ಬೆಂಗಳೂರು : ವಾರಣಾಸಿಯ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಪ್ರತಿವರ್ಷ ಕೊಡಮಾಡುವ ‘ಪಂಚಾಚಾರ್ಯಶ್ರೀ’ ಪ್ರಶಸ್ತಿ ಹಾಗೂ ‘ಶಿವಕಮಲ ಸಾಹಿತ್ಯ’ ಪ್ರಶಸ್ತಿಗಳನ್ನು ಕ್ರಮವಾಗಿ ಜನವರಿ-4 ಮತ್ತು 5 ರಂದು ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರದಾನ ಮಾಡುವರು.
‘ಪಂಚಾಚಾರ್ಯಶ್ರೀ ಪ್ರಶಸ್ತಿ’ಗೆ ಮಹಾರಾಷ್ಟ್ರದ ಬಾರ್ಶಿ ದಹಿವಡಕರಮಠದ ಶ್ರೀ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ.
ಸ್ವಾಮೀಜಿ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಶ್ರೀಶೈಲ ಗುರುಕುಲದಲ್ಲಿ ವೇದಾಧ್ಯಯನ ಮಾಡಿದ್ದಾರೆ. ಉನ್ನತ ಅಧ್ಯಯನಕ್ಕಾಗಿ ಕಾಶೀ ಪೀಠದ ಗುರುಕುಲದಲ್ಲಿ ಪ್ರವೇಶ ಪಡೆದು, ಕಾಶೀ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ವೇದಾಂತಾಚಾರ್ಯ (ಎಂಎ) ಪದವಿಯನ್ನು ೩ ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ. ಈ ಪ್ರಶಸ್ತಿಯು 25 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಬಿ.ಆರ್.ವಿ.ಗೌಡ ಅವರ ಸ್ಮರಣಾರ್ಥ ಕೊಡಮಾಡುವ ಈ ಪ್ರಶಸ್ತಿಯ ಪ್ರಾಯೋಜಕರಾಗಿ ಶಾಂತಾ ವಿ. ಗೌಡ ಸೇವೆಸಲ್ಲಿಸುವರು. ಜ.4ರಂದು ಸಂಜೆ ಪ್ರಶಸ್ತಿ ಪ್ರದಾನ ನಡೆಯಲಿದೆ.
‘ಶಿವಕಮಲ ಸಾಹಿತ್ಯ ಪ್ರಶಸಿ’ಗೆ ಯುವ ಸಾಹಿತಿ ಮತ್ತು ಪತ್ರಕರ್ತ ಪ್ರಶಾಂತ ರಿಪ್ಪನ್ಪೇಟೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಯವರಾದ ಪ್ರಶಾಂತ್, ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿ, ಪ್ರವೃತ್ತಿಯಲ್ಲಿ ಸಾಹಿತ್ಯ, ಉಪನ್ಯಾಸ, ರಂಗಭೂಮಿ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ದೇಶದ ಉದ್ದಗಲಕ್ಕೂ ಸಂಚರಿಸಿ ವಿಶೇಷ ಸ್ಥಳಗಳನ್ನು ತಮ್ಮ ಮುದ್ರಣ ಮತ್ತು ದೃಶ್ಯ ಮಾಧ್ಯಮದ ಮೂಲಕ ಪರಿಚಯಿಸಿದ್ದಾರೆ. ಈ ವರೆಗೆ 6 ಕೃತಿಗಳು ಪ್ರಕಟವಾಗಿವೆ. ಪ್ರಶಸ್ತಿಯು 11 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ನಗರದ ದಾನಚಿಂತಾಮಣಿ ಶಿವಪ್ಪ ಶೆಟ್ಟರು ಮತ್ತು ಕಮಲಮ್ಮ ದಂಪತಿಗಳ ಸ್ಮರಣಾರ್ಥ ಕೊಡಮಾಡುವ ಈ ಪ್ರಶಸ್ತಿಯ ಪ್ರಾಯೋಜಕರಾಗಿ ವಾಗೀಶಪ್ರಸಾದ ಸೇವೆಸಲ್ಲಿಸುವರು. ಜ.೫ರಂದು ಬೆಳಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರತಿಷ್ಠಾನದ ಗೌ.ಕಾರ್ಯದರ್ಶಿ ಡಾ.ಸಿ.ಯು.ಉಮಾದೇವಿ ಉಮಾಶಂಕರ್ ತಿಳಿಸಿದ್ದಾರೆ.
ವರದಿ : ಗುರುಮೂರ್ತಿ ವೀ. ಯರಗಂಬಳಿಮಠ (ಕನ್ನಡ ಪತ್ರಿಕಾರಂಗದ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ), ಶ್ರೀಶಾಂತೇಶ್ವರನಗರ, ಅಮ್ಮಿನಬಾವಿ (ತಾ.ಧಾರವಾಡ) ಮೊ. ೯೯೪೫೮೦೧೪೨೨

