾರಾಮ ಪರವಾಗಿ ಸಂಡೂರಿನ ಅರಳಿ ಕುಮಾರಸ್ವಾಮಿ ಪ್ರಶಸ್ತಿ ಸ್ವೀಕರಿಸಿದರು.
ಚಿಕ್ಕಲಕಿ ಕ್ರಾಸ್‌ನ ಭಗೀರಥ ಮಠದ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ವಿಶೇಷ ಸಾಧಕರಾದ ಡಾ.ಲಿಂಗಾನಂದ ಗವಿಮಠ (ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತರು), ಶ್ರೀಶೈಲ ಉಳ್ಳಾಗಡ್ಡಿ (ಮಹಾಲಿಂಪುರದ ಬಸವ ಸಮಿತಿ ಸದಸ್ಯ), ಮಗೆಪ್ಪ ಎಸ್. ದರೂರ (ಆಸಂಗಿಯ ಡೆಂಪೊ ಡೇರಿ) ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ರಾಯಚೂರಿನ ಮನೋಹರಲಾಲ ಬೋರಾ, ಜಮಖಂಡಿ ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ, ಹುನ್ನೂರಿನ ಬಸವಂತಪ್ಪ ಹನಗಂಡಿ, ರಾಯಚೂರಿನ ಮಲ್ಲಿಕಾರ್ಜುನ ಗುಡಿಮನಿ ಇದ್ದರು. ಬನಹಟ್ಟಿಯ ಮಲ್ಲಿಕಾರ್ಜುನ ಧಡೂತಿ, ಆಲಬಾಳದ ಪುಂಡಲೀಕ ಕಾಂಬಳೆ ಮಹಾಪ್ರಸಾದದ ದಾಸೋಹ ಸೇವೆ ಸಲ್ಲಿಸಿದರು.
ಬಸವಚೇತನ ಶಾಲಾ ಮಕ್ಕಳು ವಚನ ಪ್ರಾರ್ಥನೆ, ವಚನ ನೃತ್ಯ ಪ್ರದರ್ಶಿಸಿದರು. ಪ್ರಾಧ್ಯಾಪಕ ಡಾ.ಎನ್.ವಿ. ಅಸ್ಕಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶಂಕರ ಲಮಾಣಿ ನಿರೂಪಿಸಿದರು. ಇದಕ್ಕೂ ಮೊದಲು ಷಟ್‌ಸ್ಥಲ ಧ್ವಜಾರೋಹಣ, ವಚನ ಪಲ್ಲಕ್ಕಿ ಉತ್ಸವ ಜರುಗಿದವು.

