ಬಾಗಲಕೋಟೆ – ಬಾಗಲಕೋಟೆಯಲ್ಲಿ ಬರುವ ನವೆಂಬರ್ ಮೊದಲ ವಾರದಲ್ಲಿ ರಾಜ್ಯ ಮಟ್ಟದ ಪ್ರಥಮ ಸಂಗೀತ ಸಮ್ಮೇಳನವನ್ನು ಆಯೋಜಿಸಲಾಗುವದೆಂದು ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಅವರು ಹೇಳಿದರು.
ಅವರು ಬಾಗಲಕೋಟೆಯ ವಿದ್ಯಾ ಗಿರಿಯ ಸಾಯಿ ಮಂದಿರದಲ್ಲಿ ನಡೆದ ಪ್ರತಿಷ್ಠಾನದ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಮ್ಮೇಳನದ ಮೂಲಕ ನಮ್ಮ ನಾಡಿನ ಕಲೆ ಮತ್ತು ಕಲಾವಿದರ ಉಳಿವಿಗಾಗಿ ಸ್ಥಾಪಿತಗೊಂಡಿರುವ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದ ಅವರು ವ್ಯವಸ್ಥಿತ ರೀತಿಯಲ್ಲಿ ಸಮ್ಮೇಳನವನ್ನ ನಡೆಸಲು ಜಿಲ್ಲೆಯ ಎಲ್ಲ ತಾಲೂಕಿನ ಕಲಾವಿದರು ಕೈ ಜೋಡಿಸಬೇಕೆಂದು ಹೇಳಿದರು.
ಕನಾ೯ಟಕ ರಾಜ್ಯ ಸವ೯ಕಲಾವಿದರ ಒಕ್ಕೂಟ ಅಧ್ಯಕ್ಷ ಹಾಗೂ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನದ ಉಪಾಧ್ಯಕ್ಷ ಶರಣಬಸವಶಾಸ್ತ್ರಿಗಳು ಮಾತನಾಡಿ, ಈ ಸಮ್ಮೇಳನಕ್ಕೆ ರಾಷ್ಟ್ರಮಟ್ಟದ ಕಲಾವಿದರಾದ ಎಂ ವೆಂಕಟೇಶ್ ಕುಮಾರ, ಪಂ.ಬಾಲಚಂದ್ರ ನಾಕೋಡ ಹಾಗೂ ಪಂಡಿತ್ ರವೀಂದ್ರ ಸೋರಗಾಂವಿ. ಅವರನ್ನು ಆವ್ಹಾನಿಸುವುದು ಹಾಗೂ ಜಿಲ್ಲೆಯ ಹಿರಿಯ ಜನಪದ ತತ್ವ-ಪದಗಾರರನ್ನು, ಶ್ರೇಷ್ಠ ವಾದ್ಯ ಕಲಾವಿದರನ್ನು ಹಾಗೂ ಸುಗಮ ಸಂಗೀತ ಕಲಾವಿದರನ್ನು ಸೇರಿಸುವುದು ಮತ್ತು ಹಿರಿಯ ಕಿರಿಯ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗುವುದೆಂದ ಅವರು ಗದಗ ಪುಣ್ಯಾಶ್ರಮದ ಪೂಜ್ಯರಾದ ಕಲ್ಲಯ್ಯ ಅಜ್ಜನವರ ಸಾನಿಧ್ಯದಲ್ಲಿ ಸಮ್ಮೇಳನ ನಡೆಸಲಾಗುವುದೆಂದರು.
ಪ್ರತಿಷ್ಠಾನದ ಮುಖಂಡ ಆನಂದಕುಮಾರ ಕಂಬಳಿಹಾಳ ಗವಾಯಿಗಳು ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರನ್ನು ಕಾರ್ಯಕ್ರಮದ ಉದ್ಘಾಟನೆಗೆ ಆಮಂತ್ರಿಸಲಾಗುವುದು ಮತ್ತು ಜಿಲ್ಲೆಯ ಶಾಸಕ. ಸಚಿವರನ್ನು ಸಾಂಸ್ಕೃತಿಕ ಕ್ಷೇತ್ರದ ಸೇವಾ ನಿರತ ಧುರೀಣರನ್ನ ಆಮಂತ್ರಿಸಲಾಗುವುದೆಂದು ಹೇಳಿದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಲ್ ಶಂಕರ ಅವರು ಸಮ್ಮೇಳನದ ಸಿದ್ದತೆಯೊಂದಿಗೆ ಸದಸ್ಯತ್ವ ಅಭಿಯಾನ ನಡೆಸಲು ತಾವೆಲ್ಲರೂ ಸಜ್ಜಾಗಲು ತಿಳಿಸಿದರು.
ಕನಾ೯ಟಕ ಸಂಗೀತ ಅಕಾಡೆಮಿ ಸದಸ್ಯ ಬಸವರಾಜ ಭಜಂತ್ರಿ ಹಾಗೂ ಹಿರಿಯ ಸಂಗೀತ ಕಲಾವಿದ ಬೀಳಗಿಯ ಬಸವರಾಜ ಭಜಂತ್ರಿ, ಜಲಗೇರಿಯ ಚಿನ್ನಪ್ಪ ಗೌಡ್ರು ಗಿಡ್ಡಪ್ಪಗೋಳ ಹಾಗೂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪವಿತ್ರ ಜಕ್ಕಪ್ಪನವರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೀತಾರಾಣಿ ಚಿಮ್ಮಲ, ಮಹಾಲಿಂಗ ಶಾಸ್ತ್ರಿಗಳು ಹೂಗಾರ, ಬಸವರಾಜ ಸಿಂಧಗಿಮಠ.ಯಲ್ಲಟ್ಟಿಯ ಲಕ್ಕವ್ವ ಕಪರಟ್ಟಿ ಮುಂತಾದವರು ಹಲವು ವಿಚಾರಗಳನ್ನು ಹಂಚಿಕೊಂಡರು.
ವಿಜಯಕುಮಾರ ಹಿರೇಮಠ ಸವ೯ರನ್ನು ಸ್ವಾಗತಿಸಿ ವಂದಿಸಿದರು.

