ಸಿಂದಗಿ: ಕೋವಿಡ್ ಸಂದರ್ಭದಲ್ಲಿ ಅನೇಕ ಕಡು ಬಡವರು, ಅನೇಕ ಬೀದಿ ವ್ಯಾಪಾರಿಗಳು ಬೀದಿಗೆ ಬಂದಂತಾಗಿದೆ ಅವರು ಬಂಡವಾಳ ಹಾಕಿ ವ್ಯಾಪಾರ ಮಾಡುವ ಸ್ಥಿತಿ ಈಗ ಇಲ್ಲದಂತಾಗಿರುವ ಸಂದಿಗ್ದ ಪರಿಸ್ಥಿತಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪಟ್ಟಣದ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಅಂಥವರ ಕಷ್ಟಕ್ಕೆ ಕೈ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ನಡೆದ ಸಂಸ್ಥಾಪಕ ಅಧ್ಯಕ್ಷ ದಿ.ಎಮ್.ಸಿ.ಮನಗೂಳಿ ಅವರ ಸ್ಮರಣಾರ್ಥ ಕೋವಿಡ್ ಸಂದರ್ಭದಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸಿದ ಬೀದಿ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿದರದಲ್ಲಿ ೨೫ ಸಾವಿರ ರೂ. ಗಳ ಸಾಲದ ಪಾವತಿಯನ್ನು ವಿತರಿಸಿ ಮಾತನಾಡಿ, ಕೋವಿಡ್ ಹೊಡೆತಕ್ಕೆ ಈ ದೇಶ ನಲುಗಿ ಹೋಗಿದೆ ಅನೇಕ ಬಡ ಕುಟುಂಬಗಳು, ಬೀದಿ ವ್ಯಾಪಾರಸ್ಥರು, ಮಧ್ಯಮ ವರ್ಗದ ಜನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕುಸಿತ ಕಂಡಿದೆ.
ಪಟ್ಟಣದಲ್ಲಿರುವ ಸುಮಾರು 500 ಕ್ಕೂ ಅಧಿಕ ಬೀದಿ ವ್ಯಾಪಾರಸ್ಥರ ನೆರವಿಗೆ ಪಟ್ಟಣದ ಶ್ರೀ ಬಸವೇಶ್ವರ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ. ಅಗಷ್ಟ 31 ರ ವರೆಗೂ ಬೀದಿ ವ್ಯಾಪಾರಸ್ಥರಿಗೆ ಸಾಲ ನೀಡುವ ದೊಡ್ಡ ಯೋಜನೆ ಹೊಂದಿದೆ. ಪುರಸಭೆಯಲ್ಲಿ ನೊಂದಣಿ ಮಾಡಿಕೊಂಡಿರುವ ಬೀದಿ ವ್ಯಾಪಾರಸ್ಥರು ಸೂಕ್ತ ದಾಖಲಾತಿಗಳನ್ನು ನೀಡಿ ಸಾಲ ತಗೆದುಕೊಂಡು ಹೋಗಬಹುದು ಎಂದರು.
ಈ ಸಂದರ್ಭದಲ್ಲಿ ಸಹಕಾರಿ ಧುರೀಣ ಶರಣಪ್ಪ ವಾರದ ಮಾತನಾಡಿ, ಪಟ್ಟಣದ ಶ್ರೀ ಬಸವೇಶ್ವರ ಬ್ಯಾಂಕ್ ಆಯೋಜಿಸಿರುವ ಈ ಕಲ್ಪನೆ ನಿಜಕ್ಕೂ ಅನೇಕ ಬಡ ಬೀದಿ ವ್ಯಾಪಾರಸ್ಥರ ಕುಟುಂಬಕ್ಕೆ ಅನುಕೂಲವಾಗಲಿದೆ. ಸಾಲ ಪಡೆದುಕೊಂಡು ಸರಿಯಾದ ಸಮಯದಲ್ಲಿ ಮರು ಪಾವತಿಸಬೇಕು. ಕಷ್ಟದ ಕಾಲದಲ್ಲಿ ಕೈ ಹಿಡಿಯುವವರೆ ನಿಜವಾದ ದೇವರು ಶ್ರೀ ಬಸವೇಶ್ವರ ಬ್ಯಾಂಕು ಇನ್ನೂ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದಲ್ಲಿ ಆರ್ಥಿಕ ಕ್ರಾಂತಿ ಮಾಡಲಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಬಿ.ಜಿ.ನೆಲ್ಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆಯ ಉಪಾಧ್ಯಕ್ಷ ಹಾಸೀಂ ಆಳಂದ, ಸದಸ್ಯ ಬಸವರಾಜ ಯರನಾಳ ಹಾಗೂ ಇತರರು ಇದ್ದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಸಾಗರ ಕಿರಣಗಿ ಸಿಬ್ಬಂದಿಗಳಾದ ಶಾಂತಗೌಡ ಪಾಟೀಲ, ಎನ್.ಎಮ್.ಬಿರಾದಾರ, ಸಿದ್ದಣ್ಣ ತಡಲಗಿ, ಸಂತೋಷ ಯರನಾಳ, ಸಂಗು ಅಗಸರ, ವಿರೇಶ ಯರಗಲ್ಲ, ಸೋಮನಾಥ ಪೂಜಾರಿ, ಮಾಂತಪ್ಪ ಧರ್ಮಗೊಂಡ, ವಿಜಯ ವಸ್ತ್ರದ ಸೇರಿದಂತೆ ಅನೇಕರು ಇದ್ದರು.