ಐತಿಹಾಸಿಕ ಪರಂಪರೆ , ಧಾರ್ಮಿಕ ಕಲೆ, ಸಾಹಿತ್ಯ, ಸಾಂಸ್ಕೃತಿಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ , ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗಿದೆ . ಜಿಲ್ಲೆಯಾದ್ಯಂತ ವರ್ಷವಿಡೀ ಸಮ್ಮೇಳನ , ಶಿವಾನುಭವ ಗೋಷ್ಠಿ , ಜಾತ್ರೆ ,ಉತ್ಸವಗಳು ನಡೆಯುತ್ತಲೇ ಇರುತ್ತವೆ. ರಾಮದುರ್ಗ ತಾಲೂಕಿನ ಕಿಲ್ಲಾತೊರಗಲ್ಲ ಗ್ರಾಮದಲ್ಲಿಯೂ ಕೂಡ 2025 ಫೆಬ್ರುವರಿ 24 ರಿಂದ 26 ರ ವರೆಗೆ ಶ್ರೀದುರ್ಗಾದೇವಿಯ ಜಾತ್ರೆಯು ಸಡಗರ ,ಸಂಭ್ರಮದಿಂದ ಜರುಗಲಿದೆ.
ರಾಮದುರ್ಗ ಹಾಗೂ ಕಟಕೋಳ ದಿಂದ ಕೇವಲ 11 ಕಿ.ಮೀ. ಅಂತರದಲ್ಲಿರುವ ಈ ಗ್ರಾಮ, ಹೆಸರೇ ಸೂಚಿಸುವಂತೆ ‘ ಬೃಹತ್ ಕೋಟೆ, ಕೊತ್ತಲು, ಗುಡಿ ,ಗುಂಡಾರ, ಐತಿಹಾಸಿಕ ದೇವಾಲಯಗಳನ್ನೊಳಗೊಂಡಿದೆ .ಊರ ಸುತ್ತ – ಮುತ್ತಲೂ ಬೃಹತ್ ಕಲ್ಲುಗಳಿಂದ ನಿರ್ಮಿತ ಕೋಟೆ, ಕೊತ್ತಲುಗಳು ( ಏಳು ಸುತ್ತಿನ), ಬೃಹದಾಕಾರದ ಏಳು ಅಗಸೆ ಬಾಗಿಲುಗಳು , ಹತ್ತು ಹಲವಾರು ಗುಡಿ, ಗೋಪುರ, ಶಿಲ್ಪ ಕಲಾಕೃತಿಗಳು ಇಲ್ಲಿ ಕಾಣಲು ಸಿಗುತ್ತವೆ.ಈ ಊರ ಸುತ್ತಲೂ ಹಸಿರಿನಿಂದ ಒಡಗೂಡಿದ ಗುಡ್ಡವಿದೆ.
ಇಂತಹ ರಮಣೀಯ ಪರಿಸರದಲ್ಲಿ ಅಂದರೆ ಕಿಲ್ಲಾತೊರಗಲ್ಲ ಸಂಸ್ಥಾನದ ಶ್ರೀಮಂಥ ಶಿಂಧೆ ಮಹರಾಜರ ಅರಮನೆಯ ಪಕ್ಕದಲ್ಲಿ ಸುಮಾರು 57 ವರ್ಷಗಳ ಹಿಂದೆಯೇ ಆದಿಶಕ್ತಿ , ಜಗನ್ಮಾತೆ ಶ್ರೀದುರ್ಗಾದೇವಿಯು ಚುಂಚನೂರಿನಿಂದ ಬಂದು ನೆಲೆಸಿದ್ದಾಳೆ. ಮುಂದೆ 1973 ರಲ್ಲಿ ಶ್ರೀ ದುರ್ಗಾದೇವಿಯ ದೇವಸ್ಥಾನವನ್ನು ನಿರ್ಮಿಸಲಾಯಿತು. ಈ ದೇವಸ್ಥಾನಕ್ಕೆ ಯಾವುದೇ ಚಿರ ಆಸ್ತಿ ಇರದಿದ್ದರೂ ಕೂಡ ಸಮಾಜದ ಎಲ್ಲ ಭಕ್ತರ ವಂತಿಕೆಯ ಹಣ ಸಹಾಯ, ಸಹಕಾರದೊಂದಿಗೆ ದೇವಸ್ಥಾನದ ಅಭಿವೃದ್ದಿ ಹಾಗೂ ಜಾತ್ರಾ ಉತ್ಸವವನ್ನು ನೆರವೇರಿಸಲಾಗುತ್ತಿದೆ.
ಶ್ರೀದುರ್ಗಾದೇವಿಯು ಇಲ್ಲಿಗೆ ಬರುವ ಮುನ್ನ ರಾಮದುರ್ಗ ತಾಲೂಕಿನ ಚುಂಚನೂರು, ಜಕಬಾಳದಲ್ಲಿಯೂ ನೆಲೆಸಿದ್ದಳು. ನಂತರ ತೊರಗಲ್ಲಕ್ಕೆ ಬಂದು ನೆಲೆಸಿ , ತನ್ನ ಪವಾಡಗಳಿಂದಾಗಿ ಭಕ್ತರ ಸಮೂಹ ಸೃಷ್ಟಿಸಿಕೊಂಡಳು.
ವರ್ಷದ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನ ಶ್ರೀದೇವಿಯ ” ನುಡಿ ವಚನ ” ನಡೆಯುತ್ತಿದ್ದು ಭಕ್ತರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಲಿರುತ್ತಾರೆ. ಕಾರ್ಯಕ್ರಮಗಳು ; ಫೆ 24 ರಿಂದ 26 ರವರೆಗೆ ” ಶ್ರೀ ದುರ್ಗಾದೇವಿಯ ಜಾತ್ರೆಯು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜರುಗಲಿದೆ. ಸೋಮವಾರ ದಿ.24 ರಂದು ಮುಂ.9 ಗಂಟೆಗೆ ಶ್ರೀದೇವಿಯ ಪೂಜೆ, ಮಂಗಲಾಕ್ಷತೆ, ಸಂಜೆ ” ಮಹಾ ಅಗ್ನಿಕುಂಡದ ಪೂಜೆ ” .
ಮಂಗಳವಾರ ದಿ.25 ರಂದು ಮುಂ.6 ಗಂಟೆಗೆ ಗ್ರಾಮದೇವಿಗೆ ತೊರಗಲ್ಲ – ವ – ಖಾನಪೇಠದ ವತಿಯಿಂದ ‘ ಉಡಿ ತುಂಬುವದು ‘ ಮುಂ.11 ಗಂಟೆಗೆ ಆದಿಶಕ್ತಿ ಶ್ರೀದುರ್ಗಾದೇವಿಯ ಪಲ್ಲಕ್ಕಿಯ ಮೆರವಣಿಗೆಯು ಖಾನಪೇಠ ಗ್ರಾಮದ ಭಕ್ತರ ಮನೆಗಳಿಗೆ ಭೇಟಿ ನೀಡಿ , ಮರಳಿ ಸಾಯಂಕಾಲ 4 ಗಂಟೆಗೆ ಗುಡಿಗೆ ಆಗಮನ ಹಾಗೂ ” ಮಹಾ ಅಗ್ನಿಕುಂಡದ ಪ್ರವೇಶ ” ಕಾರ್ಯಕ್ರಮ ಜರುಗುವುದು. ನಂತರ ಭಕ್ತಾಧಿಗಳಿಗೆ ” ಅನ್ನಪ್ರಸಾದ ವಿತರಣೆಯ ” ಕಾರ್ಯಕ್ರಮ ಜರುಗುವುದು. ಜಾತ್ರೆಗೆ ಆಗಮಿಸಿದ ಭಕ್ತಾಧಿಗಳ ಮನರಂಜನೆಗಾಗಿ ಮಂಗಳವಾರ ದಿ.25 ರಂದು ರಾತ್ರಿ 10 ಗಂಟೆಗೆ ” ಹಾಸ್ಯ ರಸ ಮಂಜರಿ ಕಾರ್ಯಕ್ರಮವು ” ತೊರಗಲ್ಲ ಸಂಸ್ಥಾನದ ಮಹರಾಜರಾದ ಶ್ರೀಮಂಥ ಶಿಂಧೆ ರವರ ಅರಮನೆಯ ಮುಂಬಾಗದ ಭವ್ಯ ರಂಗಮಂದಿರದಲ್ಲಿ ಜರುಗಲಿದೆ.
ಶ್ರೀ ಗೋಪಾಲ. ಇಂಚಗೇರಿ ಹಾಗೂ ಗೋಪಾಲ. ಹೂಗಾರ ರವರ ಸಾರಥ್ಯದಲ್ಲಿ ” ಕಲಾ ಸಿಂಚನ ಮೆಲೋಡಿಸ್ ಕಲಾ ತಂಡದವರಿಂದ ” ನಡೆಯುವ ರಸ ಮಂಜರಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ.ಮ.ಘ.ಚ.ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳವರು, ಕಿಲ್ಲಾತೊರಗಲ್ಲ , ಹಾಗೂ ಶ್ರೀ ಷ.ಬೃ. ರೇಣುಕ ಶಿವಯೋಗಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು, ಹರ್ಲಾಪೂರ ರವರು ವಹಿಸುವರು. ರಾಮದುರ್ಗದ ಕಾಂಗ್ರೆಸ್ಸಿನ ಮುಖಂಡ ಶ್ರೀ ಮುನ್ನಾ. ಖತೀಬ ರವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಸಮಾರಂಭದ ಉದ್ಘಾಟಣೆಯನ್ನು ಮೈನುದ್ದೀನ. ದಾ. ಚಿತ್ರಬಾನಕೋಟ, ಸದಸ್ಯರು, ಗ್ರಾ. ಪಂ.ಕೆ.ಜುನಿಪೇಠ ರವರು ನೆರವೇರಿಸುವರು. ಕಿಲ್ಲಾತೊರಗಲ್ಲ ಸಂಸ್ಥಾನದ ಮಹರಾಜರಾದ ಶ್ರೀಮಂಥ ಸಂಜಯಸಿಂಹರಾವ. ಪ್ರ. ಶಿಂಧೆ ಹಾಗೂ ರಾಜಮಾತೆಯರಾದ ಶ್ರೀಮಂಥ ದಿಪಾಲಿರಾಜೆ. ಸಂ. ಶಿಂಧೆ , ಮಹಾರಾಣಿಯವರು ” ಜ್ಯೋತಿ ಬೆಳಗಿಸುವ ಮೂಲಕ ” ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗೌರವ ಅತಿಥಿಗಳಾಗಿ ಡಾ. ಕೆ.ವ್ಹಿ. ಪಾಟೀಲ, ‘ ಭಾ.ಜ.ಪಾ ರಾಮದುರ್ಗ ತಾಲೂಕು ಅಧ್ಯಕ್ಷರು ‘ ಹಾಗೂ ಶ್ರೀ ಮಲ್ಲಣ್ಣ. ಶಿ. ಯಾದವಾಡ ,ಅಧ್ಯಕ್ಷರು, ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಖಾನಪೇಠ, ಮಾರುತಿ. ತುಪ್ಪದ, ಮಾಜೀ ಸದಸ್ಯರು, ಜಿ.ಪಂ. ಕಟಕೋಳ, ಶ್ರೀಮತಿ. ಸುನಂದಾ
ಹಂಪಣ್ಣವರ. ಕಾಂಗೈ ಮುಖಂಡರು, ರಾಮದುರ್ಗ, ಭಾಸ್ಕರ ಅಮಾಸಿ ” ನಿಪೋನ್ ಪೇಂಟ್ಸ ” ರವರುಗಳು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ರಾ. ಪಂ , ಸದಸ್ಯರು, ರಾಜಕೀಯ ಧುರೀಣರು, ಸಮಾಜ ಸೇವಾ ಕಾರ್ಯಕರ್ತರು, ಕಲಾವಿದರು , ವ್ಯಾಪಾರಸ್ಥರು ಪಾಲ್ಗೊಳ್ಳಲಿದ್ದಾರೆ.
ಬುಧವಾರ ದಿ.26 ರಂದು ಮದ್ಯಾಹ್ನ 3.ಗಂಟೆಗೆ ಶ್ರೀದೇವಿಯ ಆಶೀರ್ವಾದ ಕಾರ್ಯ, ಭಕ್ತರ ಕೋರಿಕೆಗಳಿಗೆ ಅಭಯ ನೀಡಿ, ಭಕ್ತರ ಮನೆ..ಮನೆಗೆ ಭೇಟಿ ನೀಡಿ, ಸಾಯಂಕಾಲ ” ಮಲಪ್ರಭೆ ನದಿಗೆ ” ಆಗಮಿಸಿ ಅಲ್ಲಿ ಸ್ನಾನ, ಮಂಗಲ ಪೂಜೆಯ ಬಳಿಕ ಮರಳಿ ಗುಡಿಗೆ ಆಗಮಿಸುವುದರ ಮೂಲಕ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಮಂಗಲಗೊಳ್ಳುವುದು.
ವರದಿ/ ಚಿತ್ರ; ಮಹಾಂತೇಶ. ಬ. ಶಿದ್ದಿಭಾವಿ
ಮು, ಅಂ. ಕಿಲ್ಲಾತೊರಗಲ್ಲ- 591114
ತಾ.ರಾಮದುರ್ಗ, ಜಿ. ಬೆಳಗಾವಿ.