ಮೂಡಲಗಿ – ಕಬ್ಬಿಗೆ ನೀಡುವ ದರವನ್ನು ಘೋಷಣೆ ಮಾಡಿಯೇ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಕೆಲಸ ಆರಂಭಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಗಳ ಸಹಕಾರದಲ್ಲಿ ಗುರ್ಲಾಪೂರ ಕ್ರಾಸ್ ನಲ್ಲಿ ಸಾವಿರಾರು ರೈತರಿಂದ ಬೃಹತ್ ಪ್ರತಿಭಟನೆ ನಡೆಯಿತು.
ರೈತರು ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿ ಬಂದ್ ಮಾಡಿ ಕಾರ್ಖಾನೆಗಳಿಂದ ಕಬ್ಬಿನ ಬೆಲೆ ನಿಗದಿಗೆ ಒತ್ತಾಯಿಸಿದರು
ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡುತ್ತ, ವರ್ಷಪೂರ್ತಿ ಕಬ್ಬು ಬೆಳೆದು ತನ್ನ ಬೆಳೆಗಾಗಿ ಕಾರ್ಖಾನೆಯವರು ಬೆಲೆ ನಿಗದಿ ಮಾಡಬೇಕೆಂದು ರೈತ ಒತ್ತಾಯಮಾಡಬೇಕಾದ ವಿಷಾದದ ಪರಿಸ್ಥಿತಿ ಇದೆ ಎಂದು ಹೇಳಿ, ಸಕ್ಕರೆ ಆಯುಕ್ತರು ಸರ್ಕಾರಕ್ಕೆ ವರದಿ ಕೊಟ್ಟ ಪ್ರಕಾರ ಒಂದು ಟನ್ ಕಬ್ಬು ಬೆಳೆಯಲು ರೂ.೪೭೦೦ ಖರ್ಚು ಬರುತ್ತದೆ ಹೀಗಾಗಿ ಟನ್ನಿಗೆ ೪೫೦೦ ಬೇಡಿಕೆ ಇಡಲಾಗಿತ್ತು. ಕೊನೆಗೆ ರೂ. ೩೫೦೦ ಆದರೂ ದರ ಕೊಡಬೇಕು ಎಂಬುದು ರೈತರ ಬೇಡಿಕೆಯಾಗಿದೆ ಎಂದರು.

ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆಯವರು ಕಂಪ್ಯೂಟರ್ ಮೂಲಕ ತೂಕದಲ್ಲು ನಡೆಸುವ ಮೋಸವನ್ನು ತಡೆಯಲು ಹೇಳಿದ್ದೇವೆ. ನೂರು ಕಿಲೋಮೀಟರ್ ದಿಂದ ಕಬ್ಬನ್ನು ತರುವ ಬದಲಿಗೆ ಸಮೀಪದಲ್ಲಿಯೇ ಇರುವ ಕಬ್ಬು ಖರೀದಿ ಮಾಡಬೇಕು, ಸಾಗಾಣಿಕೆ ವೆಚ್ಚವನ್ನು ರೈತರ ತಲೆಗೆ ಕಟ್ಟಬಾರದು ಎಂದರೂ ಕೇಳದೆ ಕೊನೆಗೆ ರೂ. ೩೦೫೦ ಅಷ್ಟೇ ಕೊಡುವುದಾಗಿ ಕಾರ್ಖಾನೆಯವರು ಹೇಳಿದ್ದರಿಂದ ಮಾತುಕತೆ ಮುರಿದುಬಿದ್ದಿದೆ ಎಂದರು.
ಸಾವಿರಾರು ರೈತರು ವಿವಿಧ ಭಾಗಗಳಿಂದ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಗಳೊಂದಿಗೆ ಅನ್ನದಾತರು ನಡು ರಸ್ತೆಯಲ್ಲಿ ಕುಳಿತು ತಮ್ಮ ಉತ್ಪನ್ನಕ್ಕೆ ದರ ನೀಡಬೇಕೆಂದು ಆಗ್ರಹಿಸಬೇಕಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಶಶಿಕಾಂತ ಗುರೂಜಿ, ರಾಜ್ಯ ಉಪಾಧ್ಯಕ್ಷ ಸತ್ಯಪ್ಪ ಮಲ್ಲಾಪುರೆ, ರಾಜ್ಯ ಕಾರ್ಯಾಧ್ಯಕ್ಷ ರಾಜು ಪವಾರ, ರಾಜ್ಯ ಸಂಚಾಲಕ ವಾಸು ಪಂಡ್ರೋಳಿ, ಜಿಲ್ಲಾ ಅಧ್ಯಕ್ಷ ಕುಮಾರ ಮರಡಿ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಜಿಲ್ಲಾ ಕಾರ್ಯಾಧ್ಯಕ್ಷ ಮಂಜು ಪೂಜೇರಿ, ಜಿಲ್ಲಾ ಗೌರವ ಅಧ್ಯಕ್ಷ ಗೋಪಾಲ ಕುಕನೂರ, ಜಿಲ್ಲಾ ಸಂಚಾಲಕ ಪ್ರಕಾಶ ತೇರದಾಳ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಶೈಲ ಅಂಗಡಿ ಹಾಗೂ ರೈತ ಮುಖಂಡರಾದ ಬಾಬು ಗೌಡ್ರ ಪಾಟೀಲ, ಸುಭಾಸ ಶಿರಗೂರ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು.



