ಮೂಡಲಗಿ: ಕೃಷಿ ಇಲಾಖೆಯ ಆತ್ಮಾ ಯೋಜನೆ ಹಾಗೂ ಮೂಡಲಗಿ ರೈತ ಸ್ಪಂದನ ಕೃಷಿ ವಿಕಾಸ ರೈತ ಉತ್ಪಾದಕ ಸಂಸ್ಥೆಯ ಆಶ್ರಯದಲ್ಲಿ ಕಿಸಾನ ಮಹಿಳಾ ದಿವಸ ಅಂಗವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮ ಪಟ್ಟಣದ ರೈತ ಸ್ಪಂದನ ಸಂಸ್ಥೆಯಲ್ಲಿ ಜರುಗಿತು.
ಕೃಷಿ ಪಂಡಿತ ಪ್ರಶಸ್ತಿ ವಿಜೇತೆ ಸುಣಧೋಳಿಯ ಶಿವಲೀಲಾ ಗಾಣಿಗೇರ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ರೈತರಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ, ಇಂದು ರೈತರಿಗೆ ಬೆಲೆ ಇಲ್ಲದಂತಾಗಿದೆ, ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಇರುವದನ್ನು ಬಿಟ್ಟು ಹೊರಗೆ ಬಂದರೆ ಜ್ಞಾನ ಸಿಗುತ್ತದೆ, ಆರ್ಥಿಕವಾಗಿ ಮತ್ತು ಸಾವಲಂಬಿ ಜೀವನ ನಡೆಸಲು ಮಹಿಳಾ ಸಂಘಗಳು ಸಹಾಯವಾಗುವದರ ಜೊತೆ ಬಲ ಮತ್ತು ಒಗಟ್ಟು ಬರುತ್ತದೆ, ಹೈನುಗಾರಿಕೆಯಲ್ಲಿ ಒಂದು ಆಕಳದಿಂದ ಕನಿಷ್ಟ ಹತ್ತು ಸಾವಿರ ಆದಾಯ ಗಳಿಸ ಬಹುದು ಹಾಗೂ ಹೈನುಗಾರಿಕೆ ಜೊತೆಗೆ ಆಡು, ಕೋಳಿ ಸಾಕಾಣಿಕೆ ಕೈಗೊಂಡು ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಅದರಲ್ಲಿ ಔಷಧ ಸಸಿ ನಾಟಿ ಮಾಡಿದ ಆರ್ಥಿಕವಾಗಿ ಸಬಲರಾಗಲು ಸಹಾಯವಾಗುತ್ತದೆ, ಪಟ್ಟಣದಲ್ಲಿನ ಜನರು ಇಂದು ಮನೆಯ ಮೇಲ್ಚಾವಣಿ ಮೇಲೆ ಗಾರ್ಡನ್ ನೆಪದಲ್ಲಿ ವಿಷಮುಕ್ತ ಆಹಾರ ಬೆಳೆದು ಉಪಯೋಗಿಸುತ್ತಿದ್ದಾರೆ, ರೈತರು ಆರೋಗ್ಯವಂತರಾಗಿಲು ಸಾವಯವ ಪದ್ಧತಿಯನ್ನು ಅನುಸರಿಸಿದರೆ ಭೂಮಿಯ ಫಲವತ್ತತೆ ಜೊತೆಗೆ ಜನರಿಗೆ ಒಳ್ಳೆಯ ಆಹಾರ ನೀಡ ಬಹುದು ಎಂದರು.
ಸಾಧಕ ಕೃಷಿಕ ಮಹಿಳೆಯರಾದ ಕಲ್ಪನಾ ದೊಡ್ಡನ್ನವರ, ಆಶಾ ಖೇತಗೌಡರ ಮತ್ತು ಪ್ರೇಮಾ ಗಾಣಿಗೇರ ಮಾತನಾಡಿ, ಆರೋಗ್ಯವಂತರಾಗಿರಲು ಪ್ರತಿಯೊಬ್ಬರು ಸಿರಿ ಧಾನ್ಯಗಳನ್ನು ಉಪಯೋಗಿಸಿ ಮುಂದಿನ ಪೀಳಿಗೆಗಳಿಗೆ ಸಿರಿಧಾನ್ಯಗಳ ಮಹತ್ವವನ್ನು ತಿಳಿಸಬೇಕೆಂದರು.
ಸಂಗೀತಾ ಪಾಟೀಲ ಸಸಿಗೆ ನೀರು ಉಣಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು, ರೈತ ಸ್ಪಂದನ ಕೃಷಿ ವಿಕಾಸ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಈರಣ್ಣಾ ಢವಳೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಅರಭಾವಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಶಂಕರ ಹಳ್ಳದಮನಿ, ಎಸ್.ಜಿ.ಘಮಾಣಿ ಮತ್ತಿತರು ಇದ್ದರು.
ಆತ್ಮಾ ಯೋಜನೆಯ ಛಾಯಾ ಪಾಟೀಲ ಸ್ವಾಗತಿಸಿ ನಿರೂಪಿಸಿದರು, ರೈತ ಸ್ಪಂದನ ಕೃಷಿ ವಿಕಾಸ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಆನಂದ ಸುಳ್ಳನವರ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.