ಮೂಡಲಗಿ: ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೆ, ಕ್ರೀಡೆಯು ಜೀವನದಲ್ಲಿ ಶಿಸ್ತು ಮತ್ತು ಒಗ್ಗಟ್ಟನ್ನು ಕಲಿಸುತ್ತದೆ ಎಂದು ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ ಅವರು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿರುವ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಆತಿಥ್ಯದಲ್ಲಿ, ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ್ ಕೇಂದ್ರ, ಬೆಳಗಾವಿ ಹಾಗೂ ಶ್ರೀ ವೀರಭದ್ರೇಶ್ವರ ಜಾನಪದ ಕಲಾ ಪೋಷಕ ಸಂಘ, ಕಲ್ಲೋಳಿ ಇವುಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ 2025-26ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಶ ಭೀ. ಹನಗಂಡಿ ಅವರು, “ಇಂದು ಭಾರತ ವಿಶ್ವದ ಯುವ ಶಕ್ತಿಯ ಕೇಂದ್ರವಾಗಿದೆ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಮೈ ಭಾರತ್ ಕೇಂದ್ರವು ಯುವಜನರ ಪ್ರತಿಭೆಯನ್ನು ಗುರುತಿಸಲು ಮತ್ತು ಅವರಿಗೆ ಸೂಕ್ತ ವೇದಿಕೆ ಕಲ್ಪಿಸಲು ಶ್ರಮಿಸುತ್ತಿದೆ. ಈ ತಾಲೂಕು ಮಟ್ಟದ ಕ್ರೀಡಾಕೂಟವು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಹೆಜ್ಜೆ ಇಡಲು ಮೊದಲ ಮೆಟ್ಟಿಲಾಗಿದೆ” ಎಂದು ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದರು.
ಇದೇ ವೇಳೆ, ನಮ್ಮ ಮಹಾವಿದ್ಯಾಲಯದಲ್ಲಿ ಕಲಿತು ಕ್ರೀಡೆಯಲ್ಲಿ ಸಾಧನೆ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹನಗಂಡಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ಜಾನಪದ ಕಲಾ ಪೋಷಕ ಸಂಘದ ಸದಸ್ಯರಾದ ಸಿದ್ದಪ್ಪ ಮರಡಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ವ್ಹಿ.ಬಿ. ಪಂಡಿತ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ, ಕ್ರೀಡಾ ಕಾರ್ಯದರ್ಶಿ ಬಿ.ಬಿ. ವಾಲಿ, ದೈಹಿಕ ನಿರ್ದೇಶಕರಾದ ಬಿ.ಕೆ. ಸೊಂಟನವರ ಮತ್ತು ಮಹೇಶ ಮಳವಾಡ, ಉಪನ್ಯಾಸಕರಾದ ಎಂ. ವಾಯ್. ಮೇತ್ರಿ, ಆರ್.ಎಸ್. ಪಂಡಿತ, ವ್ಹಿ.ವಾಯ್. ಕಾಳೆ, ಡಾ. ಆರ್.ಎನ್. ತೋಟಗಿ, ಬಿ.ಸಿ. ಮಾಳಿ, ಸಂತೋಷ ಬಂಡಿ, ಎಂ.ಆರ್. ಕರಗಣ್ಣಿ ಸೇರಿದಂತೆ ಹಲವು ಗಣ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ರಾಧಿಕಾ ಕರೆಪ್ಪಗೋಳ ಅವರು ಪ್ರಾರ್ಥನೆ ಹಾಡಿದರು. ಉಪನ್ಯಾಸಕ ಎಂ.ಬಿ. ಜಾಲಗಾರ ಅವರು ಎಲ್ಲರನ್ನೂ ಸ್ವಾಗತಿಸಿದರು. ಡಾ. ಕೆ.ಎಸ್. ಪರವ್ವಗೋಳ ಅವರು ಸಮಾರಂಭವನ್ನು ಯಶಸ್ವಿಯಾಗಿ ನಿರೂಪಿಸಿದರು. ಅಂತಿಮವಾಗಿ ವಿಲಾಸ ಕೆಳಗಡೆ ಅವರು ವಂದನಾರ್ಪಣೆ ಮಾಡಿದರು.

