Homeಸುದ್ದಿಗಳುಕೊಡವರ ಪುಣ್ಯಕ್ಷೇತ್ರ ತಲಕಾವೇರಿ ವಿಶೇಷತೆ

ಕೊಡವರ ಪುಣ್ಯಕ್ಷೇತ್ರ ತಲಕಾವೇರಿ ವಿಶೇಷತೆ

ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆಯಾದರೂ ಅವುಗಳಲ್ಲಿ ಕೆಲವು ನದಿಗಳನ್ನು ಬಲು ಪವಿತ್ರ ಎಂದು ಪರಿಗಣಿಸಲಾಗಿದೆ. ಅಂತಹ ಕೆಲವು ಪವಿತ್ರ ನದಿಗಳ ಪೈಕಿ ಕರ್ನಾಟಕದಲ್ಲಿ ಹರಿಯುವ, ಅದರಲ್ಲೂ ವಿಶೇಷವಾಗಿ ದಕ್ಷಿಣ ಕರ್ನಾಟಕದ ಜೀವನದಿ ಎಂದೆ ಹೆಸರಾಗಿರುವ ಕಾವೇರಿಯೂ ಸಹ ಒಂದು.

ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುತ್ತ ತಮಿಳುನಾಡಿನ ಮೂಲಕ ಬಂಗಾಳ ಕೊಲ್ಲಿಗೆ ಸೇರುವ ಕಾವೇರಿ ನದಿಯು ತನ್ನ ಪಥದಲ್ಲಿ ಸಾಕಷ್ಟು ಪುಣ್ಯ ಕ್ಷೇತ್ರಗಳ ಮೂಲಕ ಹಾದು ಹೋಗುತ್ತದೆ. ಹೀಗಾಗಿ ಕಾವೇರಿಯನ್ನು ಒಂದು ಪವಿತ್ರ ನದಿಯನ್ನಾಗಿಯೂ ಪರಿಗಣಿಸಲಾಗಿದೆ.

ಸುಂದರವಾದ ಪ್ರಕೃತಿ ಸೊಬಗನ್ನು ಮೈಹೊದ್ದು ಪ್ರತಿನಿತ್ಯ ಸಾವಿರಾರು ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ, ಪ್ರವಾಸಿಗರ ಸ್ವರ್ಗ, Coorg – The Scotland of India, Coorg – The Kashmir of Karnataka ಎಂದೇ ಕರೆಯಲ್ಪಡುವ ಕೊಡಗು ಜಿಲ್ಲೆಯ ಭಾಗಮಂಡಲದ ಸಮೀಪವಿರುವ ತಲಕಾವೇರಿಯನ್ನು ಕಾವೇರಿ ನದಿಯ ಉಗಮಸ್ಥಾನ ಎಂದು ಮೊದಲಿನಿಂದಲೂ ಪರಿಗಣಿಸಲಾಗಿದ್ದು ಕೊಡವರ ಪಾಲಿಗೆ ಈ ಕ್ಷೇತ್ರವು ತೀರ್ಥಯಾತ್ರಾ ಕ್ಷೇತ್ರವಾಗಿದೆ. ಅಷ್ಟೇ ಅಲ್ಲದೆ ಕರ್ನಾಟಕ, ಕೇರಳ, ತಮಿಳುನಾಡು ಹೀಗೆ ಹಲವು ರಾಜ್ಯಗಳ ಜನರಿಗೆ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ನಿಜ ಹೇಳಬೇಕೆಂದರೆ ಇಲ್ಲಿನ ಒಂದು ಕುಂಡದಲ್ಲಿ ವರ್ಷದ ನಿರ್ದಿಷ್ಟ ಸಮಯದಲ್ಲಿ ನೀರು ಜಿನುಗಿ ನಂತರ ಅದು ಭೂಗರ್ಭದಲ್ಲಿಯೆ ಹರಿಯುತ್ತ ಮುಂದೆ ಕಾವೇರಿಯಾಗಿ ಹೊರ ಹೊಮ್ಮಿ ಹರಿಯುತ್ತಾಳೆನ್ನಲಾಗಿದೆ.

ಈ ರೀತಿಯಾಗಿ ಕಾವೇರಿಯು ತುಲಾ ಮಾಸದ ಕಾವೇರಿ ಚಂದ್ರಗಿರಿ ದಿನ ಅಂದರೆ ಅಕ್ಟೋಬರ್ ತಿಂಗಳಿನ ಮಧ್ಯದ ಸಮಯದಲ್ಲಿ ಇಲ್ಲಿನ ಕುಂಡದಲ್ಲಿ ಉದ್ಭವಿಸುತ್ತಾಳೆಂದು ಹೇಳಲಾಗಿದ್ದು ಆ ಸಮಯದಲ್ಲಿ ಸಾಕಷ್ಟು ಜನ ಭಕ್ತಾದಿಗಳು ತಲಕಾವೇರಿಗೆ ಆಗಮಿಸುತ್ತಾರೆ ಹಾಗೂ ಕಾವೇರಿ ಚಿಮ್ಮುವ ಪ್ರಸಂಗಕ್ಕೆ ಸಾಕ್ಷಿಯಾಗುತ್ತಾರೆ. ಈ ವರ್ಷದ ತೀರ್ಥವು ಇಂದು ಮಧ್ಯಾಹ್ನ 1.11ಕ್ಕೆ ಸರಿಯಾಗಿ ಉದ್ಭವವಾಗಲಿದೆ.

ತಲಕಾವೇರಿಯಲ್ಲಿ ಕಾವೇರಿಗೆ ಮುಡಿಪಾಗಿ ಕಾವೇರಿಯಮ್ಮನ ದೇವಾಲಯವನ್ನು ನಿರ್ಮಿಸಲಾಗಿದೆ. ಅಲ್ಲದೆ ಅಗಸ್ತ್ಶೇಶ್ವರನನ್ನೂ ಸಹ ಇಲ್ಲಿ ಆರಾಧಿಸಲಾಗುತ್ತದೆ. ದಂತಕಥೆಯಂತೆ, ಆಗಸ್ತ್ಯ ಮುನಿಗಳು ಕಾವೇರಿಯನ್ನು ತಮ್ಮ ಕಮಂಡಲದೊಳಗಿ ಹಾಕಿಕೊಂಡು ತಪಗೈಯುತ್ತಿದ್ದರು. ಗಣೇಶನು ಕಾಗೆಯ ರೂಪ ತಾಳಿ ಆ ಕಮಂಡಲದ ಮೇಲೆ ಕುಳಿತು ಅಲುಗಾಡಿಸಿ, ಹೊರಳಾಡಿಸಿ ಕಮಂಡಲ ಬೀಳುವಂತೆ ಮಾಡಿತು. ಹೀಗಾಗಿ ಕಾವೇರಿ ಭೂಮಿಗೆ ಬಂದು ಹರಿಯತೊಡಗಿದಳು.

ಇದರಿಂದ ಆಗಸ್ತ್ಯ ಮುನಿಗಳು ಕೋಪಗೊಂಡರೂ ಸಹ ತದನಂತರ ಗಣೇಶನೆ ಕಾಗೆಯ ರೂಪ ತಾಳಿದುದನ್ನು ಅರಿತು ಸಂತಸಗೊಂಡರು. ಹೀಗಾಗಿ ತಲಕಾವೇರಿಯಲ್ಲಿ ಕಾವೇರಿಯಮ್ಮನ ಜೊತೆ ಅಗಸ್ತ್ಯೀಶ್ವರನನ್ನೂ ಸಹ ಆರಾಧಿಸಲಾಗುತ್ತದೆ. ಇನ್ನೊಂದು ವಿಚಾರವೆಂದರೆ ಇಲ್ಲಿ ಶಿವಳ್ಳಿ ಬ್ರಾಹ್ಮಣ ಸಮುದಾಯದ ಅಚಾರ್ ಮನೆತನದವರಿಂದಲೆ ಹಿಂದಿನ ಎಂಟು ತಲೆಮಾರುಗಳಿಂದ ಪೂಜೆ ನಡೆಸಲ್ಪಡುತ್ತದೆ.

ಭಾಗಮಂಡಲದಿಂದ ತಲಕಾವೇರಿಯು ಕೇವಲ ಎಂಟು ಕಿ.ಮೀ ಗಳಷ್ಟು ದೂರದಲ್ಲಿ ಎತ್ತರವಾದ ಬೆಟ್ಟದ ಮೇಲಿದೆ. ಅಲ್ಲದೆ ಭಾಗಮಂಡಲವು ತ್ರಿವೇಣಿ ಸಂಗಮವಾಗಿರುವುದರಿಂದ ಮೊದಲಿಗೆ ಭಕ್ತಾದಿಗಳು ಮಡಿಕೇರಿಯಿಂದ ದೊರೆಯುವ ಬಸ್ಸುಗಳ ಮೂಲಕ ಭಾಗಮಂಡಲಕ್ಕೆ ತೆರಳಿ ಅಲ್ಲಿ ತ್ರಿವೇಣಿ ಸಂಗಮದಲ್ಲಿ ಮಿಂದು ನಂತರ ತಲಕಾವೇರಿಯೆಡೆ ಪ್ರಯಾಣ ಬೆಳೆಸುತ್ತಾರೆ. Covid-19 ಸೋಂಕಿನ ಭಯದಿಂದಾಗಿ ಇಂದು ಜನರ ಭೇಟಿಯನ್ನು ಕಡಿತಗೊಳಿಸಲಾಗಿದೆ. ಬನ್ನಿ, ನಾವೂ ಸಹ SOP ಪಾಲನೆ ಮಾಡುತ್ತಾ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳೋಣ.


ಹೇಮಂತ್ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

RELATED ARTICLES

Most Popular

error: Content is protected !!
Join WhatsApp Group