ಸಿಂದಗಿ; ತಾಲೂಕಾ ಜಾತ್ಯತೀತ ಜನತಾದಳದ ಕಾರ್ಯಾಧ್ಯಕ್ಷ ಶಿವಣ್ಣ ಕೊಟಾರಗಸ್ತಿ ಅವರು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಮನಗೂಳಿಯವರ ಹೆಸರಿನ ಮೇಲೆ ಜೆಡಿಎಸ್ ಪಕ್ಷವಿತ್ತು ಎನ್ನುವುದನ್ನು ಕಳೆದ ಉಪಚುನಾವಣೆಯಲ್ಲಿ ಮತದಾರ ಪ್ರಭುಗಳು ಸಾಬೀತುಪಡಿಸಿದ್ದಾರೆ. ಅದಕ್ಕೆ ಇಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಕುಂದಿದೆ ಮನಗೂಳಿಯವರ ಶಕ್ತಿ ಹೆಚ್ಚಾಗಿದ್ದ ಕಾರಣ ಅವರ ಕಟ್ಟಾ ಅಭಿಮಾನಿಯಾದ ನಾನು ಕಾಂಗ್ರೆಸ್ ಪಕ್ಷದ ತತ್ವಸಿದ್ದಾಂತವನ್ನು ಮೆಚ್ಚಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇನೆ ಹೊರತು ಯಾರ ಒತ್ತಾಸೆಯಿಂದಲ್ಲ ಎಂದು ಹೇಳಿ, ದಿ.ಎಂ.ಸಿ.ಮನಗೂಳಿಯವರು ಅವರ ಅವಧಿಯಲ್ಲಿ ತಂದ ಅನುದಾನ ಬಿಡುಗಡೆ ಮಾಡುವಲ್ಲಿ ಬಿಜೆಪಿ ಸರಕಾರ ಮೀನಾಮೇಷ ತೋರುತ್ತಿದೆ. ಅಲ್ಲದೆ ಅವರ ಅವಧಿಯೊಳಗಿನ ಕಾಮಗಾರಿಗಳನ್ನು ತಾರತಮ್ಯವೆಸಗದೇ ತೀವ್ರಗತಿಯಲ್ಲಿ ಮುಗಿಸಬೇಕು ಅಲ್ಲದೆ ಸಿಂದಗಿ ಪಟ್ಟಣದ ಕೆರೆಗೆ ದಿ.ಎಂ.ಸಿ.ಮನಗೂಳಿಯವರ ಹೆಸರಿಡುವಂತೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಠರಾವು ಆಗಿದ್ದು ಅದನ್ನು ತಾತ್ಸಾರ ಮಾಡದೇ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸ್ವತಂತ್ರ ಹೋರಾಟದಲ್ಲಿ ಬಲಿದಾನ ಮಾಡಿದ ಪಕ್ಷವಾಗಿದ್ದು ಇಲ್ಲಿ ಎಲ್ಲರಿಗೂ ಸಮಾನವಾದ ಸ್ಥಾನಮಾನ ಸಿಗುತ್ತದೆ. ಆದಕಾರಣ ನನ್ನ ಜೊತೆಗೂಡಿ ರಾಜಕಾರಣ ಮಾಡಿದ ಎಲ್ಲ ಕಾರ್ಯಕರ್ತರನ್ನು ಒಂದೇ ಗರಡಿಯಲ್ಲಿ ತಂದು ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜ ಮಾರಲಬಾವಿ, ಎಸ್ ಘಟಕದ ಕಾರ್ಯದರ್ಶಿ ಅಶೋಕ ಬಿಜಾಪುರ, ಗ್ರಾಪಂ ಸದಸ್ಯರಾದ ಶಂಕರ ತೆಲಗಾಣ,ಪ್ರಭು ದುದ್ದಣಗಿ, ಮುಖಂಡರಾದ ಹಣಮಂತ್ರಾಯಗೌಡ ಬಿರಾದಾರ ಕರ್ನಾಳ, ಮಹೇಶ ಮನಬಗೂಳಿ, ಮಲ್ಲು ಪಾಟೀಲ ಸೇರಿದಂತೆ ಹಲವರಿದ್ದರು.