ಸಿಂದಗಿ: ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಐಬಿಸಿ ಹಾಗೂ ಇಂಡಿ ಉಪ ಕಾಲುವೆಯಲ್ಲಿ ಐಬಿಸಿಗೆ ಬರುವ ಹಳ್ಳಿಗಳಿಗೆ ತುರ್ತಾಗಿ ನೀರು ಹರಿಸುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಶಾಸಕ ಅಶೋಕ ಮನಗೂಳಿ ಅವರು ಮನವಿ ಮಾಡಿಕೊಂಡಿದ್ದಾರೆ.
ಸಿಂದಗಿ ಮತಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸತತವಾಗಿ ಭೀಕರ ಬರಗಾಲಕ್ಕೆ ತುತ್ತಾಗಿದ್ದು ಮತ್ತು ಈ ವರ್ಷ ವಿಪರೀತ ಬೇಸಿಗೆ ಉಷ್ಣಾಂಶದಿಂದ ಬೋರವೆಲ್ ಗಳು ಮತ್ತು ಬಾವಿಗಳಿಗೆ ಅಂತರಜಲ ಕಡಿಮೆಯಾಗಿ ಬತ್ತಿರುತ್ತವೆ. ಈ ಭಾಗದಲ್ಲಿಯ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಬಹಳ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಲಾಗುತ್ತಿದ್ದು, ಆದುದರಿಂದ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಐಎಲ್‍ಸಿ ಹಾಗೂ ಇಂಡಿ ಉಪ ಕಾಲುವೆಯಲ್ಲಿ ಐಬಿಸಿ ಬರುವ ಕೆರೆಗಳನ್ನು, ಹಳ್ಳಗಳನ್ನು ಮತ್ತು ನನ್ನ ಮತಕ್ಷೇತ್ರದಲ್ಲಿ ಬರುವ ತಾಂಬಾ ಹಳ್ಳದ ಬಾಂದಾರಗಳನ್ನು ತುಂಬಿಸಿ ಜಾನುವಾರುಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಶಾಸಕ ಅಶೋಕ ಮನಗೂಳಿ ಅವರು, ಈ ಭಾಗದಲ್ಲಿ ಹಲವು ವರ್ಷಗಳಿಂದ ಸತತವಾಗಿ ಬರಗಾಲಕ್ಕೆ ತುತ್ತಾಗಿ ಸಕಾಲಕ್ಕೆ ಬೆಳೆಗಳು ಬರದೇ ರೈತರು ಕಂಗಾಲಾಗಿದ್ದು ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ಸಂಬಂಧಿಸಿದ ಜಮೀನುಗಳಿಗೆ ನೀರು ಒದಗಿಸಿದ್ದಾದರೆ ಬಿಸಿಲಿಗೆ ಬಾಯಿತೆರೆದ ಜಮೀನುಗಳುಗೆ ನೀರು ಇಂಗಿ ಬೋರವೆಲ್‍ಗಳಿಗೆ ಅಂತರ್ಜಲ ಹೆಚ್ಚಾಗುವುದಲ್ಲದೆ ಬೆಳೆಗಳಿಗೆ ಉತ್ತೇಜನ ನೀಡಿದಂತಗುತ್ತದೆ ಕಾರಣ ತುರ್ತಾಗಿ ಈ ಕಾಲುಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.