Homeಲೇಖನಎನ್‌ಸಿಸಿ, ಎನ್‌ಎಸ್‌ಎಸ್ ಸೇವೆಯ ಗಾಯಕ ವಿಜಯ್ ಕುಮಾರ್ ಸಿ.ಆರ್.

ಎನ್‌ಸಿಸಿ, ಎನ್‌ಎಸ್‌ಎಸ್ ಸೇವೆಯ ಗಾಯಕ ವಿಜಯ್ ಕುಮಾರ್ ಸಿ.ಆರ್.

ಚಿಕ್ಕಮಗಳೂರಿನಲ್ಲಿ ಇತ್ತೀಚಿಗೆ ರಾಜ್ಯಮಟ್ಟದ ಗಾಯನ ಸ್ಫರ್ಧೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಗಾಯನ ಸ್ಪರ್ಧೆ ವಿಶೇಷವಾಗಿತ್ತು.

ಇಲ್ಲಿ ಗಾಯಕರಾಗಿ ನಾದಮಯ ಈ ಲೋಕವೆಲ್ಲಾ.. ಎಂಬ ಹಾಡಿನಿಂದ ವಿಜಯಕುಮಾರ್ ಸಿ.ಆರ್. ಗಮನ ಸೆಳೆದರು. ಅವರು ಚಿಕ್ಕಮಗಳೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ. ಹೊರಗಿನಿಂದ ಬಂದಿದ್ದ ಅತಿಥಿಗಳನ್ನು ಉಪಚರಿಸುವ ಅವರ ವಿಶೇಷ ಗುಣ ಎಲ್ಲಾ ಗಾಯಕರಿಗೂ ಇಷ್ಟವಾಯಿತು. ಅವರು ಕಾರಿನಲ್ಲಿ ನನ್ನನ್ನು ಕನ್ನಡಭವನದಿಂದ ಬಸ್‌ಸ್ಟ್ಯಾಂಡ್ ಗೆ  ಡ್ರಾಪ್ ಮಾಡುವಾಗ, ವಿಜಯಕುಮಾರ್ ನಿಮಗೆ ಈ ಹಾಡುವ ಹವ್ಯಾಸ ಹೇಗೆ ಬೆಳೆಯಿತು ಎಂದು ಔಪಚಾರಿಕವಾಗಿ ಕೇಳಿದೆ.

ಅವರು ತಮ್ಮ ಬಾಲ್ಯ ಜೀವನದಿಂದಲೇ ಹೇಳತೊಡಗಿದರು. ಅನಂತರಾಜ್ ಸಾರ್, ನಮ್ಮ ತಂದೆ: ರಾಜಣ್ಣ ಸಿ. ಟಿ. ಅಂತ. ನಮ್ಮ ತಾಯಿ ಹೆಸರು ಪುಷ್ಪವತಿ ಜಿ. ಟಿ. ಜನನ ೨೩-೦೭-೧೯೭೮ರಂದು. ಊರು ಚುಕ್ಕವನಹಳ್ಳಿ. ಇದು ಹೊಳಲ್ಕೆರೆ ತಾ, ಚಿತ್ರದರ‍್ಗ ಜಿಲ್ಲೆಯಲ್ಲಿ ಬರುತ್ತದೆ. ಈ ಗ್ರಾಮಕ್ಕೆ ೧೯೯೫ ರವರೆಗೂ ವಿದ್ಯುತ್ ಸಂಪರ‍್ಕ ಇಲ್ಲದ, ಸರಿಯಾದ ರಸ್ತೆ ಸಂಪರ‍್ಕ ಇಲ್ಲದ ಬಸ್ ಸಂಚಾರ ಇಲ್ಲದ ಕುಗ್ರಾಮ. ಇದ್ದ ೬ ಎಕರೆ ಒಣ ಭೂಮಿಯಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದದ್ದು ನಾನು ನನ್ನ ಅಮ್ಮ ಮತ್ತು ತಂಗಿ. ನನಗೆ ಓದುವ ಹಂಬಲ ಬಹಳ. ನಮ್ಮ ಊರಲ್ಲಿದ್ದದ್ದು ಏಕೋಪಾಧ್ಯಾಯ ಪ್ರಾಥಮಿಕ ಶಾಲೆ. ಅಲ್ಲಿಂದ ಮುಂದೆ ನಮ್ಮ ಊರಿನ ಪಕ್ಕದಲ್ಲಿದ್ದ ಮಾಳೇನಹಳ್ಳಿಯಲ್ಲಿ ಐದು ಆರನೇ ತರಗತಿ ಓಡಾಡಿಕೊಂಡು ಮುಗಿಸಿದೆ.  ನಾನು ೫ ನೇ ತರಗತಿ ಇರುವಾಗಿನಿಂದಲೇ ರಜೆ ಇದ್ದಾಗಲೆಲ್ಲ ಅಮ್ಮನ ಜೊತೆ ಕೂಲಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಮನೆಯಲ್ಲಿದ್ದಿದ್ದು ರೇಡಿಯೋ ಮಾತ್ರ, ಆಕಾಶವಾಣಿ ಭದ್ರಾವತಿ, ಧಾರವಾಡ ಕೇಂದ್ರ ದಿಂದ ಬಿತ್ತರಿಸುತ್ತಿದ್ದ ಭಾವಗೀತೆ ಚಿತ್ರಗೀತೆ ಕೇಳುತ್ತ ಹಾಡಿನ ಗುಂಗು ಹಿಡಿದಿತ್ತು. ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಗಿಳಿವಿಂಡು ಕರ‍್ಯಕ್ರಮ ಕೇಳುತ್ತಾ ಬರೆದುಕೊಂಡು ಹಾಡಲು ಪ್ರಯತ್ನಿಸುತ್ತಿದ್ದೆ.

ಶಾಲೆಯಲ್ಲಿ ಆಗಾಗ ಹಾಡುತ್ತಿದ್ದೆ.  ಏಳನೇ ತರಗತಿ ಬ್ಯಾಡಗಿಯಲ್ಲಿ ಓದುವಾಗ ಇಂಗ್ಲೀಷ್ ಪದ್ಯವನ್ನು ಮಾಸ್ತರ ಹೇಳಿ ಕೊಟ್ಟ ಹಾಗೆ ರಾಗವಾಗಿ ಹಾಡುತ್ತಿದ್ದೆ. ಹಾಗಾಗಿ ಪ್ರತಿ ಸೆಕ್ಷನ್ ಗೂ ನನ್ನನ್ನು ಕರೆದು ಹಾಡಿಸುತ್ತಿದ್ದರು. ಅದೇ ರೀತಿ ಗುಂಡೇರಿ ಹೈಸ್ಕೂಲ್ ನಲ್ಲಿ ಸಾರೇ ಜಹಾಂನ್ಸೆ ಅಚ್ಚಾ ದೇಶಭಕ್ತಿ ಗೀತೆ ಪ್ರತೀ ಕ್ಲಾಸ್ ಗೂ ಹೋಗಿ ಹೇಳಿಕೊಡುತ್ತಿದ್ದೆ. ಹೈಸ್ಕೂಲ್ ಮುಗಿಸಿ ಕಾಲೇಜು ವ್ಯಾಸಂಗಕ್ಕಾಗಿ ಮಲ್ಲಾಡಿಹಳ್ಳಿ ಅನಾಥಾಶ್ರಮ ಸೇರಿದೆ. ಮೊದಲ ವರ್ಷ ಪಿಯುಸಿ ಅಲ್ಲಿ ಮುಗಿಸಿ ದ್ವಿತೀಯ ಪಿಯುಸಿ ಹಾವೇರಿಯಲ್ಲಿ ಮುಗಿಸಿದೆ. ಓದಿನ ಜೊತೆ ಎನ್‌ಸಿಸಿಯಲ್ಲೂ ಮುಂಚೂಣಿಯಲ್ಲಿದ್ದೆ.

ಆ ವೇಳೆ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ರವರಿಗೆ ಗಾರ್ಡ್ ಆಫ್ ಆನರ್ ಮಾಡಿದ್ದು ಮರೆಯುವಂತಿಲ್ಲ. ಮುಂದೆ ರಾಯಚೂರಿನ ಕೃಷಿ ಕಾಲೇಜಿನಲ್ಲಿ ಪ್ರವೇಶ ಪಡೆದು ಒಂದು ರೂಮ್ ಮಾಡಿ ಎಲೆಕ್ಟಿçಕ್ ಸ್ಟೋವ್‌ನಿಂದ ಅಡುಗೆ ಮಾಡಿಕೊಳ್ಳ್ಳುತ್ತಿದ್ದೆ. ರೂಂನಲ್ಲಿ ಸ್ನಾನದ ವ್ಯವಸ್ಥೆ ಇಲ್ಲದೆ ಬೆಳಿಗ್ಗೆ ೫ಕ್ಕೆ ಎದ್ದು ರಾಯಚೂರು ನಗರಕ್ಕೆ ನೀರು ಸರಬರಾಜಿಗಾಗಿ ಕಟ್ಟಿದ್ದ ಕೆರೆಗೆ ಹೋಗಿ ಸ್ನಾನ ಮಾಡುತ್ತಿದ್ದೆ. ಕೆಲವೊಮ್ಮೆ ವಾಚ್‌ಮ್ಯಾನ್ ಓಡಿಸಿಕೊಂಡು ಬಂದಿದ್ದೂ ಇದೆ. ಮದ್ಯಾಹ್ನ ಊಟಕ್ಕೆ ರೂಮ್ ದೂರ ಇದ್ದುದರಿಂದ ಹೋಗಲು ಆಗುತ್ತಿರಲಿಲ್ಲ. ಕಾಲೇಜು ಮುಂದಿನ ಉದ್ಯಾನದಲ್ಲಿ ಕೂತು ಹಾಡು ಗುನುಗುತ್ತಿದ್ದೆ ಹಾಗೆಯೇ ಎನ್.ಎಸ್.ಎಸ್.ನಲ್ಲಿ ಅನೇಕ ಕೆಲಸಗಳನ್ನು ಮಾಡಿ ೧೨ ಕ್ಯಾಂಪ್ ಅಟೆಂಡ್ ಮಾಡಿದೆ. ೧೯೯೯ರಲ್ಲಿ ಶ್ರೀ ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿ ಆಗಿದ್ದಾಗ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದು ನೆನಪು. ೨೦೦೦ರಲ್ಲಿ ರಾಷ್ಟ್ರೀಯ ಆರ್.ಡಿ.ಪರೇಡ್‌ಗೆ ಆಯ್ಕೆ ಆಗಿ ೩೩ ದಿನ ಜವಹಾರಲಾಲ್ ಅಂತರಾಷ್ಟ್ರೀಯ ಸ್ಟೇಡಿಯಂ, ದೆಹಲಿಯಲ್ಲಿ ತರಬೇತಿ ಪಡೆದು ಪರೇಡ್‌ನಲ್ಲಿ ಭಾಗವಹಿಸಿದ್ದೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಭೇಟಿ, ರಾಷ್ಟ್ರಪತಿ ಭವನದಲ್ಲಿ ಅಂದಿನ ರಾಷ್ಟ್ರಪತಿ  ಕೆ.ಆರ್.ನಾರಾಯಣನ್ ಮತ್ತು ಉಪರಾಷ್ಟ್ರಪತಿ  ಕೃಷ್ಣಕಾಂತ್ ಅವರ ಜೊತೆ ಟೀ ಪಾರ್ಟಿ ನನ್ನ ಜೀವನದ ನೆನಪಿನ ದಿನಗಳು.

ನಾನು ಎಲ್ಲಿಗೇ ಹೋದರೂ ನನ್ನ ಗಾಯನ ಸ್ಕಿಟ್ ಇತ್ಯಾದಿ ಕಾರ್ಯಕ್ರಮ ಇರುತ್ತಿತ್ತು. ನಮ್ಮಲ್ಲಿ ಹಾಡುವವರು ಯಾರೂ ಇಲ್ಲದ ಕಾರಣ ಪ್ರತೀ ಸಮಾರಂಭದಲ್ಲಿ ಪ್ರಾರ್ಥನೆ ಮತ್ತು ಮನರಂಜನೆಗಾಗಿ ಹಾಡುವ ಅವಕಾಶ ನನಗೆ ಸಿಗುತ್ತಿತ್ತು. ಪದವಿ ಮುಗಿಸಿ ಒಂದೇ ವೇದಿಕೆಯಲ್ಲಿ ೩ ರೋಲಿಂಗ್ ಶೀಲ್ಡ್ ಪಡೆದು ಹೊರಬಂದೆ. ನಂತರ ಕೆಲವು ವರ್ಷ ರಾಯಚೂರು, ಗುಲ್ಬರ್ಗ, ಮಂಗಳೂರು, ಚಿಕ್ಕಮಗಳೂರಿನಲ್ಲಿ ಗೊಬ್ಬರ ಮತ್ತು ಔಷಧ ಮಾರಾಟ ಕಂಪನಿಯಲ್ಲಿ ಕೆಲಸ ಮಾಡಿ ಕಡೆಗೆ ಮಲೆನಾಡಿಗೆ ಮನಸೋತು ಸ್ವಂತ ಹೋಂ ಸ್ಟೇ ನಡೆಸುತ್ತಾ ಚಿಕ್ಕಮಗಳೂರಿನಲ್ಲಿ ಸೆಟಲ್ ಆಗಿದ್ದೇನೆ ಎಂದರು.

ಕರ್ನಾಟಕ ರಾಜ್ಯ ಬರಹಗಾಗರರ ಸಂಘ, ಹೂವಿನಹಡಗಲಿ ಅಧ್ಯಕ್ಷರು ಮಧುನಾಯ್ಕ ಲಂಬಾಣಿಯವರು ಪ್ರತಿ ವಾರ ಆನ್ ಲೈನ್‌ನಲ್ಲಿ ಹಾಡಿನ ಸ್ಫರ್ಧೆ ಏರ್ಪಡಿಸಿ ನಾನು ಅದರಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಶಾಲಾ ಕಾಲೇಜಿನ ಆಟಪಾಠ ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಪ್ರಶಸ್ತಿಗಳು ಒಂದಿಷ್ಟು ಬಂದಿವೆ. ಈ ವರ್ಷ ಮಾರ್ಚ್ ತಿಂಗಳಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಕೊಡಮಾಡುವ ರಾಜ್ಯಮಟ್ಟದ ಗಾನಕೋಗಿಲೆ ಪ್ರಶಸ್ತಿ ಶಿವಮೊಗ್ಗದಲ್ಲಿ ಮತ್ತು ಇಂದು ಚಿಕ್ಕಮಗಳೂರಿನಲ್ಲಿ ಕನ್ನಡ ಕೋಗಿಲೆ ಪ್ರಶಸ್ತಿ ಲಭಿಸಿದೆ ಅಷ್ಟೇ ಎಂದರು. ಅಷ್ಟರಲ್ಲಿ ಕಾರು ಬಸ್ ನಿಲ್ದಾಣಕ್ಕೆ ಬಂದಿತ್ತು.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group