ಸೈನಿಕರು ರಾಷ್ಟ್ರದ ಉಸಿರಿದ್ದಂತೆ -ಡಾ.ಭೇರ್ಯ ರಾಮಕುಮಾರ್

0
559

ರಾಷ್ಟ್ರ ಕಾಯುತ್ತಿರುವ ಸೈನಿಕರು ರಾಷ್ಟ್ರದ ಉಸಿರಿದ್ದಂತೆ. ಕುಟುಂಬದವರನ್ನು ತಮ್ಮೂರಿನಲ್ಲೆ ಬಿಟ್ಟು ಮಳೆ,ಬಿಸಿಲು,ಚಳಿ ಎನ್ನದೇ ರಾಷ್ಟ ಹಾಗೂ ನಮ್ಮ ರಕ್ಷಣೆಯಲ್ಲಿ ತೊಡಗಿರುವ ಅವರ ಕಾಯಕ ಅತ್ಯಮೂಲ್ಯ ವಾದುದು. ಸಮಯ ಬಂದರೆ ನಮ್ಮ ರಕ್ಷಣೆಗಾಗಿ ತಮ್ಮ ಜೀವವನ್ನೂ ಲೆಕ್ಕಿಸದೇ ಹೋರಾಡುವ ಅವರಿಗೆ ಸಮಾಜ ಚಿರ ಋಣಿಯಾಗಿರಬೇಕು ಎಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ನುಡಿದರು.

‌ಪುಲ್ವಾಮಾ ದಾಳಿಯ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರದ ನಾರಾಯಣಪುರದಲ್ಲಿ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಏರ್ಪಡಿಸಲಾಗಿದ್ದ ವೀರಯೋಧ ಎನ್.ಎಸ್.ಮಹೇಶ್ ಗೌರವ ಸಮರ್ಪಣೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಸೈನಿಕರ ಬೆಂಬಲಕ್ಕೆ ಸಮಾಜ ಜಾತಿ,ಧರ್ಮ ಮರೆತು ನಿಲ್ಲಬೇಕು. ಸೈನಿಕರ ಕುಟುಂಬದವರ ಹಿತ ಕಾಪಾಡಬೇಕು. ರಾಷ್ಟಕ್ಕಾಗಿ ತಮ್ಮ ಸುಖಗಳನ್ನು ಮರೆತಿರುವ ಸೈನಿಕರು ಮಹಾನ್ ತ್ಯಾಗಿಗಳು. ಇಂದಿನ ಯುವ ಜನಾಂಗದವರು ಸೈನ್ಯಕ್ಕೆ ಸೇರಿ ತಮ್ಮ ಬದುಕಿನ ಸಾರ್ಥಕತೆ ಪಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ನಾರಾಯಣಪುರದ ಹದಿನೈದಕ್ಕೂ ಹೆಚ್ಚು ಮಂದಿ ಯುವ ಜನರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಚಿಂತಕ ಶಶಿಕುಮಾರ್ ಅವರು ಸಭೆಯಲ್ಲಿ ಮಾತನಾಡಿ ಪುಲ್ವಾಮಾ ದುರ್ಘಟನೆ ಬಗ್ಗೆ ವಿವರಿಸಿದರು. ನೆರೆಯ ಎರಡು ರಾಷ್ಟ್ರಗಳು ನಮ್ಮ ರಾಷ್ಟ್ರದ ಶಾಂತಿ,ನೆಮ್ಮದಿ ಹಾಳುಮಾಡಲು ತೀವ್ರ ಯತ್ನ ನಡೆಸಿವೆ.ಇಂತಹ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ,ರಾಷ್ಟ್ರದ ಐಕ್ಯತೆ ಕಾಪಾಡಬೇಕು ಎಂದು ನುಡಿದರು.

ಮಾಜಿ ಸೈನಿಕರಾದ ಮಂಜುನಾಥ್, ಉದಯಕುಮಾರ್ ಮಾತನಾಡಿ ಸೈನ್ಯದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಾರಾಯಣಪುರ ಗ್ರಾಮದ ಮುಖಂಡರಾದ ಕೃಷ್ಣೇಗೌಡ ,ಬಾಬು, ಗೋವಿಂದರಾಜು ಸಭೆಯಲ್ಲಿ ಮಾತನಾಡಿದರು. ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರಾದ ಅಮ್ಮ ರಾಮಚಂದ್ರ ಅವರು ಸೈನಿಕ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಗ್ರಾಮೀಣ ಜನರ ಮನಸೆಳೆದರು. ಸಮಾಜಸೇವಕಿ ಚೆಲುವಾಂಬಿಕಾ,ಧರ್ಮ ಹೊಸೂರು, ಅರ್ಚನ,ಆದಿ,ರಾಜೇಶ್, ಕಿರಣ್,ಸುದೀಪ್,ಅಬಿ, ಶಿವು ,ಸುದೀಪ್ ಮೊದಲಾದವರು ಉಪಸ್ಥಿತರಿದ್ದರು. ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಚೆಲುವ ಕಾರ್ಯಕ್ರಮ ನಿರೂಪಿಸಿದರು.

ಖಜಾಂಚಿ ಕೃಷ್ಣಯ್ಯ ವಂದಿಸಿದರು. ಕಾರ್ಯಕ್ರಮ ದ ಆರಂಭದಲ್ಲಿ ವೀರಯೋಧ ಎನ್.ಎಸ್.ಮಹೇಶ್ ಪ್ರತಿಮೆ ಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ವೀರಯೋಧ ಎನ್.ಎಸ್.ಮಹೇಶ್ ಅವರ ತಂದೆ -ತಾಯಿಯರಾದ ಸದಾಶಿವ ಹಾಗೂ ಶ್ರೀಮತಿ ರತ್ನಮ್ಮ ಅವರಿಗೆ ಸನ್ಮಾನಿಸಲಾಯಿತು.