ಉಪಮಾತೀತರಾಗಿದ್ದರು ಶ್ರೀ ಸಿದ್ದೇಶ್ವರ ಸ್ವಾಮೀಜಿ – ಪ್ರೊ. ಸಂಗಮೇಶ ಗುಜಗೊಂಡ

Must Read

ಮೂಡಲಗಿ – ಅತ್ಯಂತ ಘನ ವ್ಯಕ್ತಿತ್ವ ಹೊಂದಿದ್ದ, ಯಾವುದೇ ಉಪಮೆಗಳಿಗೆ ಮೀರಿದ ವ್ಯಕ್ತಿತ್ವ ಹೊಂದಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಎಂದು ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ಹೇಳಿದರು.

ಶನಿವಾರ ಇಲ್ಲಿನ ಹರ್ಷ ಕಾಂಪ್ಲೆಕ್ಸ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಹಾಗೂ ಜ್ಞಾನದೀಪ್ತಿ ಫೌಂಡೇಶನ್ ಮೂಡಲಗಿ ಇವರ ಸಂಯುಕ್ತ ಆಶ್ರಯದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಎಂಬ ವಿಷಯ ಕುರಿತಂತೆ  ಸಾಹಿತ್ಯ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.

ಇಂದು ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ನೋಡುವ ಮಾನವ ಉದ್ಧಾರಕ್ಕೆ ಪ್ಲೇಟೋ, ಅರಿಸ್ಟಾಟಲ್, ಬುದ್ಧ, ಬಸವರಂಥ ದಾರ್ಶನಿಕರು ಬಂದು ಹೋಗಿದ್ದಾರೆ ಅಂಥವರ ಸಾಲಿನಲ್ಲಿ ನಿಲ್ಲಬಲ್ಲಂಥವರು ಶ್ರೀ ಸಿದ್ದೇಶ್ವರರು.
ವಚನಕಾರ ಉರಿಲಿಂಗ ಪೆದ್ದಿ ಹೇಳುವಂತೆ,
ಲೋಕದಂತೆ ಬಾರರು
ಲೋಕದಂತೆ ಇರರು
ಲೋಕದಂತೆ ಹೋಗರು ನೋಡಯ್ಯ
ಪುಣ್ಯದಂತೆ ಬಪ್ಪರು
ಜ್ಞಾನದಂತೆ ಇಪ್ಪರು
ಉರಿಲಿಂಗದೇವಾ ನಿಮ್ಮ ಶರಣರು ಉಪಮಾತೀತರಾಗಿ ಇಪ್ಪರು
ಎಂಬಂತೆ ಸಿದ್ದೇಶ್ವರರು ಇದ್ದರು ಎಂದರು.

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಕುರಿತಂತೆ ಅನೇಕ ದೃಷ್ಟಾಂತಗಳನ್ನು ನೆನಪಿಸಿಕೊಂಡು ವಿವರಿಸಿದ ಪ್ರೊ. ಗುಜಗೊಂಡ ಅವರು, ಪರಮವಿರಾಗಿ,ಶತಮಾನದ ಸಂತ, ನಿರಾಭಾರ ಚಕ್ರವರ್ತಿ, ಜ್ಞಾನಯೋಗಿ, ನಡೆದಾಡುವ, ದೇವರು, ವೈರಾಗ್ಯ ನಿಧಿ, ರಾಷ್ಟ್ರ ಸಂತ ಎಂಬ ಅನೇಕ ಉಪಮೆಗಳಿಂದ ಅವರನ್ನು ಕರೆಯುತ್ತಿದ್ದೆವು ಆದರೆ ಶ್ರೀ ಸಿದ್ದೇಶ್ವರರು ಈ ಎಲ್ಲ ಉಪಮೆಗಳನ್ನು ಮೀರಿದವರಾಗಿದ್ದರು ಎಂದರು.

ಸಾನ್ನಿಧ್ಯ ವಹಿಸಿದ್ದ ಇಟನಾಳದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತ, ಜ್ಞಾನಕ್ಕೆ ಇನ್ನೊಂದು ಹೆಸರೇ ಸಿದ್ದೇಶ್ವರ ಶ್ರೀಗಳು. ಇಡೀ ವಿಶ್ವವೇ ಮೆಚ್ಚುವಂತೆ ಬದುಕಿದವರು. ಲೇಸೆನಿಸಿಕೊಂಡು ಒಂದು ದಿನ ಬದುಕಬೇಕು ಎಂಬ ಶರಣರ ನುಡಿಯಂತೆ ಶ್ರೀಗಳು ಬದುಕಿನುದ್ದಕ್ಕೂ ಲೇಸೆನಿಸಿಕೊಂಡು ಬದುಕಿದರು.ಅವರು ಅನೇಕ ಸಂಸ್ಕಾರಗಳನ್ನು ನಮಗೆ ಕಲಿಸಿ ಕೊಟ್ಟು ಹೋಗಿದ್ದಾರೆ. ಅವುಗಳನ್ನು ನಾವು ಪಾಲಿಸಿಕೊಂಡು ಬದುಕಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ತಾಲೂಕಾ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ವಹಿಸಿದ್ದರು.
ಸಮಾರಂಭದಲ್ಲಿ ಸುರೇಶ ಲಂಕೆಪ್ಪನವರ, ಬಿ ವಾಯ್ ಶಿವಾಪೂರ, ಪ್ರೊ. ಎಸ್ ಎಮ್ ಕಮದಾಳ, ಟಿ ಎಸ್ ವಂಟಗೂಡಿ, ಸುರೇಶ ಕೋಪರ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಸಲಿಂಗಪ್ಪ ತರಕಾರ ಕಾರ್ಯಕ್ರಮ ನಿರ್ವಹಿಸಿದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group