ಮೂಡಲಗಿ: ಕಳೆದ ವರ್ಷದ ಚಳಿಗಾಲ ಅಧಿವೇಶನದಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಪಂಚಮಸಾಲಿ ಸಮಾಜದವರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಖಂಡಿಸಿ, ಡಿ.10ರಂದು ಬೆಳಗಾವಿಯಲ್ಲಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣ ಲಕ್ಷ್ಮಿ ನಗರದ ನೇಗಿಲಯೋಗಿ ಫಾರ್ಮ್ ಹೌಸ್ ದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಜನರ ಮೇಲೆ ನಡೆದ ಘಟನೆ ಖಂಡಿಸಿ ಮೌನ ಪ್ರತಿಭಟನೆ ನಡೆಯಲಿದೆ. ಪಂಚಮಸಾಲಿಗಳ ಮೇಲಿನ ಹಲ್ಲೆ ಮರೆಯಲಾಗದು. ಡಿ.10ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನವನ್ನಾಗಿ ಆಚರಿಸಲಾಗುವುದು ಎಂದರು.
ಬೆಳಗಾವಿಯ ಗಾಂಧಿ ಭವನದಿಂದ ಮೌನ ರ‍್ಯಾಲಿ ಮಾಡಲಾಗುವುದು. ಕೈಗೆ ಕಪ್ಪು ಬಟ್ಟೆ ಧರಿಸಿ, ಶ್ರೀಶೈಲದ ಬೆತ್ತಕ್ಕೆ ಧ್ವಜ ಹಾಕಿಕೊಂಡು ಶಾಂತಿಯುತ ಪ್ರತಿಭಟನೆ ಮಾಡಲಾಗುವುದು. ಇದುವರೆಗೆ ಯಾವುದೇ ಸರ್ಕಾರ ಲಿಂಗಾಯತರ ಮೇಲೆ ದೌರ್ಜನ್ಯ ಮಾಡಿಲ್ಲ. ಆದರೆ ಈ ಸರ್ಕಾರ ಲಿಂಗಾಯತರ ಮೇಲೆ ದೌರ್ಜನ್ಯ ಮಾಡಿದೆ. ಪ್ರತಿಭಟನೆಯಲ್ಲಿ ಸಮಾಜದವರು ಭಾಗವಹಿಸಬೇಕೆಂದು ಕರೆ ನೀಡಿದ ಅವರು, 2ಎ ಮೀಸಲಾತಿಗಾಗಿ ನಮ್ಮ ಹೋರಾಟ ನಿರಂತರವಾಗಲಿದೆ ಎಂದರು.
ಇನ್ನು ಮುಂದೆಯಾದರೂ ಯಾವುದೇ ಸಮಾಜದ ಜನರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಯಾವುದೇ ಸರ್ಕಾರಗಳು ಹೋರಾಟವನ್ನು ಹತ್ತಿಕ್ಕಲು ಅವರ ಮೇಲೆ ದೌರ್ಜನ್ಯ ಮಾಡಬಾರದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಸಂಘಟನೆಯ ಬೆಳಗಾವಿ ಜಿಲ್ಲಾಧ್ಯಕ್ಷ ನಿಂಗಪ್ಪ ಪಿರೋಜಿ, ಯುವ ಘಟಕದ ತಾಲೂಕಾ ಅಧ್ಯಕ್ಷ ಸಂಗಮೇಶ ಕೌಜಲಗಿ,ಶಂಕರ ಗೊಡಿಗೌಡರ್, ಗೋಪಾಲ ಬಿಳ್ಳೂರ ,ಬಸಪ್ಪ ಸಂಕಣ್ಣವರ, ಬಸು ಸಯಣ್ಣವರ್, ಶಿವನಪ್ಪ ಗುಡಗಣ್ಣವರ, ಪ್ರಕಾಶ ಮುಧೋಳ, ಶ್ರೀಶೈಲ ಲೋಕಣ್ಣವರ, ಕಲ್ಮೇಶ ಗೋಕಾಕ ಹಾಗೂ ಅನೇಕರು ಉಪಸ್ಥಿತರಿದ್ದರು.

