ಮೂಡಲಗಿ: ‘ವಿದ್ಯಾರ್ಥಿಗಳು ಸೃಜನಶೀಲತೆ, ಪ್ರಾಮಾಣಿಕತೆ, ಸಂಸ್ಕಾರ ರೂಢಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ಗೋಕಾಕದ ಜ್ಞಾನದೀಪ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೊ. ಗಂಗಾಧರ ಮಳಗಿ ಹೇಳಿದರು.
ಮೂಡಲಗಿ ಶೈಕ್ಷಣಿಕ ವಲಯಯದ ಬೆಟಗೇರಿಯ ವಿ.ವಿ. ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಮೌಢ್ಯಗಳಿಂದ ಹೊರಬಂದು ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಡಾ. ರಾಧಾಕೃಷ್ಣನ್, ಲಾಲ್‍ಬಹಾದ್ದೂರ ಶಾಸ್ತ್ರೀ, ಡಾ. ಅಬ್ದುಲ್‍ಕಲಾಂ ಇವರೆಲ್ಲರ ಸಾಧನೆಯು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.
ಅತಿಥಿ ಪ್ರೊ. ಜಿ.ಎಂ. ಪಾಟೀಲ ಮಾತನಾಡಿ ಸಚ್ಚಾರಿತ್ರ್ಯ ಬೆಳವಣಿಗೆಯೇ ಶಿಕ್ಷಣದ ಸ್ಥಂಭ ಮತ್ತು ಮಾನವೀಯತೆಯ ವಿಕಸನಕ್ಕೆ ಶಿಕ್ಷಣ ಕಾರಣವಾಗಿದೆ ಎಂದರು.
ಅತಿಥಿ ಶ್ವೇತಾ ಭರಭರಿ ಮತ್ತು ಪ್ರೊ ಡಿ. ರಾಜೇಶ್ವರಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಕಲಿಕೆಗೆ ಮಹತ್ವವನ್ನು ನೀಡಬೇಕು ಮತ್ತು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಕೊಂಡು ಸಮಾಜಕ್ಕೆ ಭೂಷಣರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ ಮಾತನಾಡಿದರು. ಎಂ.ಎಲ್. ಪೋಳ ವಂದಿಸಿದರು.