ಮೂಡಲಗಿ: ‘ಭಜನೆ ಮತ್ತು ಸಂಗೀತ ಕಲೆಗೆ ಇಟನಾಳದ ಐಹೊಳೆ ಕುಟುಂಬದವರ ಕೊಡುಗೆ ಅಪಾರವಾಗಿದೆ” ಎಂದು ಇಟನಾಳದ ಸಿದ್ದೇಶ್ವರ ಆಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದರು.
ಸಮೀಪದ ಇಟನಾಳ ಗ್ರಾಮದಲ್ಲಿ ಶಿವಶರಣ ಶಾಬುಜಿ ಐಹೊಳಿ ಹಾಗೂ ಶರಣೆ ಅವಬಾಯಿ ಐಹೊಳೆ ಅವರ ಪುಣ್ಯಸ್ಮರಣೆ ಹಾಗೂ ಸಂಗೀತ, ಭಜನೆ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಗೀತವು ಸರ್ವಕಾಲಿಕವಾಗಿ ಶಾಶ್ವತವಾಗಿ ಉಳಿಯುವಂತ ಕಲೆಯಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಭಜನೆಯ ಅನೇಕ ಕಲಾವಿದರು ಇದ್ದು ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ, ಕಲಾವಿದರು ಆರ್ಥಿಕವಾಗಿ ಬಡವರಾಗಿದ್ದರೂ ಸಹ ತಮ್ಮಲ್ಲಿರುವ ಕಲಾ ಪ್ರತಿಭೆಯಿಂದ ಅವರು ಯಾವತ್ತೂ ಶ್ರೀಮಂತರಾಗಿರುತ್ತಾರೆ ಎಂದರು.
ರಾಜ್ಯದಲ್ಲಿರುವ 5 ಸಾವಿರಕ್ಕೂ ಅಧಿಕ ಸಂಖ್ಯೆಯ ಭಜನೆ ತಂಡಗಳ ಮಾಹಿತಿ ಕೈಪಿಡಿ ಮಾಡುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಬೇಕಾಗಿದೆ. ಇದರಿಂದ ಕಲಾವಿದರನ್ನು ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ ಎಂದರು.
ಧಾರವಾಡ ಆಕಾಶವಾಣಿ ನಿಲಯ ಕಲಾವಿದ ಸದಾಶಿವ ಐಹೊಳೆ ಪ್ರಾಸ್ತಾವಿಕ ಮಾತನಾಡಿ, ಕುಟುಂಬದಲ್ಲಿ ತಂದೆಯ ಭಜನೆ ಕಲೆಯ ಪ್ರಭಾವದಿಂದ ಇಂದು ಹಿಂದೂಸ್ತಾನಿ ಗಾಯಕನಾಗಿ ನಾಡಿಗೆ ಪರಿಚಯವಾಗಿರುವೆ. ಗ್ರಾಮೀಣ ಭಾಗದ ಸಂಗೀತ ಕಲಾವಿದರು ಶ್ರದ್ದೆ, ಪರಿಶ್ರಮ ಮತ್ತು ನಿತ್ಯ ಅಭ್ಯಾಸ ಮಾಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಎಸ್ ಕೆ ಕೊಪ್ಪದ ಹಿರಿಯ ಕಲಾವಿದ ರಾಮನಗೌಡ ವಜ್ರಮಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಕುಳಲಿಯ ಅಪ್ಪಾಸಾಹೇಬ ಬುದ್ನಿ, ಜಮಖಂಡಿಯ ಡಾ. ಗೋಪಾಲಕೃಷ್ಣ ಹವಾಲ್ದಾರ್, ಸಂಘಟನಾ ಸಮಿತಿ ಅಧ್ಯಕ್ಷ ಮಹಾದೇವ ಐಹೊಳೆ ವೇದಿಕೆಯಲ್ಲಿದ್ದರು.
ಮಹಾಲಿಂಗ ಯಡವಣ್ಣವರ, ನಾಗೇಶ ಐಹೊಳೆ, ವಿಠ್ಠಲ ಜಕನೂರ, ಓಂಕಾರ ಕರಕಂಬಿ, ಆನಂದ ಬ್ಯಾಳಿ, ವಿಠ್ಠಲ ಐಹೊಳೆ ಇದ್ದರು ಉಪಸ್ಥಿತರಿದ್ದರು.
ಉಪನ್ಯಾಸಕ ಶಾನೂರ ಐಹೊಳೆ ಮತ್ತು ಡಾ. ಮಹಾದೇವ ಪೋತರಾಜ, ವಕೀಲ ಸಂತೋಷ ಐಹೊಳೆ ಕಾರ್ಯಕ್ರಮ ನಿರೂಪಿಸಿದರು.
ಭಜನೆ, ಸಂಗೀತ ಸಂಭ್ರಮ: ವಿವಿಧೆಡೆಯಿಂದ ಆಗಮಿಸಿದ್ದ ಭಜನೆ, ಸಂಗೀತ ಕಲಾವಿದರು ಗಾಯನ ಮಾಡಿ ಶ್ರೋತೃಗಳ ಮನ ತಣಿಸಿದರು.