ಮೂಡಲಗಿ: ಇಂದಿನ ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ಪ್ರತಿಯೊಂದನ್ನು ಪ್ರಶ್ನಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಮಮದಾಪೂರ ಚಿಂತಾಮಣಿ ಪಾವಟೆ ಪ್ರೌಢಶಾಲೆಯ ನಿವೃತ್ತ ಮುಖ್ಯಾದ್ಯಾಪಕ ರವಿ ದೇಮಶೆಟ್ಟಿ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ನಡೆದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪವಾಡ ಬಯಲು ಎಂಬ ಶಿರ್ಷಿಕೆಯಡಿ ಹಲವಾರು ಪ್ರಾತ್ಯಕ್ಷಿಕೆಗಳನ್ನು ಮಾಡುತ್ತಾ ಮಾತನಾಡಿ, ನಮಗೆ ಮಾಡಲು ಅಸಾದ್ಯವಿರುವ, ಅತೀಂದ್ರೀಯ ಅತಿಮಾನುಷ ಶಕ್ತಿಯಿಂದ ನಡೆಯುತ್ತವೆ ಎಂದು ಹೇಳಿಕೊಳ್ಳುವ ಕೆಲವು ಘಟಣೆಗಳು ಪವಾಡ ಎನಿಸಿಕೊಳ್ಳುತ್ತವೆ ಎಂಬುದು ನಮ್ಮ ಸಮಾಜಕ್ಕೆ ಗೊತ್ತಿಲ್ಲ. ಮುಗ್ಧ ಜನರನ್ನು ಶೋಷಿಸಲು ಜಾದುಗಳನ್ನೇ ಪವಾಡಗಳನ್ನಾಗಿ ಬಳಸುತ್ತಿರುವದು ಕಂಡುಬರುತ್ತಿದೆ. ಹಲವರು ದೇವರಲ್ಲಿ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಏಕೆಂದರೆ, ವಿದ್ಯಾರ್ಥಿಗಳಿಗೆ ಜನರಿಗೆ ಇವುಗಳೆಲ್ಲ ಕೈ ಚಳಕದಿಂದ ರಾಸಾಯನಿಕ ದ್ರವಗಳಿಂದ ಚಮತ್ಕಾರಗಳು ಪವಾಡಗಳಾಗಿ ಕಾರ್ಯ ಮಾಡುತ್ತಿವೆ ಎಂಬುದು ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಕೆಲವು ಪ್ರಾತ್ಯಕ್ಷಿಕೆಗಳನ್ನು ತೋರಿಸಿ ಅವುಗಳ ಹಿಂದಿನ ತತ್ವಗಳನ್ನು ತಿಳಿಸಿ ಹಾಗೂ ವೈಜ್ಞಾನಿಕ ಕಾರಣವನ್ನು ತಿಳಿಸುವದರ ಜೊತೆಗೆ ಮೂಢನಂಬಿಕೆಗಳನ್ನು ಹೋಗಲಾಡಿಸುವಲ್ಲಿ ನಮ್ಮ ಪ್ರಯತ್ನ ಮುಂದುವರೆದಿದೆ ಎಂದರು.
ನಂತರ ಪ್ರೌಢಶಾಲಾ ಮಕ್ಕಳಿಗೆ ಸಮ್ಮೋಹಿನಿ ಕಾರ್ಯಕ್ರಮ ಚಟುವಟಿಕೆ ನೀಡಲಾಯಿತು. ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕೀಳರಿಮೆ, ಅಂಜಿಕೆ, ಏಕಾಂಗಿತನ, ಋಣಾತ್ಮಕ ವಿಚಾರಗಳನ್ನು ಹೊರಹಾಕಿ ಭಾವನಾತ್ಮಕವಾಗಿ, ಮಾನಸಿಕವಾಗಿ, ಸದೃಢರಾಗಿ ಆತ್ಮವಿಶ್ವಾಸ ವೃದ್ಧಿಸುವ ಸಲುವಾಗಿ ಏಕಾಗೃತೆ ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತೆಂದು ಹೇಳಿದರು.
ನಂತರ ಪ್ರೌಢ ವಿಭಾಗದ ಸತೀಶ ಬಿ.ಎಸ್. ಅವರು ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಳ್ಳುವಲ್ಲಿ ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢವಿಭಾಗದ ಗುರುಬಳಗ ಅತಿಥಿ ಶಿಕ್ಷಕರು ವಿದ್ಯಾರ್ಥಿಗಳು ಅಡುಗೆ ಸಿಬ್ಬಂಧಿ ಪಾಲ್ಗೊಂಡಿದ್ದರು. ಶಿಕ್ಷಕ ಮಹಾದೇವ ಗೋಮಾಡಿ ನಿರೂಪಿಸಿದರು.

