ಬೆಳಗಾವಿ: ನಗರದ “ಕನ್ನಡ ಭವನ”ದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ನ 108ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಎಸ್ ಪರವಿನಾಯ್ಕರ ಉದ್ಘಾಟಿಸಿ ಮಾತನಾಡಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ನಾಟಕ ಕಲೆ ಅಭಿವೃದ್ಧಿಯಾಗಬೇಕು. ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ಜೀವನ ವೃತ್ತಾಂತ ಸಾರುವ ಬೃಹತ್ ಪ್ರಮಾಣದ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲು, ರಂಗಾಯಣ ಪ್ರಯತ್ನಿಸುತ್ತಿದೆ. ನಾಟಕ ಕಲೆ ಸೇರಿದಂತೆ, ಕನ್ನಡದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಹಿರಿಯ ಸಾಹಿತಿಗಳಾದ ಜಲತ್ಕುಮಾರ ಪುನಜಗೌಡ್ರ ಮಾತನಾಡಿ, ಉತ್ತರ ಕರ್ನಾಟಕದ ಕುರಿತು ಸರಕಾರದ ನಿಲುವು ಇಲ್ಲಿನ ನೆಲ, ಜಲ, ಕಲೆ ಸಾಹಿತ್ಯದ ಕುರಿತು ವಿಶೇಷ ಗಮನ ಹರಿಸುವುದಾಗಿ ಆಗಬೇಕು, ಆ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಪರ ಹೋರಾಟಗಾರರು ಗಮನ ಸೆಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳುತ್ತಾ, ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನದ ಕಾರ್ಯ ವೈಖರಿಗಳನ್ನು ವಿವರಿಸಿದರು.
ಬೆಳಗಾವಿಯ ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ. ಶೈಲಜಾ ಬಿಂಗೆ ಗಡಿಯಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸಗಳಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಶ್ರೀಮತಿ ಗುರುದೇವಿ ಹುಲೆಪ್ಪನವರಮಠ, ನಾಡು-ನುಡಿಗೆ ತನ್ನದೇ ಆದ, ಅಭಿಮಾನದ ಸೆಲೆಯ ಮತ್ತು ನಾಡಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆಯನ್ನು ಸ್ಮರಿಸಿದರು.
ಬೆಳಗಾವಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ‘ಮಕ್ಕಳ ಸಾಹಿತಿ ಶ್ರೀಮತಿ ಅನ್ನಪೂರ್ಣ ಕನೋಜ ಅವರು ಬರೆದ ‘ಮಕ್ಕಳ ಸಾಹಿತ್ಯಕ್ಕೆ ಬೈಲಹೊಂಗಲ ತಾಲ್ಲೂಕಿನ ಕೊಡುಗೆ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕ ಕಸಾಪ ಅಧ್ಯಕ್ಷ ಸುರೇಶ ಹಂಜಿ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಮೋಹನಗೌಡ ಪಾಟೀಲ, ಸಾಹಿತಿಗಳಾದ ಜ್ಯೋತಿ ಬದಾಮಿ, ವಿದ್ಯಾವತಿ ಜನವಾಡೆ, ಚನ್ನಪ್ಪ ಪಾಟೀಲ ಸೇರಿದಂತೆ ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಪ್ರತಿಭಾ ಕಳ್ಳಿಮಠ, ವೀರಭದ್ರ ಅಂಗಡಿ, ಸುನೀಲ ಹಲವಾಯಿ ಸೇರಿದಂತೆ, ಕನ್ನಡ ಅಭಿಮಾನಿಗಳು, ಪರಿಷತ್ತಿನ ಸದಸ್ಯರು, ಹಿರಿಯ ಸಾಹಿತಿಗಳು ಭಾಗವಹಿಸಿದ್ದರು.
ಮೊದಲಿಗೆ ಜಿಲ್ಲಾ ಕಾರ್ಯದರ್ಶಿ ಎಂ.ವೈ.ಮೆಣಸಿನಕಾಯಿ ಸ್ವಾಗತಿಸಿದರು. ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೇಮಾವತಿ ಸೊನೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಭಾರತಿ ಮಠದ ವಂದಿಸಿದರು.
ಆಕಾಶ್ ಅರವಿಂದ ಥಬಾಜ
ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ
ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ, ಬೆಳಗಾವಿ